ಕರಾವಳಿ

ದೀಪಕ್‌ ರಾವ್‌ ಹತ್ಯೆ ಹಿನ್ನೆಲೆ : ಸುರತ್ಕಲ್ ಪರಿಸರದಲ್ಲಿ ಅಘೋಷಿತ ಬಂದ್ – ಪೊಲೀಸರಿಂದ ಬಿಗಿ ಬಂದೋಬಸ್ತ್

Pinterest LinkedIn Tumblr

ಮಂಗಳೂರು, ಜನವರಿ.04: ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ಬುಧವಾರ ಹಿಂದೂ ಪರ ಸಂಘಟನೆ ಕಾರ್ಯಕರ್ತ ದೀಪಕ್‌ ರಾವ್‌ ಎಂಬವರನ್ನು‌ ದುಷ್ಕರ್ಮಿಗಳು ಅಮಾನುಷವಾಗಿ ಕೊಲೆ ಮಾಡಿರುವ ಘಟನೆಗೆ ಸಂಬಂಧಿಸಿ ಸುರತ್ಕಲ್ ಪೇಟೆಯಲ್ಲಿ ಬುಧವಾರ ಸಂಜೆಯಿಂದಲೇ ಅಂಗಡಿಗಳು ಬಂದ್ ಮಾಡಲಾಗಿದೆ. ಪರಿಸರದಲ್ಲಿ ಅಘೋಷಿತ ಬಂದ್ ಸೃಷ್ಟಿಯಾಗಿದೆ. ಇದೇ ವೇಳೆ ಕಿಡಿಗೇಡಿಗಳು ಎರಡು ಬಸ್ಸುಗಳಿಗೆ ಕಲ್ಲೆಸೆದಿದ್ದಾರೆ.

ಕೊಲೆಯ ಬಳಿಕ ಕಾಟಿಪಳ್ಳ, ಕೃಷ್ಣಾಪುರ, ಚೊಕ್ಕಬೆಟ್ಟು, ಸುರತ್ಕಲ್ ಪೇಟೆಯಲ್ಲಿ ಜನ ಸಂಚಾರ ವಿರಳವಾಗಿದ್ದು, ಅಘೋಷಿತ ಬಂದ್ ಸೃಷ್ಟಿಯಾಗಿದೆ. ಸಂಜೆ ವೇಳೆಗೆ ಸುರತ್ಕಲ್ ಪೇಟೆಯಲ್ಲಿ ಕೆಲವರು ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಬಂದ್ ಮಾಡಿ ಮನೆಯತ್ತ ಮುಖ ಮಾಡಿದರೆ, ಈ ನಡುವೆ ಕಾಟಿಪಳ್ಳ, ಕೃಷ್ಣಾಪುರ, ಚೊಕ್ಕಬೆಟ್ಟು ಹಾಗೂ ಸುರತ್ಕಲ್ ಪರಿಸರದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಕಾನ ಹಾಗೂ ಸೂರಿಂಜೆಯಲ್ಲಿ ಕಿಡಿಗೇಡಿಗಳು ಎರಡು ಬಸ್ಸುಗಳಿಗೆ ಕಲ್ಲು ಎಸೆದು ಹಾನಿ ಮಾಡಿದ್ದಾರೆ.

ಗುರುವಾರ ಕೂಡ ಮುಂದುವರಿದ ಬಂದ್..

ಕಾಟಿಪಳ್ಳದಲ್ಲಿ ಬುಧವಾರ ನಡೆದ ಯುವಕ ದೀಪಕ್ ರಾವ್ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಸುರತ್ಕಲ್, ಕಾಟಿಪಳ್ಳದಲ್ಲಿ ಗುರುವಾರ ಕೂಡ ಬಂದ್ ವಾತಾವರಣ ನೆಲೆಸಿದೆ.ಘಟನೆಯನ್ನು ಖಂಡಿಸಿ ಹಿಂದೂ ಪರ ಸಂಘಟನೆಗಳು ಬಂದ್ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಪರಿಸರದಲ್ಲಿ ಎಲ್ಲಾ ಅಂಗಡಿಮುಂಗಟ್ಟುಗಳು ಮುಚ್ಚಿವೆ. ಸುರತ್ಕಲ್‌ ಪರಿಸರದಲ್ಲಿ ಅಘೋಷಿತ ಬಂದ್‌ ವಾತಾವರಣ ನಿರ್ಮಾಣವಾಗಿದ್ದು,ರಸ್ತೆಗಳಲ್ಲಿ ವಾಹನ ಸಂಚಾರ ಸಾಕಷ್ಟು ವಿರಳವಾಗಿದೆ.

ವ್ಯಾಪಕ ಪೊಲೀಸ್‌ ಬಂದೋಬಸ್ತ್:

ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಸುರತ್ಕಲ್‌ ಪರಿಸರದಲ್ಲಿ ವ್ಯಾಪಕ ಪೊಲೀಸ್‌ ಬಂದೋಬಸ್ತ್ ಕೈಗೊಳ್ಳಲಾಗಿದೆ, ಮುನ್ನೇಚ್ಚರಿಕೆ ಕ್ರಮವಾಗಿ ಮಂಗಳೂರು ಕಮಿಷನರೇಟ್‌ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಜಾರಿ ಮಾಡಲಾಗಿದೆ. ಕಮಿಷನರೇಟ್ ವ್ಯಾಪ್ತಿಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಹೆಚ್ಚುವರಿ ಪಡೆಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಸುರತ್ಕಲ್, ಕಾಟಿಪಳ್ಳದಲ್ಲಿ 500ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ.

Comments are closed.