
ಮಂಗಳೂರು ಡಿಸೆಂಬರ್ 15 :ಕರಾವಳಿ ಉತ್ಸವ ಮೆರವಣಿಗೆ ಸಮಿತಿ ಸಭೆಯು ಮಂಗಳೂರು ಉಪ ಸಹಾಯಕ ಆಯುಕ್ತ ರೇಣುಕಾಪ್ರಸಾದ್ ಅಧ್ಯಕ್ಷತೆಯಲ್ಲಿ ಇಂದು ಮಿನಿ ವಿಧಾನಸೌಧ ಕಚೇರಿ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಕರಾವಳಿ ಉತ್ಸವದ ಮೆರವಣಿಗೆ ಕುರಿತು ಪೂರ್ವಭಾವಿಯಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.

ಕರಾವಳಿ ಉತ್ಸವದ ಮೆರವಣಿಗೆಯಲ್ಲಿ ಸುಮಾರು 15000 ಕ್ಕೂ ಹೆಚ್ಚಿನ ಜನರು ಹಾಗೂ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಲಿರುವರು. ಹಾಗೂ ಮೆರವಣಿಗೆಯಲ್ಲಿ ಭಾಗವಹಿಸಲು ಇಚ್ಚಿಸುವ ತಂಡಗಳನ್ನು ಈಗಾಗಲೇ ಗುರುತಿಸಲಾಗಿದ್ದು ಮೆರವಣಿಗೆಯು ಉತ್ತಮ ರೀತಿಯಲ್ಲಿ ಯಶಸ್ವಿಯಾಗಿ ಸಾಗಲು ಶ್ರಮಿಸಬೇಕೆಂದು ಮೆರವಣಿಗೆ ಸಮಿತಿ ಅಧ್ಯಕ್ಷ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ತಿಳಿಸಿದರು.
( ಕಳೆದ ವರ್ಷದ ಕಡತ ಚಿತ್ರ )

ಮೆರವಣಿಗೆಯಲ್ಲಿ ಭಾಗವಹಿಸಲು ಈಗಾಗಲೇ ತಾಲೂಕಿನ ವಿವಿಧ ದೇವಸ್ಥಾನಗಳಿಗೆ ಆಮಂತ್ರಣ ನೀಡಲಾಗಿದ್ದು ಅವರುಗಳು ಕೂಡ ತಮ್ಮ ದೇವಸ್ಥಾನದ ಚೆಂಡೆ, ವಾದ್ಯ ವಾಲಗ, ತುತ್ತೂರಿಗಳೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ಅಷ್ಟು ಮಾತ್ರವಲ್ಲದೇ ಮೆರವಣಿಗೆಯಲ್ಲಿ ಭಾಗವಹಿಸುವ ಜನತೆಗೆ ಹಾಗೂ ಮಕ್ಕಳ ದನಿವನ್ನು ನಿವಾರಿಸಲು ರುಚಿಕರ ಪಾನೀಯ ಹಾಗೂ ವಿವಿಧ ಬಗೆಯ ತಿಂಡಿ ಪೊಟ್ಟಣಗಳ ವ್ಯವಸ್ಥೆಯನ್ನು ಮಾಡಲಾಗಿದೆ.
ಮೆರವಣಿಗೆಯಲ್ಲಿ ಭುವನೇಶ್ವರಿ ದೇವಿಯ ಹಾಗೂ ಇನ್ನಿತರ ಸರಕಾರಿ ಇಲಾಖೆಗಳ ಸ್ತಬ್ದ ಚಿತ್ರದ ಪ್ರದರ್ಶನ ನಡೆಯುವುದು. ಜೊತೆಗೆ ಅಗ್ನಿಶಾಮಕ ದಳದ ವಾಹನಗಳು, ಟ್ರಾಫಿಕ್ ಪೊಲೀಸರ ಪ್ಯಾಂಥರ್ ಮೋಟಾರ್ ಬೈಕ್,ಕುದುರೆ ರೈಡ್,ವಜ್ರ ವಾಹನಗಳು ಭಾಗವಹಿಸಲಿದೆ.
ಮೆರವಣಿಗೆಯು ಡಿಸೆಂಬರ್ 22 ರಂದು ಸಂಜೆ 3.30 ಕ್ಕೆ ನೆಹರೂ ಮೈದಾನದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ ಖಾದರ್ ಉದ್ಘಾಟಿಸಲಿದ್ದಾರೆ. ಅಲ್ಲಿಂದ ಹೊರಟು ಆರ್ ಟಿ ಓ ಸರ್ಕಲ್,ಹಂಪನಕಟ್ಟೆ ವೃತ್ತ ಕೆಎಸ್ ರಾವ್ ರಸ್ತೆ, ನವಭಾರತ ಸರ್ಕಲ್, ಪಿವಿಎಸ್ ಲಾಲ್ಭಾಗ್ ರಸ್ತೆಯ ಮೂಲಕ 5.30 ಗಂಟೆಗೆ ಕರಾವಳಿ ಉತ್ಸವ ಮೈದಾನವನ್ನು ತಲುಪಲಿದೆ ಎಂದು ಕಲ್ಕೂರಾ ಹೇಳಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ದೇವಸ್ಥಾನದ ಕಾರ್ಯ ನಿರ್ವಾಹಣಾಧಿಕಾರಿಗಳು ಆಡಳಿತ ಮೋಕೆಸ್ತರರು ಹಾಗೂ ಕಾಲೇಜಿನ ಪ್ರಾಂಶುಪಾಲರುಗಳು ಭಾಗವಹಿಸಿದ್ದರು.
Comments are closed.