
ಶ್ರೀನಗರ: ಕಳೆದ ಏಳು ವರ್ಷದ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನೆ ಹೊಡೆದುರುಳಿಸಿದ ಉಗ್ರರ ಸಂಖ್ಯೆ 200 ದಾಟಿದೆ ಎಂದು ಡಿಜಿಪಿ ಎಸ್‌ಪಿ ವೈದ್ ಟ್ವೀಟ್ ಮಾಡಿದ್ದಾರೆ.
ಕೇವಲ 2017ರೊಂದರಲ್ಲೇ ಜಮ್ಮು ಕಾಶ್ಮೀರ ಪೊಲೀಸ್, ಭಾರತೀಯ ಸೇನೆ, ಸಿಆರ್‌ಪಿಎಫ್ ಮತ್ತು ಸಿಎಪಿಎಫ್ ಮತ್ತು ಜಮ್ಮು ಕಾಶ್ಮೀರದ ಜನರ ಸಹಾಯದಿಂದಾಗಿ ಗಡಿ ನುಸುಳಲು ಯತ್ನಿಸುತ್ತಿದ್ದ 200ಕ್ಕೂ ಅಧಿಕ ಉಗ್ರರನ್ನು ಸದೆಬಡಿಯಲು ಸಾಧ್ಯವಾಗಿದೆ ಎಂದು ಡಿಜಿಪಿ ಟ್ವೀಟ್ ಮಾಡಿದ್ದಾರೆ.
‘ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ನಮ್ಮ ದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಸ್ಥಾಪಿಸಲು ಬೇಕಾದ ಪೂರಕ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಹೇಳಲು ಈ ಸಂಖ್ಯೆ ಮೈಲಿಗಲ್ಲು’ ಎಂದು ಡಿಜಿಪಿ ಹೇಳಿಕೊಂಡಿದ್ದಾರೆ.
ಬುಧವಾರದಂದು ಕಾಶ್ಮೀರದ ಬುಡ್ಗಾಂ ಮತ್ತು ಬರಮುಲ್ಲಾ ಜಿಲ್ಲೆಗಳಲ್ಲಿ ಗಡಿ ನುಸುಳಲೆತ್ನಿಸುತ್ತಿದ್ದ ಐವರು ಉಗ್ರರನ್ನು ಪೊಲೀಸ್ ಮತ್ತು ಸೇನೆ ಹೊಡೆದುರುಳಿಸಿತ್ತು. ಅಧಿಕಾರಿಗಳ ಪ್ರಕಾರ ವರ್ಷಾರಂಭದಿಂದ ಈ ವರೆಗೆ ಒಟ್ಟಾರೆ 200ಕ್ಕೂ ಅಧಿಕ ಉಗ್ರರನ್ನು ಸೇನೆ ಹೊಡೆದುರುಳಿಸಿದೆ. 2010ರಿಂದ ಈ ವರೆಗಿನ ಅಂಕಿ ಅಂಶಗಳ ಪ್ರಕಾರ ಪ್ರಸಕ್ತ ವರ್ಷ ಹೆಚ್ಚು ಉಗ್ರಬೇಟೆಯಾಗಿದೆ. ಕಳೆದ ವರ್ಷ 165 ಉಗ್ರರನ್ನು ಹೊಡೆದುರುಳಿಸಲಾಗಿತ್ತು.
Comments are closed.