ನವದೆಹಲಿ: ಕಳೆದ ತಿಂಗಳು ಕಾಶ್ಮೀರದ ಉರಿ ಸೇನಾ ನೆಲೆಯ ಮೇಲೆ ನಡೆದ ದಾಳಿಯ ಹೊಣೆಯನ್ನು ಪಾಕಿಸ್ತಾನ ಮೂಲದ ಲಷ್ಕರ್–ಎ–ತಯಬಾ ಉಗ್ರ ಸಂಘಟನೆ ಹೊತ್ತು ಕೊಂಡಿದೆ.
ಸೆಪ್ಟೆಂಬರ್ 18 ರಂದು ನಡೆದ ಈ ಉಗ್ರದಾಳಿಯಲ್ಲಿ ಭಾರತದ 20 ಯೋಧರು ಹತರಾಗಿದ್ದರು.
ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್ ನೇತೃತ್ವದ ಜಮಾತ್–ಉದ್ ದಾವಾ ಸಂಘಟನೆ ವತಿಯಿಂದ ಉರಿ ದಾಳಿ ವೇಳೆ ಹತನಾದ ಉಗ್ರನಿಗೆ ಶ್ರದ್ಧಾಂಜಲಿ ಪ್ರಾರ್ಥನೆ ಸಲ್ಲಿಸಲಾಗಿತ್ತು. ಈ ಶ್ರದ್ದಾಂಜಲಿ ಕಾರ್ಯಕ್ರಮದ ನಂತರ ಹಫೀಜ್ ಸಯೀದ್ ಅವರ ವಿಶೇಷ ಭಾಷಣವೂ ಇತ್ತು. ಈ ಕಾರ್ಯಕ್ರಮಗಳ ನಡೆದದ್ದು ಪಾಕಿಸ್ತಾನದ ಗುಜರಣ್ವವಾಲಾ ನಗರದಲ್ಲಿ ಎಂದು ಪೋಸ್ಟರ್ ವೊಂದರಲ್ಲಿ ಉಲ್ಲೇಖಿಸಲಾಗಿದ್ದು, ಪೋಸ್ಟರ್ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.
ಪೋಸ್ಟರ್‍ನಲ್ಲಿ ಏನಿದೆ?
ಲಷ್ಕರ್ ಸಂಘಟನೆಯ ಮುಹಮ್ಮದ್ ಅನಸ್, ಗುಪ್ತ ನಾಮ ಅಬು ಸರಾಖಾ ಕಾಶ್ಮೀರದ ಉರಿ ಸೇನಾ ನೆಲೆ ಮೇಲೆ ದಾಳಿ ನಡೆಸುವಾಗ ಹತರಾಗಿದ್ದಾರೆ. ಉರ್ದು ಭಾಷೆಯಲ್ಲಿರುವ ಈ ಪೋಸ್ಟರ್‍ನಲ್ಲಿ ಲಷ್ಕರೆ ಉಗ್ರರು 177 ಭಾರತೀಯ ಯೋಧರನ್ನು ಹತೈಗೈದಿದ್ದಾರೆ ಎಂದು ಬರೆಯಲಾಗಿದೆ.
ಕಾಶ್ಮೀರದಲ್ಲಿ 177 ಹಿಂದೂ ಯೋಧರನ್ನು ಹತ್ಯೆಗೈಯ್ಯುವ ವೇಳೆ ಮುಜಾಹಿದ್ ಭಾಯಿ ಅಬು ಸರಾಖಾ ಮುಹಮ್ಮದ್ ಅನಸ್ ಅವರು ಹುತಾತ್ಮರಾಗಿದ್ದಾರೆ. ಅವರಿಗಾಗಿ ಶ್ರದ್ದಾಂಜಲಿ ಸಭೆ ಏರ್ಪಡಿಸಿದ್ದು, ಗುಜರಣ್ವವಾಲಾದಲ್ಲಿರುವ ಬಡಾ ನಾಲಾ ನವಾಬ್ ಚೌಕ್ ಗಿರ್ಜಾಕ್ ಬಳಿಯಿರುವ ಸದಾಬಹಾರ್ ನರ್ಸರಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಪೋಸ್ಟರ್ ನಲ್ಲಿ ಉಲ್ಲೇಖಿಸಲಾಗಿದೆ.
ಉರಿ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಇಲ್ಲ ಎಂದು ಅಲ್ಲಿನ ಸರ್ಕಾರ ಪದೇ ಪದೇ ಹೇಳುತ್ತಾ ಬಂದಿದ್ದರೂ, ಇದೀಗ ಲಷ್ಕರ್ ಸಂಘಟನೆ ದಾಳಿಯ ಹೊಣೆ ಹೊತ್ತಿರುವುದರ ಬಗ್ಗೆ ಪಾಕ್ ಸರ್ಕಾರ ಯಾವ ರೀತಿ ಪ್ರತಿಕ್ರಿಯಿಸುತ್ತಿದೆ ಎಂಬುದು ಕಾದುನೋಡಬೇಕಿದೆ.
Comments are closed.