
ಹೈದರಾಬಾದ್: ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಪ್ರಯಾಣಿಕರ ದೋಣಿ ಮಗುಚಿ ಇಬ್ಬರು ಮೃತಪಟ್ಟು, ಐವರು ವಿದ್ಯಾರ್ಥಿಗಳು ಕಣ್ಮರೆಯಾಗಿದ್ದಾರೆ ಎನ್ನಲಾಗಿದೆ.
ಸುಮಾರು 40 ಜನ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿಯಲ್ಲಿ ಬಹುತೇಕರು ವಿದ್ಯಾರ್ಥಿಗಳಿದ್ದರು. ಇವರಲ್ಲಿ 33 ಜನರನ್ನು ರಕ್ಷಿಸಲಾಗಿದೆ.
ಮೂಲಗಳ ಪ್ರಕಾರ, ತಲರಿವರಿಪಲೇಮ್ನಿಂದ ಪಶುವುಲಂಕಾಗೆ ಪ್ರಯಾಣಿಸುತ್ತಿದ್ದ ದೋಣಿ ಗೌತಮಿ ನದಿಯ ಬಳಿಯಿದ್ದ ಸೇತುವೆಯ ಕಂಬಕ್ಕೆ ಡಿಕ್ಕಿ ಹೊಡೆದು ತಿರುಗಿ ಮಗುಚಿದೆ.
ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಮತ್ತು ರಾಜ್ಯ ವಿಪತ್ತು ನಿರ್ವಹಣ ತಂಡ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದೆ.
ಸದ್ಯ ರಕ್ಷಿಸಿರುವ ವಿದ್ಯಾರ್ಥಿಗಳು ಹೇಳುವಂತೆ ಅವರಲ್ಲಿ ಕೆಲವರು ತಪ್ಪಿಸಿಕೊಂಡಿದ್ದಾರೆ. ನೀರಿನ ಹರಿವಿನ ವೇಗ ಜಾಸ್ತಿ ಇರುವುದರಿಂದ ಈಜು ಬರುವವರು ಕೂಡ ತೀರವನ್ನು ಸೇರುವುದು ಕಷ್ಟವಾಗಿದೆ ಎನ್ನಲಾಗಿದೆ.
ಗೌತಮಿ ನದಿಯು ಗೋದಾವರಿ ನದಿಯ ಉಪನದಿಯಾಗಿದ್ದು, ಇಲ್ಲಿರುವ ಹಲವಾರು ಗ್ರಾಮಗಳು ಸಣ್ಣ ದ್ವೀಪಗಳಂತಿದ್ದು, ವಿದ್ಯಾರ್ಥಿಗಳು ಕೂಡ ದೋಣಿಗಳನ್ನು ಬಳಸಿಕೊಂಡೇ ಶಾಲೆಯಿಂದ ಹಿಂದಿರುಗುತ್ತಾರೆ.
Comments are closed.