
ಮಂಗಳೂರು, ಜನವರಿ 10: ಜನವರಿ 3ರಂದು ರಾತ್ರಿ ನಗರದ ಕೊಟ್ಟಾರ ಬಳಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ರವಿವಾರ ಆಸ್ಪತ್ರೆಯಲ್ಲಿ ಮೃತಪಟ್ಟ ಅಬ್ದುಲ್ ಬಶೀರ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರೋಪಿಗಳನ್ನು ಬಂಧಿಸಲಾಗಿದ್ದು, ಇದೀಗ ಆರೋಪಿಗಳು ಕೊಲೆ ಮಾಡಲು ಉಪಯೋಗಿಸಿದ್ದ ಆಯುಧಗಳಿಗಾಗಿ ಪೊಲೀಸರು ನೇತ್ರಾವತಿ ನದಿಯಲ್ಲಿ ಹುಡುಕಾಟ ನಡೆಸಿದ್ದಾರೆ.
ಪೊಲೀಸರ ವಿಚಾರಣೆ ವೇಳೆ ಬಶೀರ್ ಮೇಲೆ ಹಲ್ಲೆ ನಡೆಸಿದ ಬಳಿಕ ಮಾರಕಾಸ್ತ್ರಗಳನ್ನು ನೇತ್ರಾವತಿ ಸೇತುವೆ ಬಳಿ ನದಿಗೆ ಎಸೆದಿರುವುದಾಗಿ ಆರೋಪಿಗಳು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಲೆ ಮಾಡಲು ಬಳಸಿದ್ದ ಮಾರಕಾಸ್ತ್ರಗಳ ಪತ್ತೆಗಾಗಿ ಸಿಸಿಆರ್ ಬಿ ಎಸಿಪಿ ವೆಲೆಂಟೈನ್ ಡಿಸೋಜ ಅವರ ನೇತೃತ್ವದ ಪೊಲೀಸರ ತಂಡ ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ತೊಕ್ಕೊಟ್ಟು ಸಮೀಪದ ನೇತ್ರಾವತಿ ನದಿಯಲ್ಲಿ ಶೋಧ ನಡೆಸಿದೆ.
ಬಂಧಿತ ಆರೋಪಿಗಳಾದ ಪಿ.ಕೆ.ಶ್ರೀಜಿತ್, ಧನುಷ್ ಪೂಜಾರಿ, ಕಿಶನ್ ಪೂಜಾರಿ ಮತ್ತು ಸಂದೇಶ್ ಕೋಟ್ಯಾನ್ ರನ್ನು ಸ್ಥಳಕ್ಕೆ ಕರೆದೊಯ್ದಿರುವ ಸಿಸಿಆರ್ ಬಿ ಎಸಿಪಿ ವೆಲೆಂಟೈನ್ ಡಿಸೋಜ ನೇತೃತ್ವದ ತನಿಖಾ ತಂಡ ಶೋಧ ಕಾರ್ಯ ಆರಂಭಿಸಿದೆ. ಮುಳುಗು ತಜ್ಞರು ನದಿಯಲ್ಲಿ ತಲವಾರುಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಮುಂದಿನ ಬೆಳವಣಿಗೆಗಳ ಬಗ್ಗೆ ಹೆಚ್ಚಿನ ವಿವರ ಇನ್ನಷ್ಟೇ ಪೊಲೀಸರ ಮಾಹಿತಿಯಿಂದ ತಿಳಿದು ಬರಬೇಕಿದೆ.
Comments are closed.