ಮನೋರಂಜನೆ

ಪ್ರಭಾಸ್‌ ನನ್ನ ಸಹೋದರನಲ್ಲ: ಅನುಷ್ಕಾ ಶೆಟ್ಟಿ

Pinterest LinkedIn Tumblr


ರಾಜಮೌಳಿ ನಿರ್ದೇಶನದ ‘ಬಾಹುಬಲಿ-2’ ಚಿತ್ರ ಬಿಡುಗಡೆಯಾಗಿದ್ದೇ ತಡ ಪ್ರಭಾಸ್‌-ಅನುಷ್ಕಾ ಶೆಟ್ಟಿ ಕುರಿತಾದ ಲವ್‌ ಗಾಸಿಪ್‌ಗಳು ಹೆಚ್ಚಾಗತೊಡಗಿದವು. ಟಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿದ್ದ ಅಂತೆ-ಕಂತೆಗಳಿಗೆ ಅನುಷ್ಕಾ ಮತ್ತು ಪ್ರಭಾಸ್‌ ತಮ್ಮದೇ ಆದ ರೀತಿಯಲ್ಲಿ ತೆರೆ ಎಳೆದು, ‘ ನಮ್ಮ ನಡುವೆ ಅಂತಹದ್ದೇನು ಇಲ್ಲ’ ಎಂದು ಸ್ಪಷ್ಟೀಕರಣ ನೀಡಿದರು.

ಈ ಸುದ್ದಿಗಳು ತಣ್ಣಗಾದ ಬಳಿಕ ಪ್ರಭಾಸ್‌ ಹುಟ್ಟುಹಬ್ಬಕ್ಕೆ ಅನುಷ್ಕಾ ನೀಡಿದ ಗಿಫ್ಟ್‌ ವಿಚಾರ ಹಾಗೂ ಅನುಷ್ಕಾ ಜನ್ಮದಿನದಂದು ಬಾಹುಬಲಿ ನೀಡಿದ ಉಡುಗೊರೆ ಸುದ್ದಿಗಳು ಇವರಿಬ್ಬರ ಕುರಿತು ಮತ್ತಷ್ಟು ಅನುಮಾನಗಳನ್ನು ಹುಟ್ಟುಹಾಕಿದವು. ಅನುಷ್ಕಾ ಅಭಿನಯದ ‘ಭಾಗಮತಿ’ ಚಿತ್ರದ ಪೋಸ್ಟರ್‌ ಬಿಡುಗಡೆಯಾದ ಸಂದರ್ಭದಲ್ಲಿ ಪ್ರಭಾಸ್‌ ‘ಸ್ವೀಟಿ’ ಎಂದು ಕಾಮೆಂಟ್‌ ಮಾಡಿದ್ದು ಅವರ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿ ತಂದಿತ್ತು. ಇದಾದ ನಂತರ ಅನುಷ್ಕಾ-ಪ್ರಭಾಸ್‌ ರಿಯಲ್‌ ಕೆಮಿಸ್ಟ್ರಿ ಬಗ್ಗೆ ಗುಸುಗುಸು ಹೆಚ್ಚಾಯಿತು.

ಈ ವರ್ಷ ಪ್ರಭಾಸ್‌-ಅನುಷ್ಕಾ ಹಸೆಮಣೆ ಏರಲಿದ್ದಾರೆ ಎಂಬ ವದಂತಿಗೆ ಪ್ರತಿಕ್ರಿಯಿಸಿದ ಪ್ರಭಾಸ್‌, ‘ಅನುಷ್ಕಾ ನನ್ನ ಉತ್ತಮ ಸ್ನೇಹಿತರಲ್ಲಿ ಒಬ್ಬರು’ ಎಂದು ಹೇಳಿ ತಣ್ಣಗಾದರು ಡಾರ್ಲಿಂಗ್‌ ಪ್ರಭಾಸ್‌. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅನುಷ್ಕಾ ಶೆಟ್ಟಿ ಸಹ ಮೌನ ಮುರಿದಿದ್ದಾರೆ.

‘ಜನರು ಆಗಾಗ ನನ್ನ ಮದುವೆ ಬಗ್ಗೆ ಕೇಳುತ್ತಾರೆ. ಆದರೆ ನಾನು ಮದುವೆ ಬಗ್ಗೆ ಯೋಚಿಸುವುದನ್ನು ನಿಲ್ಲಿಸಿದ್ದೇನೆ. ನೀವೆ ನನಗೊಬ್ಬ ವರನನ್ನು ಹುಡುಕಿಕೊಡಬಹುದು. ಪ್ರಭಾಸ್‌ ಹಾಗೂ ನಾನು ಒಳ್ಳೆಯ ಸ್ನೇಹಿತರಷ್ಟೇ. ಆದರೆ ಅವರನ್ನು ಸಹೋದರ ಎಂದು ನಾನು ಕರೆಯುವುದಿಲ್ಲ. ನಮ್ಮೆಲ್ಲ ಪುರುಷ ಸ್ನೇಹಿತರನ್ನು ಸಹೋದರರೆಂದು ನಾವು ಪರಿಗಣಿಸುತ್ತೇವಾ?’ ಎಂದು ಹರಿದಾಡುತ್ತಿರುವ ಗಾಸಿಪ್‌ಗಳಿಗೆ ಗೂಗ್ಲಿ ಎಸೆಯಲು ಪ್ರಯತ್ನಿಸಿದ್ದಾರೆ ಅನುಷ್ಕಾ.

Comments are closed.