ಮನೋರಂಜನೆ

ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವಕ್ಕೆ ಚಾಲನೆ ನೀಡಿದ ಕರೀನಾ ಕಪೂರ್‍ ! ಸಿನೆಮಾ ಬಗ್ಗೆ ಹೇಳಿದ್ದೇನು..?

Pinterest LinkedIn Tumblr

ಬೆಂಗಳೂರು: ಸಿನಿಮಾ ಮಾಧ್ಯಮ ಇಡೀ ಜಗತ್ತನ್ನು ಒಂದುಗೂಡಿಸುವ ಮಾಂತ್ರಿಕ ಶಕ್ತಿಯನ್ನು ಹೊಂದಿದೆ ಎಂದು ಬಾಲಿವುಡ್‍ನ ಖ್ಯಾತ ತಾರೆ ಕರೀನಾ ಕಪೂರ್‍ ಅಭಿಪ್ರಾಯಟ್ಟರು.

ವಿಧಾನಸೌಧದ ಮುಂಭಾಗದಲ್ಲಿ ಶನಿವಾರ ನಡೆದ 10ನೇ ‘ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ’ ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರಿನೊಂದಿಗಿನ ತಮ್ಮ ಕುಟುಂಬದ ನಂಟನ್ನು ನೆನಪಿಸಿಕೊಂಡರು.

‘ನನ್ನ ತಾತ ನಕ್ಷತ್ರದ ರೂಪದಲ್ಲಿ ಬೆಂಗಳೂರನ್ನು ಈಗ ನೋಡುತ್ತಿದ್ದಾರೆ. ಅವರು ಬೆಂಗಳೂರನ್ನು ಪ್ರೀತಿಸುತ್ತಿದ್ದರು. ಇಲ್ಲಿ ಅವರ ಅನೇಕ ಸಿನಿಮಾಗಳ ಚಿತ್ರೀಕರಣ ನಡೆದಿದೆ. ಭಾರತೀಯ ಚಿತ್ರೋದ್ಯಮದಲ್ಲಿ ಬೆಂಗಳೂರು ಪ್ರಮುಖ ನಗರ’ ಎಂದು ಅವರು ಹೇಳಿದರು.

ಚಿತ್ರೋತ್ಸವದಲ್ಲಿ ಅತಿಥಿಯಾಗಿ ಭಾಗವಹಿಸಿರುವ ಇರಾನ್‍ ನಟಿ ಫಾತ್ ಮಾ ಮೋಟಮೆಡ್‍ ಆರ್ಯ ಅವರು ಕೂಡ ಸಿನಿಮಾದ ಮಾಂತ್ರಿಕ ಶಕ್ತಿಯ ಬಗ್ಗೆ ಬೆರಗು ವ್ಯಕ್ತಪಡಿಸಿದರು. ‘ಸಿನಿಮಾ ಚಿತ್ರರಸಿಕರನ್ನು ಒಂದು ಕುಟುಂಬವನ್ನಾಗಿ ರೂಪಿಸುತ್ತದೆ. ಎಲ್ಲಿ ಸಿನಿಮಾ ಇರುವುದೋ ಅಲ್ಲಿ ಶಾಂತಿ ಹಾಗೂ ಮಾನವೀಯತೆ ಇರುತ್ತದೆ’ ಎಂದು ಅವರು, ಭಾರತೀಯರ ಸಿನಿಮಾಪ್ರೇಮ ವಿಶ್ವಪ್ರಸಿದ್ಧವಾದುದು ಎಂದರು.

ಬೆಂಗಳೂರಿನ ಅಳಿಯ ಎಂದ ಮೆಹ್ರಾ

‘ರಂಗ್​ದೇ ಬಸಂತಿ’, ‘ಭಾಗ್ ಮಿಲ್ಕಾ ಭಾಗ್’ ಮುಂತಾದ ಸಿನಿಮಾ ನೀಡಿರುವ ಬಾಲಿವುಡ್​ನ ಖ್ಯಾತ ನಿರ್ದೇಶಕ ರಾಕೇಶ್ ಓಂ ಪ್ರಕಾಶ್ ಮೆಹ್ರಾ, ಸಿನಿಮೋತ್ಸವದ ಕೇಂದ್ರಬಿಂದುವಾಗಿದ್ದರು. ಮಾತು ಆರಂಭಿಸುವುದಕ್ಕೂ ಮುನ್ನ ‘ನಾನು ಬೆಂಗಳೂರಿಗೆ ಹೊಸಬನಲ್ಲ. ಯಾಕೆಂದರೆ ನನ್ನ ಪತ್ನಿ ಭಾರತಿ ಬೆಂಗಳೂರಿನವರು. ಹೀಗಾಗಿ ನಾನು ಬೆಂಗಳೂರಿನ ಅಳಿಯ’ ಎಂದು ಸಭಿಕರ ಮೊಗದಲ್ಲಿ ನಗೆ ಉಕ್ಕಿಸಿದರು. ‘ಈ ರೀತಿಯ ಸಿನಿಮೋತ್ಸವಗಳು ನಡೆಯುತ್ತಿರಬೇಕು. ಇಡೀ ಜಗತ್ತಿನ ಬೆಸ್ಟ್ ಸಿನಿಮಾಗಳು, ಅಲ್ಲಿನ ಮೇಕಿಂಗ್, ಕಥೆ ಬರೆಯುವ ಶೈಲಿ ಎಲ್ಲವನ್ನೂ ತಿಳಿದುಕೊಳ್ಳಲು ಇದೊಂದು ಬೃಹತ್ ವೇದಿಕೆ’ ಎಂದರು.

ಅಕಾಡೆಮಿ ಪ್ರಶಸ್ತಿ (ಆಸ್ಕರ್‍) ಪುರಸ್ಕೃತ ನಿರ್ಮಾಪಕ ಮಾರ್ಕ್ ಭಾಷೆಟ್‍, ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತೊದಲುಗನ್ನಡದ ಸ್ವಾಗತ: ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳನ್ನು ಸ್ವಾಗತಿಸಿದ ವಾರ್ತಾ ಇಲಾಖೆ ಕಾರ್ಯದರ್ಶಿ ಪಂಕಜ್‍ಕುಮಾರ್‍ ಪಾಂಡೆ ತಮ್ಮ ತೊದಲು ಗನ್ನಡದ ಮೂಲಕ ನೋಡುಗರ ಗಮನಸೆಳೆದರು. ಇದಕ್ಕೆ ವ್ಯತಿರಿಕ್ತವಾಗಿ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್‍.ವಿ. ರಾಜೇಂದ್ರಸಿಂಗ್‍ ಬಾಬು ಅಸ್ಖಲಿತ ಇಂಗ್ಲಿಷ್‍ನಲ್ಲಿಯೇ ಹೆಚ್ಚಾಗಿ ಮಾತನಾಡಿದರು.

ಮುಖ್ಯಮಂತ್ರಿ ಗೈರು: ಸಿನಿಮೋತ್ಸವ ಉದ್ಘಾಟಿಸಬೇಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಾರಾ ಆಕರ್ಷಣೆ ಯಾಗಿದ್ದ ಶಿವರಾಜ್‍ ಕುಮಾರ್‍, ಸುದೀಪ್‍ ಹಾಗೂ ದರ್ಶನ್‍ ಸೇರಿದಂತೆ ಆಹ್ವಾನ ಪತ್ರಿಕೆಯಲ್ಲಿದ್ದ ಅನೇಕ ಮಂದಿ ಕಾರ್ಯಕ್ರಮದಲ್ಲಿ ಹಾಜರಾಗಿರಲಿಲ್ಲ. ವಿಧಾನ ಪರಿಷತ್‍ ಸಭಾಪತಿ ಡಿ.ಎಚ್‍. ಶಂಕರಮೂರ್ತಿ ಹಾಗೂ ಸಚಿವರಾದ ಆರ್. ರೋಷನ್‍ಬೇಗ್, ರೇವಣ್ಣ, ಬಸವರಾಜ ಹೊರಟ್ಟಿ, ಬಿಬಿಎಂಪಿ ಮೇಯರ್ ಸಂಪತ್‍ರಾಜ್‍ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಮುಖರು.

ಕಾರ್ಯಕ್ರಮಕ್ಕೆ ಮುನ್ನ ಮಾಧುರಿ ಹಾಗೂ ಮಯೂರಿ ಉಪಾಧ್ಯ ಅವರು ಸಂಯೋಜಿಸಿದ್ದ ಹಲವು ನೃತ್ಯಪ್ರಕಾರಗಳ ಕೊಲಾಜ್‍ ನೋಡುಗರ ಮನಸೂರೆಗೊಂಡಿತು.

ಮಾ. 6ರಂದು ಚಿತ್ರನಗರಿಗೆ ಶಿಲಾನ್ಯಾಸ

ಮೈಸೂರಿನ ಸಮೀಪದಲ್ಲಿ ನಿರ್ಮಿಸಲಾಗುತ್ತಿರುವ ಚಿತ್ರನಗರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 6ರಂದು ಶಿಲಾನ್ಯಾಸ ನೆರವೇರಿಸುವರು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‍.ವಿ. ರಾಜೇಂದ್ರಸಿಂಗ್‍ ಬಾಬು ಹೇಳಿದರು.

ಸರ್ಕಾರದ ಸಿನಿಮಾಪರ ನಿಲುವಿಗೆ ಕೃತಜ್ಞತೆ ಸಲ್ಲಿಸಿದ ಅವರು, ಕಾದಂಬರಿ ಆಧಾರಿತ ಚಿತ್ರಗಳಿಗೆ ₹25 ಲಕ್ಷ ನೀಡಲು ಸರ್ಕಾರ ಒಪ್ಪಿಕೊಂಡಿದ್ದು, ಇದರ ಅನುಕೂಲವನ್ನು ಚಿತ್ರರಂಗ ಬಳಸಿಕೊಳ್ಳಬೇಕು ಎಂದರು.

ಗಣ್ಯರ ಗೈರು

ಗಣ್ಯರ ಗೈರಿನಲ್ಲಿಯೇ 10ನೇ ಸಿನಿಮೋತ್ಸವಕ್ಕೆ ಚಾಲನೆ ದೊರಕಿತು. ಸಿಎಂ ಸಿದ್ದರಾಮಯ್ಯ ಅವರಿಂದ ಹಿಡಿದು, ಶಿವರಾಜ್​ಕುಮಾರ್, ಸುದೀಪ್, ದರ್ಶನ್ ಗೈರು ಎದ್ದು ಕಾಣುತ್ತಿತ್ತು. ಇನ್ನುಳಿದಂತೆ ಚಿತ್ರರಂಗದ ಬಹುತೇಕ ಹಿರಿ-ಕಿರಿ ಕಲಾವಿದರ ದಂಡು ಅದ್ದೂರಿ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.

ಚಿತ್ರೋತ್ಸವದಲ್ಲಿ ಏಷ್ಯನ್‌ ಸಿನಿಮಾಗಳ ವಿಭಾಗದಲ್ಲಿ 13 ಚಿತ್ರಗಳು, ಇಂಡಿಯನ್‌ ಸಿನಿಮಾ ವಿಭಾಗದಲ್ಲಿ 14 ಚಿತ್ರಗಳು, ಕನ್ನಡ ಸಿನಿಮಾ ವಿಭಾಗದಲ್ಲಿ ತುಳು ಭಾಷೆಯ ಚಿತ್ರ ಸೇರಿ 12 ಚಿತ್ರಗಳು ಮತ್ತು ಕನ್ನಡ ಮನರಂಜನೆ ಚಿತ್ರ ವಿಭಾಗದಲ್ಲಿ 8 ಚಿತ್ರಗಳು ಪ್ರದರ್ಶನವಾಗಲಿವೆ. ಕನ್ನಡ ಸಿನಿಮಾ ವಿಭಾಗದಲ್ಲಿ ಈ ಬಾರಿ, ಅಲ್ಲಮ ಬೇಟಿ,ಡಾ.ಸುಕನ್ಯ,ಹೆಬ್ಬೆಟ್‌ ರಾಮಕ್ಕ, ಮಾರ್ಚ್‌ 22, ಮೂಕಹಕ್ಕಿ, ಮೂಕನಾಯಕ, ಮೂಡಲ ಸೀಮೆಯಲ್ಲಿ ನೀರು ತಂದವರು, ನೇಮೊದ ಬೂಳ್ಯ (ತುಳು), ರಿಸರ್ವೇಷನ್‌ ಮತ್ತು ಶುದ್ಧಿ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಭರ್ಜರಿ, ಚಮಕ್‌, ಕಾಲೇಜ್‌ ಕುಮಾರ್‌, ಹೆಬ್ಬುಲಿ, ಒಂದು ಮೊಟ್ಟೆಯ ಕಥೆ, ಮಫ್ತಿ, ರಾಜಕುಮಾರ ಮತ್ತು ತಾರಕ್‌ ಚಿತ್ರಗಳು ಜನಪ್ರಿಯ ಮನರಂಜನೆ ಚಿತ್ರಗಳ ವಿಭಾಗದಲ್ಲಿ ಪ್ರದರ್ಶನಗೊಳ್ಳುತ್ತಿವೆ.

ಈ ಚಲನಚಿತ್ರೋತ್ಸವದಲ್ಲಿ ಆಯ್ಕೆಗೊಂಡು ಪ್ರದರ್ಶನ ಕಾಣಲಿರುವ ಮಾರ್ಚ್ 22 ಸಿನೆಮಾವನ್ನು ( ACME) ಮೂವೀಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಬ್ಯಾನರಿನಡಿಯಲ್ಲಿ ಮಂಗಳೂರು ಮೂಲದ ದುಬೈಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಹಾಗು ಅವರ ಧರ್ಮ ಪತ್ನಿ ಶರ್ಮಿಳಾ ಶೇರಿಗಾರ್ ನಿರ್ಮಿಸಿದ್ದು, ಹಿರಿಯ ನಿರ್ದೇಶಕ ಕೂಡ್ಲು ರಾಮಕೃಷ್ಣ ನಿರ್ದೇಶಿಸಿದ್ದಾರೆ.

Comments are closed.