ಕರಾವಳಿ

ಫೆಬ್ರವರಿಯಲ್ಲಿ ಮಂಗಳೂರಿನಲ್ಲಿ ಸಾಮರಸ್ಯಕ್ಕಾಗಿ ನಡಿಗೆ – ಮತೀಯ ಹಿಂಸೆಗಳಿಗೆ ಅವಕಾಶ ನೀಡುವುದಿಲ್ಲ : ಎಚ್.ಡಿ.ದೇವೇಗೌಡ

Pinterest LinkedIn Tumblr

ಮಂಗಳೂರು, ಜನವರಿ.22: ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿದ.ಕ. ಜಿಲ್ಲೆಯಲ್ಲಿ ಮಾತ್ರವಲ್ಲದೆ, ಇಡೀ ರಾಜ್ಯದಲ್ಲಿ ಮತೀಯ ಹಿಂಸೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ತಿಳಿಸಿದ್ದಾರೆ.

ಸೋಮವಾರ ನಗರದ ಸರ್ಕ್ಯುಟ್ ಹೌಸ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಕೆಲ ತಿಂಗಳುಗಳಿಂದೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಸಾಮರಸ್ಯಕ್ಕಾಗಿ ನಡಿಗೆಯನ್ನು ಫೆಬ್ರವರಿ ಎರಡನೇ ವಾರದಲ್ಲಿ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ಈ ಹಿಂದೆ ಜೆಡಿಎಸ್ ವತಿಯಿಂದ ರ್‍ಯಾಲಿ ನಡೆಸಲು ಮುಂದಾದಾಗ ನಗರದಲ್ಲಿ ಸೆಕ್ಷನ್ ಹಾಕಲಾಗಿತ್ತು. ಹಾಗಾಗಿ ರ್‍ಯಾಲಿಯನ್ನು ಮುಂದೂಡಬೇಕಾಯಿತು. ಪಕ್ಷಾತೀತವಾಗಿ, ಧರ್ಮಗುರುಗಳ ಉಪಸ್ಥಿತಿಯಲ್ಲಿ ನಗರದ ಮಹಾತ್ಮ ಗಾಂಧಿ ವೃತ್ತದಿಂದ ನೆಹರೂ ಮೈದಾನವರೆಗೆ ಸುಮಾರು 2 ಕಿ.ಮೀ.ನ ರ್‍ಯಾಲಿಯನ್ನು ನಡೆಸಲು ಉದ್ದೇಶಿಸಲಾಗಿದೆ. ಸಾಮರಸ್ಯಕ್ಕಾಗಿ ಹಮ್ಮಿಕೊಂಡಿರುವ ಈ ನಡಿಗೆ ಜಿಲ್ಲೆಯ ಶಾಂತಿಪ್ರಿಯ ಜನರು ಪಾಲ್ಗೊಳ್ಳಬೇಕಾಗಿ ಅವರು ಮನವಿ ಮಾಡಿದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಶಕ್ತಿ ಕುಂದಿದೆ ಎಂಬುದು ಅವರ ಹೇಳಿಕೆಗಳಿಂದಲೇ ಸ್ಪಷ್ಟವಾಗುತ್ತಿದೆ. ಈ ಹಿಂದಿನಂತೆ ಬಹುಮತದೊಂದಿಗೆ ಗೆದ್ದು ಅಧಿಕಾರ ನಡೆಸುತ್ತೇನೆ ಎಂಬ ರೋಷ ಈಗ ಅವರಲ್ಲಿಲ್ಲ. ಕಾಂಗ್ರೆಸ್ ಶಕ್ತಿ ಕುಂದುತ್ತಿರುವುದು ಅವರಿಗೂ ಮನವರಿಕೆಯಾಗಿದೆ. ಪ್ರತಿ ಜಿಲ್ಲೆಯಲ್ಲಿ ಜೆಡಿಎಸ್ ಶಕ್ತಿಯಿದೆ. ಕರಾವಳಿಯಲ್ಲೂ ಈ ಹಿಂದೆ ನಾವು ಗೆಲುವು ಸಾಧಿಸಿದ್ದೆವು. ಈ ಬಾರಿಯೂ ಗೆಲುವಿಗೆ ವಿಶೇಷ ಒತ್ತು ನೀಡಿದ್ದೇವೆ.

ಮುಂಬರುವ ಚುನಾವಣೆಯಲ್ಲಿ ರಾಜ್ಯದ 324 ಕ್ಷೇತ್ರಗಳಲ್ಲಿಯೂ ಜೆಡಿಎಸ್ನ ಅಭ್ಯರ್ಥಿಗಳು ಸ್ಪರ್ಧಿಸಲಿದ್ದು,ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಫೆಬ್ರವರಿ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ.ಕೆಲವು ಕಡೆ ಕಮ್ಯೂನಿಸ್ಟ್ ಪಕ್ಷದ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಅವರಿಗೆ ಸೀಟು ಬಿಟ್ಟುಕೊಡಲಾಗುವುದು ಎಂದು ದೇವೇಗೌಡ ಹೇಳಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಆಡಳಿತ ನಡೆಸುವಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವ ಇರಾದೆ ಇದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ, 2004ರಲ್ಲಿ ಕಾಂಗ್ರೆಸ್ಗೆ ಬೆಂಬಲ ನೀಡಿ ಬೆರಳು ಸುಟ್ಟುಕೊಂಡಿದ್ದೇನೆ ಎಂದು ಹೇಳುವ ಮೂಲಕ ಮಾಜಿ ಪ್ರಧಾನಿ ದೇವೇಗೌಡರು ಮುಂದಿನ ಚುನಾವಣೆಯಲ್ಲಿ ಮೈತ್ರಿಯ ಪ್ರಸ್ತಾಪವನ್ನು ತಳ್ಳಿ ಹಾಕಿದರು.

ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಬಿ.ಎಂ. ಫಾರೂಕ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರವೂಫ್ ಪುತ್ತಿಗೆ, ಯುವ ಜೆಡಿಎಸ್ ಅಧ್ಯಕ್ಷ ರಮೇಶ್ ಗೌಡ, ಜಿಲ್ಲಾ ಅಧ್ಯಕ್ಷ ಮುಹಮ್ಮದ್ ಕುಂಞಿ, ಎಂ.ಬಿ. ಸದಾಶಿವ, ಅಕ್ಷಿತ್ ಸುವರ್ಣ , ರಮೀಝಾ, ವಸಂತ ಪೂಜಾರಿ, ಎಂ.ಕೆ.ಖಾದರ್, ಹೈದರ್ ಪರ್ತಿಪ್ಪಾಡಿ, ಮುಲ್ಕಿ ನೂರ್ ಮುಹಮ್ಮದ್, ಇಕ್ಬಾಲ್ ಮುಲ್ಕಿ, ಸುಮತಿ ಹೆಗ್ಡೆ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

Comments are closed.