
ದಕ್ಷಿಣ ಆಫ್ರಿಕಾ: ಒಂದೇ ಓವರ್ನಲ್ಲಿ 37 ರನ್ ಬಾರಿಸುವುದರೊಂದಿಗೆ ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಜೆಪಿ ಡುಮಿನಿ ಅವರು ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಶುಕ್ರವಾರ ನಡೆದ ದೇಶಿ ಪಂದ್ಯಾವಳಿಯ ಲೀಸ್ಟ್ ಎ ಪಂದ್ಯದಲ್ಲಿ ಕೇಪ್ ಕೋಬ್ರಾಸ್ ಪರ ಆಡಿದ ಡುಮಿನಿ ವಿಕೆಬಿ ನೈಟ್ಸ್ ತಂಡದ ವಿರುದ್ಧ ಈ ದಾಖಲೆಯನ್ನು ನಿರ್ಮಿಸಿದರು.
ನೈಟ್ಸ್ ತಂಡ ನೀಡಿದ ಗುರಿಯನ್ನು ಬೆನ್ನತ್ತಿದ್ದ ಡುಮಿನಿ ಅವರು ಲೆಗ್ ಸ್ಪಿನ್ನರ್ ಎಡ್ಡಿ ಲೀ ಎಸೆತದ 36ನೇ ಓವರ್ನಲ್ಲಿ 37 ರನ್ ಬಾರಿಸುವ ಮೂಲಕ ದಕ್ಷಿಣ ಆಫ್ರಿಕಾದ ಲೀಸ್ಟ್ ಎ ಕ್ರಿಕೆಟ್ನಲ್ಲಿ ದಾಖಲೆ ನಿರ್ಮಿಸಿದರು.
ಮೊದಲ ನಾಲ್ಕು ಎಸೆತವನ್ನು ಸಿಕ್ಸರ್ ಬಾರಿಸಿದ ಡುಮಿನಿ ಐದನೇ ಎಸೆತದಲ್ಲಿ ಎರಡು ರನ್ ಗಳಿಸಿದರು. ಆರನೇ ಎಸೆತ ನೋ ಬಾಲ್ ಆದ ಪರಿಣಾಮ ಡುಮಿನಿ ಅವರು ನಾಲ್ಕು ಪ್ಲಸ್ ಒಂದು ರನ್ ಬೋನಸ್ ಪಡೆದರು. ನೋ ಬಾಲ್ ಆದ್ದರಿಂದ ಫ್ರೀ ಹಿಟ್ ಎಸೆತದಲ್ಲೂ ಸಿಕ್ಸರ್ ಬಾರಿಸುವ ಮೂಲಕ ಒಂದೇ ಓವರ್ನಲ್ಲಿ 37 ರನ್ ಗಳಿಸುವುದರೊಂದಿಗೆ ಇತಿಹಾಸ ಬರೆದರು.
ಈ ಪಂದ್ಯದಲ್ಲಿ ಡುಮಿನಿ ತಂಡ ಕೇಪ್ ಕೋಬ್ರಾಸ್, ನೈಟ್ಸ್ ತಂಡದ ವಿರುದ್ಧ ಅಮೋಘ ಗೆಲುವು ಸಾಧಿಸಿತು. ಡುಮಿನಿ ಕೇವಲ 37 ಎಸೆತದಲ್ಲಿ 70 ರನ್ ಬಾರಿಸಿ ಮಿಂಚಿದರು.
ಅಕ್ಟೋಬರ್, 2013 ರಂದು ನಡೆದ ಢಾಕಾ ಪ್ರೀಮಿಯರ್ ಲೀಗ್ನಲ್ಲಿ ಜಿಂಬಾಬ್ವೆ ತಂಡದ ಎಲ್ಟನ್ ಚಿಗುಂಬರ ಅವರು ಬಾಂಗ್ಲಾದೇಶದ ಅಲಾಹುದ್ದೀನ್ ಬಾಬು ಓವರ್ನಲ್ಲಿ 39 ರನ್ ಗಳಿಸಿ ದಾಖಲೆ ನಿರ್ಮಿಸಿದ್ದಾರೆ.
Comments are closed.