ಕರಾವಳಿ

ಮಂಗಳೂರಿನಲ್ಲಿ ಈದುಲ್ ಫಿತ್ರ್ ವಿಶೇಷ ನಮಾಝ್‌ : ಮುಸ್ಲಿಂ ಬಾಂಧವರಿಂದ ಪರಸ್ಪರ ಈದ್ ಶುಭಾಶಯ ವಿನಿಮಯ

Pinterest LinkedIn Tumblr

ಮಂಗಳೂರು, ಜೂನ್.15: ಮಂಗಳೂರು ಬಾವುಟಗುಡ್ಡೆಯ ಈದ್ಗಾ ಮಸೀದಿಯಲ್ಲಿ ಶುಕ್ರವಾರ ಈದುಲ್ ಫಿತ್ರ್ ವಿಶೇಷ ನಮಾಝ್‌ ನೆರವೇರಿತು. ಈದ್ ವಿಶೇಷ ನಮಾಝ್ ನಿರ್ವಹಿಸಿದ ಮುಸ್ಲಿಂ ಬಾಂಧವರು ಬಳಿಕ ಪರಸ್ಪರ ಈದ್ ಶುಭಾಶಯ ಕೋರಿಕೊಂಡರು.

ಈ ವೇಳೆ ಈದುಲ್ ಫಿತ್ರ್ ಸಂದೇಶ ನೀಡಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಮುಸ್ಲಿಂ ಸಮಾಜ ಹಿಂದೆಯೂ ಹಲವಾರು ಸಮಸ್ಯೆ, ಸವಾಲುಗಳನ್ನು ಎದುರಿಸಿದೆ. ಈಗಲೂ ಎದುರಿಸುತ್ತಿದೆ. ಅವುಗಳನ್ನೆಲ್ಲಾ ಪರೀಕ್ಷೆಯೆಂದು ಪರಿಗಣಿಸಿ ಧನಾತ್ಮಕವಾಗಿ ಎದುರಿಸಬೇಕು. ಯಾವ ಕಾರಣಕ್ಕೂ, ಧಾರ್ಮಿಕ ನಿಯಮ, ದೇಶದ ಕಾನೂನು ಮುರಿಯುವ ಪ್ರಯತ್ನ ಮಾಡಬಾರದು. ಪ್ರೀತಿ, ವಿಶ್ವಾಸ, ಸೇವೆಯಿಂದ ಜನಮನ ಗೆಲ್ಲಬೇಕು. ಕೆಡುಕನ್ನು ಅಳಿಸುವ ಕಾರ್ಯದಲ್ಲಿ ಯಾವುದೇ ರೀತಿಯಲ್ಲಿ ರಾಜಿ ಮಾಡಬಾರದು ಎಂದು ಕಿವಿಮಾತು ಹೇಳಿದರು.

ಒಂದು ತಿಂಗಳ ಕಾಲ ಉಪವಾಸ ಆಚರಣೆ ಜತೆಗೆ ನಿರಂತರ ದೇವರ ಸ್ಮರಣೆ, ದಾನ ಧರ್ಮಾದಿಗಳನ್ನು ಮಾಡಿದ ಮುಸ್ಲಿಮರಿಗೆ ಮುಂದಿನ 11 ತಿಂಗಳು ಶಾಂತಿ, ಸಹನೆಯ ಉತ್ತಮ ಬದುಕು ನಡೆಸಲು ರಮ್ಝಾನ್ ಪ್ರೇರಣೆ ನೀಡಲಿ. ಪ್ರವಾದಿ ಮುಹಮ್ಮದ್ ಅವರ ಆದರ್ಶ ಬದುಕು ಎಲ್ಲರಿಗೂ ಮಾದರಿಯಾಗಲಿ ಎಂದವರು ಹೇಳಿದರು.

ನಗರಾಡಳಿತ ಮತ್ತು ವಸತಿ ಸಚಿವ ಯು.ಟಿ.ಖಾದರ್ ಮಾತನಾಡಿ, ಹಬ್ಬದ ಆಚರಣೆಯ ಮೂಲಕ ನಾವು ನಮ್ಮ ವ್ಯಕ್ತಿತ್ವವನ್ನು ಬದಲಾಯಿಸಿಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಕರಾವಳಿಯಲ್ಲಿ ಆಚರಣೆ ಮಾಡುವ ಪ್ರತಿಯೊಂದು ಹಬ್ಬ ಕೂಡ ಏಕತೆ, ಭಾತೃತ್ವದಿಂದ ಬದುಕು ನಡೆಸಬೇಕು ಎನ್ನುವುದನ್ನು ಸಾರುತ್ತದೆ ಎಂದರು.

ಝೀನತ್ ಬಕ್ಷ್ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ವೈ.ಅಬ್ದುಲ್ಲಾ ಕುಂಞಿ ಈದ್ ಸಂದೇಶ ನೀಡಿದರು. ಬಾವುಟಗುಡ್ಡೆ ಈದ್ಗಾ ಮಸೀದಿಯಲ್ಲಿ ನಮಾಝ್‌ಗೆ ಚಪ್ಪರ ಮೂಲಕ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸರು ಸಂಚಾರ ನಿಯಂತ್ರಿಸಿ ವಿಶೇಷ ಬಂದೋಬಸ್ತ್ ಏರ್ಪಡಿಸಿದ್ದರು. ಸಂತ ಅಲೋಶಿಯಸ್ ಕಾಲೇಜಿನ ಮೈದಾನದಲ್ಲಿ ವಾಹನಗಳ ಪಾರ್ಕಿಂಗ್‌ಗೆ ಜಾಗ ಕೊಟ್ಟು ಸಹಕರಿಸಲಾಗಿತ್ತು.

ಕುದ್ರೊಳಿ ಜಾಮಿಯಾ ಮಸೀದಿಯಲ್ಲಿ ಧರ್ಮ ಗುರು ಮುಫ್ತಿ ಮನ್ನಾನ್ ಸಾಹೇಬ್ ಅವರ ನೇತೃತ್ವದಲ್ಲಿ ನಮಾಝ್, ಪ್ರವಚನ ನಡೆಯಿತು. ಇಲ್ಲಿಗೂ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಭೇಟಿ ನೀಡಿ ಸಮಸ್ತ ಮುಸ್ಲಿಮರಿಗೆ ಹಬ್ಬದ ಶುಭಾಶಯಗಳನ್ನು ಹೇಳಿದರು. ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಕೆ.ಎಸ್.ಮುಹಮ್ಮದ್ ಮಸೂದ್, ಆಡಳಿತ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಮಂಗಳೂರು ವಾಸ್‌ಲೇನ್‌ನ ಮಸ್ಜಿದುಲ್ ಇಹ್ಸಾನ್‌ನಲ್ಲಿ ಧರ್ಮ ಗುರುಗಳಾದ ಮುಹಮ್ಮದ್ ತಯ್ಯಿಬ್ ಉಸ್ತಾದ್ ನೇತೃತ್ವದಲ್ಲಿ ನಮಾಝ್ ಮತ್ತು ಪ್ರವಚನ ನಡೆಯಿತು. ಮಸೀದಿಯ ಇಮಾಮರುಗಳಾದ ಸಲ್ಮಾನ್, ಉಸ್ತಾದ್, ಅಲ್ತಾಫ್, ಉಸ್ತಾದ್‌ಸ ಸಹಿತ ಗಣ್ಯರು ಭಾಗವಹಿಸಿದ್ದರು.

ಹಂಪನಕಟ್ಟೆಯ ಮಸ್ಜಿದ್ ನೂರ್, ಪಂಪ್‌ವೆಲ್‌ನ ತಖ್ವಾ ಮಸ್ಜಿದ್, ನೆಲ್ಲಿಕಾಯಿ ರಸ್ತೆಯ ಇಬ್ರಾಹಿಂ ಖಲೀಲ್, ಬಂದರ್‌ನ ಕಚ್ಚಿ ಮೆಮೋನ್, ಕಂಕನಾಡಿ ಮತ್ತಿತರ ಮಸೀದಿಗಳಲ್ಲಿ ಈದ್ ನಮಾಝ್ ನಡೆಯಿತು.

ವರದಿ ಕೃಪೆ : ವಾಭಾ

Comments are closed.