
ಬೆಂಗಳೂರು: ನಾನು ಹಿಂದೂ ವಿರೋಧಿಯಲ್ಲ, ಅಂತಹ ಭಾವನೆ ಇದ್ದರೆ ಚರ್ಚೆಗೆ ಬನ್ನಿ…ನನ್ನ ಮೇಲಿನ ದ್ವೇಷಕ್ಕೆ ಅತಿರಥ ಚಿತ್ರ ಬಿಡುಗಡೆಗೆ ಅಡ್ಡಿ ಬೇಡ ಎಂದು ನಟ ಚೇತನ್ ಮನವಿ ಮಾಡಿಕೊಂಡಿದ್ದಾರೆ.
ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿರುವ ನಟ ಚೇತನ್ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿದ್ದು, ಚಾಮರಾಜನಗರದಲ್ಲಿ ಅವರ ಅಭಿನಯದ ಅತಿರಥ ಚಿತ್ರದ ಪೋಸ್ಟರ್ ಹರಿದು ಹಾಕಿ ವ್ಯಾಪಕ ಪ್ರತಿಭಟನೆ ನಡೆಸಲಾಗಿತ್ತು. ಇದರ ಬೆನ್ನಲ್ಲೇ ನಿನ್ನೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಟ ಚೇತನ್, “ನಾನು ಹಿಂದೂ ವಿರೋಧಿ ಎಂದು ಆಪಾದಿಸಿ ಚಾಮರಾಜನಗರ ಜಿಲ್ಲೆಯಲ್ಲಿ ಅತಿರಥ ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ಕಲೆಗೆ ಅಡ್ಡಿಪಡಿಸಬೇಡಿ’ ಎಂದು ಹೇಳಿದರು.
“ಸಿನಿಮಾ ಕೇವಲ ಒಬ್ಬ ನಟನನ್ನು ಅವಲಂಬಿಸಿರುವುದಿಲ್ಲ. ನಿರ್ಮಾಪಕ, ನಿರ್ದೇಶಕರು ಹಣ ಮತ್ತು ಹಲವಾರು ಮಂದಿ ಇದಕ್ಕೆ ಶ್ರಮ ವಹಿಸಿರುತ್ತಾರೆ. ನೂರಾರು ಕಾರ್ಮಿಕರು ಚಿತ್ರಕ್ಕಾಗಿ ಕೆಲಸ ಮಾಡಿರುತ್ತಾರೆ. ಅವರೆಲ್ಲರ ಜೀವನವೂ ಆ ಚಿತ್ರದ ಮೇಲೆ ಅವಲಂಬಿತವಾಗಿರುತ್ತದೆ. ಕಲೆಗೆ ಅಡ್ಡಿಪಡಿಸುವುದು ಒಳ್ಳೆಯ ಸಂಸ್ಕೃತಿಯಲ್ಲ. ನಾನು ಹಿಂದೂ ವಿರೋಧಿ ಅಲ್ಲ, ಆದರೆ ಹಿಂದುತ್ವದ ವಿರೋಧಿ. ಎಲ್ಲ ಧರ್ಮಗಳನ್ನು ಸಹಿಷ್ಣುತೆಯಿಂದ ಕಾಣುವುದೇ ಹಿಂದೂ ಧರ್ಮ. ಬಹುತ್ವವನ್ನು ಬಿಟ್ಟು ಒಂದೇ ಅಜೆಂಡಾ ಸಾರಲು ಹೊರಟವರನ್ನು ಮಾತ್ರ ನಾನು ಪ್ರಶ್ನೆ ಮಾಡಿದ್ದೇನೆ. ಈ ರೀತಿ ಪ್ರಶ್ನಿಸುವಂತಹ ಗುಣ ಬೆಳೆದಿದ್ದು ಸಹ ಬಸವಣ್ಣ, ಕುವೆಂಪು ಅಂತಹವರು ಹುಟ್ಟಿದ ಕರ್ನಾಟಕದ ಈ ಮಣ್ಣಿನಲ್ಲೇ ಎಂದು ಹೇಳಿದರು.
ಅಂತೆಯೇ ನನ್ನ ಮೇಲಿನ ದ್ವೇಷಕ್ಕಾಗಿ ಸಿನಿಮಾಗೆ ಅಡ್ಡಿಪಡಿಸುವುದು ಅವರ ಸಂಸ್ಕೃತಿ ತೋರಿಸುತ್ತದೆ. ನಾನು ಹಿಂದೂ ವಿರೋಧಿ ಎಂಬ ಅಭಿಪ್ರಾಯ ಇದ್ದರೆ ನೇರವಾಗಿ ಚರ್ಚೆಗೆ ಬನ್ನಿ. ನವೆಂಬರ್ 24ರಂದು ಬಿಡುಗಡೆಯಾದ ಅತಿರಥ ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಇದೆ. ಚಿತ್ರ ಆರೋಗ್ಯ ಮತ್ತು ಶಿಕ್ಷಣ ವ್ಯಾಪಾರೀಕರಣದಿಂದ ಆಗಿರುವ ಸಮಸ್ಯೆಗಳ ಕುರಿತು ಸಾಮಾಜಿಕ ಸಂದೇಶ ನೀಡುತ್ತದೆ. ಆದರೆ, ಚಾಮರಾಜನಗರದಲ್ಲಿ ನಗರಸಭೆ ಸದಸ್ಯರೊಬ್ಬರು ಫ್ಲೆಕ್ಸ್ಗಳನ್ನು ಹರಿದು, ಚಿತ್ರ ಪ್ರದರ್ಶಿಸದಂತೆ ಚಿತ್ರಮಂದಿರ ಮಾಲೀಕರಿಗೆ ಒತ್ತಡ ಹಾಕಿದ್ದಾರೆ. ಇದು ಸರಿಯಲ್ಲ.. ಚಿತ್ರದ ನಿರ್ದೇಶಕ ಮಹೇಶ್ ಬಾಬು, ಚೇತನ್ ಹಿಂದೂ ವಿರೋಧಿ ಅಲ್ಲ. ಅಲ್ಲದೆ, ಚಾಮರಾಜನಗರ ಜಿಲ್ಲೆಯಲ್ಲಿ ಮಹಿಳಾ ಸ್ವಸಹಾಯ ಗುಂಪುಗಳು, ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಸಾಕಷ್ಟು ಸಾಮಾಜಿಕ ಕೆಲಸಗಳನ್ನು ಮಾಡಿದ್ದಾರೆ. ನಾವು ಇದರ ವಿರುದ್ಧ ಕಾನೂನು ಮೂಲಕವೂ ಹೋರಾಟ ಮಾಡುತ್ತೇವೆ’ ಎಂದು ಚೇತನ್ ಹೇಳಿದರು.
ಅತಿರಥ ಚಿತ್ರದ ಪೋಸ್ಟರ್ ಹರಿದು ಪ್ರತಿಭಟನೆ
ಏತನ್ಮಧ್ಯೆ ನಟ ಚೇತನ್ ಅಭಿನಯದ ‘ಅತಿರಥ’ ಸಿನಿಮಾಗೆ ಹಿಂದೂ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಚಿತ್ರದ ಪೋಸ್ಟರ್ ಹರಿದು ಆಕ್ರೋಶ ವ್ಯಕ್ತಪಡಿಸಲಾಗಿದೆ. ಹಿಂದೂ ಧರ್ಮದ ಬಗ್ಗೆ ಹಗುರವಾಗಿ ಮಾತಾನಾಡಿದ್ದಾರೆ ಎಂದು ಆರೋಪಿಸಿ ಚಾಮರಾಜನಗರದಲ್ಲಿ ಅಜಾದ್ ಹಿಂದ್ ಸೇನಾ ಕಾರ್ಯಕರ್ತರು ಚೇತನ್ ನಟನೆಯ ಅತಿರಥ ಚಿತ್ರದ ಪೋಸ್ಟರ್ ಗಳನ್ನು ಹರಿದು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಸಮಾಜಿಕ ಜಾಲತಾಣಗಳಲ್ಲೂ ನಟ ಚೇತನ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
Comments are closed.