
ನವದೆಹಲಿ: ಬಿಎಸ್ಎಫ್ ಯೋಧರಿಗೆ ನೀಡುವ ಆಹಾರ ಹೀಗಿದೆ ಎಂದು ಅರೆ ಬೆಂದ ಪರೋಟಾ, ಒಂದು ಲೋಟ ಚಹಾವನ್ನು ತೋರಿಸಿ, ಯೋಧರ ಕಷ್ಟಗಳನ್ನು ಹೇಳಿಕೊಂಡು ಫೇಸ್ಬುಕ್ನಲ್ಲಿ ವಿಡಿಯೊ ಅಪ್ಲೋಡ್ ಮಾಡಿದ್ದ ಯೋಧ ತೇಜ್ ಬಹದ್ದೂರ್ ಯಾದವ್ ಬಗ್ಗೆ ತನಿಖೆ ನಡೆಸಲು ಬಿಎಸ್ಎಫ್ ತೀರ್ಮಾನಿಸಿದೆ.
ಈ ಬಗ್ಗೆ ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಬಿಎಸ್ಎಫ್ ಐಜಿ ಡಿ.ಕೆ ಉಪಾಧ್ಯಾಯ್ ಅವರು, ತೇಜ್ ಅವರು ಮಾಡಿರುವ ಆರೋಪಗಳ ಬಗ್ಗೆ ತನಿಖೆ ನಡೆಸಲಾಗುವುದು. ತೇಜ್ ಬಹದ್ದೂರ್ ಮೇಲೆ ಯಾರೂ ಒತ್ತಡ ಹೇರದಂತೆ ಅವರನ್ನು ಮತ್ತೊಂದು ಪ್ರಧಾನ ಕಾರ್ಯಾಲಯಕ್ಕೆ ಸ್ಥಳಾಂತರಿಸಲಾಗುವುದು. ಈ ಬಗ್ಗೆ ನಿಷ್ಪಕ್ಷ ತನಿಖೆ ನಡೆಸಲಾಗುವುದು ಎಂದಿದ್ದಾರೆ.
ಆದಾಗ್ಯೂ, ತೇಜ್ ಅವರ ಹಿಂದಿನ ನಡವಳಿಕೆಯನ್ನು ನೋಡಿದರೆ, ಈ ವಿಡಿಯೊದ ಹಿಂದಿರುವ ನಡೆ ಬಗ್ಗೆ ಸಂದೇಹ ಹುಟ್ಟುತ್ತದೆ ಎಂದು ಉಪಾಧ್ಯಾಯ್ ಹೇಳಿದ್ದಾರೆ.
2010ರಲ್ಲಿ ಯೋಧ ತೇಜ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗಿತ್ತು. ಆದರೆ ಅವರ ಕುಟುಂಬವನ್ನು ಪರಿಗಣಿಸಿ ಅವರನ್ನು ಸೇನೆಯಿಂದ ವಜಾ ಮಾಡಿರಲಿಲ್ಲ ಎಂದು ಐಜಿ ಹೇಳಿದ್ದಾರೆ.
ತೇಜ್ ಅವರು ಕರ್ತವ್ಯ ನಿರ್ವಹಿಸುತ್ತಿರುವ ಶಿಬಿರಕ್ಕೆ ಡಿಐಜಿ ಮೊದಲಾದ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಆದರೆ ವಿಡಿಯೊದಲ್ಲಿ ಆರೋಪಿಸಿದಂತೆ ಅಲ್ಲಿನ ಪರಿಸ್ಥಿತಿ ಇಲ್ಲ.
ವಿಡಿಯೊ ನೋಡಿ ಅಚ್ಚರಿಯಾಗಿದೆ. ಡಿಐಜಿಯವರು ಅದೇ ಶಿಬಿರಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಪ್ರತಿಯೊಬ್ಬರಲ್ಲೂ ವಿಚಾರಿಸಿದ್ದಾರೆ. ತೇಜ್ ಅವರಲ್ಲಿಯೂ ವಿಚಾರಿಸಲಾಗಿತ್ತು. ಆದರೆ ಅಲ್ಲಿ ಯಾವುದೇ ದೂರು ಸಿಕ್ಕಿಲ್ಲ. ಆ ವಿಡಿಯೊದ ಉದ್ದೇಶವೇ ಬೇರೆಯಾಗಿರಬಹುದು ಎಂದು ಉಪಾಧ್ಯಾಯ್ ಅಭಿಪ್ರಾಯಪಟ್ಟಿದ್ದಾರೆ.
ತೇಜ್ ಬಹದ್ದೂರ್ ಯಾದವ್ ಅವರ 20 ವರ್ಷದ ಸೇವಾ ಅವಧಿಯಲ್ಲಿ ನಾಲ್ಕು ಬಾರಿ ತಪ್ಪು ಎಸಗಿದ್ದಾರೆ. ಹಾಗಾಗಿ ಅವರಿಗೆ ಬಡ್ತಿಯೂ ಸಿಕ್ಕಿಲ್ಲ. ಅವರ ಹತಾಶೆಗೆ ಇದೂ ಕಾರಣವಾಗಿರಬಹುದು ಎಂದು ಬಿಎಸ್ಎಫ್ ಡಿಐಜಿ ಎಂಜಿಎಸ್ ಮನ್ನ್ ಹೇಳಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಭಾರತ -ಪಾಕಿಸ್ತಾನದ ಗಡಿಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ 29ನೇ ಬೆಟಾಲಿಯನ್ನ ಯೋಧ ತೇಜ್ ಬಹದ್ದೂರ್ ಯಾದವ್ ಬಿಎಸ್ಎಫ್ ಯೋಧರಿಗೆ ನೀಡುವ ಆಹಾರ ಮತ್ತು ಅವ್ಯವಸ್ಥೆಯ ಬಗ್ಗೆ ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದ ವಿಡಿಯೊ ವೈರಲ್ ಆಗಿತ್ತು.
Comments are closed.