ಕರಾವಳಿ

ಕಾಂಗ್ರೆಸ್‌ನ ಹಿರಿಯ ಮುಖಂಡ ಪೂಜಾರಿ ಇಂದು ಯಾರನ್ನು ದೂರಿದ್ದಾರೆ.. ಯಾರನ್ನು ಹೊಗಳಿದ್ದಾರೆ… ಈ ವರದಿ ಓದಿ…

Pinterest LinkedIn Tumblr

poojari_press_yxx_1

ಮಂಗಳೂರು , ಸೆಪ್ಟಂಬರ್,22: ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಅವರನ್ನು ಮುಖ್ಯಮಂತ್ರಿ ದೂರ ಇಟ್ಟಿದ್ದರು.ಆದರೆ ಅವರೀಗ ನನ್ನನ್ನು ಟೀಕಿಸಲು ಆರಂಭಿಸಿದ್ದಾರೆ. ಇದರಿಂದಾಗಿ ನಿನ್ನೆ ನಡೆದ ಕಾರ್ಯಕ್ರಮವೊಂದರಲ್ಲಿ ಸಿಎಂ ಬೆನ್ನ ಹಿಂದೆ ಜಗತ್ತಿಗೆ ಕಾಣುವಂತೆ ಅವರು ಕುಳಿತುಕೊಳ್ಳಲು ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಇದು ಪೂಜಾರಿಯನ್ನು ಟೀಕಿಸಿದ್ದಕ್ಕೆ ಅವರಿಗೆ ಸಿಕ್ಕ ಬಹುಮಾನ. ಇಲ್ಲದಿದ್ದರೆ ಅಷ್ಟು ಸಮೀಪದಲ್ಲಿ ಕುಳಿತುಕೊಳ್ಳಲು ಆಗುತ್ತಿತ್ತೇ ಎಂದು ಪೂಜಾರಿ ಪ್ರಶ್ನಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನನ್ನು ಟೀಕೆ ಮಾಡಿದವರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಹುಮಾನ ಕೊಡುತ್ತಾರೆ. ನನ್ನನ್ನು ಯಾರು ಟೀಕಿಸುತ್ತಾರೋ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಬಹುಮಾನ ಗ್ಯಾರಂಟಿ. ಅದಕ್ಕಾಗಿಯೇ ಕಾಂಗ್ರೆಸ್‌‌ನ ಜಿಲ್ಲಾ ಉಸ್ತುವಾರಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ನನ್ನ ಬಗ್ಗೆ ಯದ್ವಾತದ್ವಾ ಟೀಕೆ ಮಾಡುತ್ತಿದ್ದಾರೆ. ಅವರೀಗ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ತಮ್ಮ ಅಧಿಕಾರಾವಧಿಯನ್ನು ವಿಸ್ತರಿಸುವಲ್ಲಿ ಕಣ್ಣುನೆಟ್ಟಿದ್ದಾರೆ. ಅದಕ್ಕೆ ಸಿಎಂನ್ನು ಓಲೈಸಲು ನನ್ನ ಮೇಲೆ ಹರಿಹಾಯುತ್ತಿದ್ದಾರೆ ಎಂದು ಜನಾರ್ದನ ಪೂಜಾರಿ ಹೇಳಿದರು.

ಸರಕಾರ ದಾರಿ ತಪ್ಪಿದಾಗ ನಾನು ಎಚ್ಚರಿಕೆ ಮಾಡುತ್ತಾ ಬಂದಿದ್ದೇನೆ. ಹಿಂದೆಯೂ ನಾನು ಮುಖ್ಯಮಂತ್ರಿ ಸಿದ್ಧರಾಮಯ್ಯ ಒಳ್ಳೆಯ ಕೆಲಸ ಮಾಡಿದ್ದಾಗ ಅದನ್ನು ಹೊಗಳಿದ್ದೇನೆ. ತಪ್ಪು ಮಾಡಿದಾಗ ಟೀಕಿಸಿದ್ದೇನೆ. ಅದನ್ನು ನಾನು ಮುಂದೆಯೂ ಮುಂದುವರಿಸುತ್ತೇನೆ ಎಂದು ಅವರು ಹೇಳಿದರು.

poojari_press_yxx_2

ಇನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಅಪ್ಪನನ್ನೇ ತಾನು ಬಿಟ್ಟಿಲ್ಲ. ಹಿಂದೆ ಆಸ್ಕರ್ ಫರ್ನಾಂಡಿಸ್ ಅವರಿಗೆ ಲೋಕಸಭಾ ಸದಸ್ಯತನಕ್ಕೆ ಟಿಕೆಟ್ ನೀಡುವ ಬದಲು ಕೆ.ಜೆ. ಜಾರ್ಜ್‌ಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದ ಗುಂಡೂರಾವ್ ಅವರ ಬಾಯಿಮುಚ್ಚಿಸಿದವನು ನಾನು. ದಿನೇಶ್‌ಗೆ ನನ್ನನ್ನು ಏನು ಮಾಡಲು ಆಗುತ್ತೆ. ತಮ್ಮನ್ನು ಪಕ್ಷದಿಂದ ತೆಗೆಯುವ ಅಧಿಕಾರ ಸೋನಿಯಾ ಗಾಂಧಿಗೆ ಬಿಟ್ಟರೆ ಬೇರೆ ಯಾರಿಗೂ ಇಲ್ಲ. ದಿನೇಶ್ ತಮ್ಮಲ್ಲಿ ಕ್ಷಮೆ ಕೇಳಬೇಕು ಎಂದರು.

ದಿನೇಶ್ ಗುಂಡೂರಾವ್ ಅವರ ತಂದೆಯ ಪ್ರಾಯ ನನಗಾಗಿದೆ. ಹಾಗಾಗಿ ಅವರು ನನಗೆ ಹಾಗೂ ಅವರ ತಂದೆಗೆ ಇರುವ ನಂಟನ್ನು ಮೊದಲು ತಿಳಿದುಕೊಳ್ಳಲಿ. ನಾನು ಕಾಂಗ್ರೆಸ್ ಪಕ್ಷದ ಉಳಿವಿಗಾಗಿ ಮಾತನಾಡುತ್ತೇನೆಯೇ ವಿನಹ ಪಕ್ಷ ವಿರೋಧಿಯಾಗಿ ಅಲ್ಲ. ಕೆಪಿಸಿಸಿ ಕಾರ್ಯಾಧ್ಯಕ್ಷನಾದ ಮಾತ್ರಕ್ಕೆ ಜಗತ್ತೇ ತಲೆಮೇಲೆ ಹೊತ್ತುಕೊಂಡಂತೆ ಮಾತನಾಡುತ್ತಾರೆ. ಪಕ್ಷದಿಂದ ನನ್ನನ್ನು ತೆಗೆಯುತ್ತೀರಾ? ನಿಮಗೆ ಅಧಿಕಾರ ಇರುವುದೇ? ಎಂದು ದಿನೇಶ್ ಗುಂಡೂರಾವ್ ವಿರುದ್ಧ ಹರಿಹಾಯ್ದ ಜನಾರ್ದನ ಪೂಜಾರಿ, ಆ ಅಧಿಕಾರ ಇರುವುದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಮಾತ್ರ ಎಂದರು. ಬಾಯಿಗೆ ಬಂದಂತೆ ಮಾತನಾಡುವುದನ್ನು ಬಿಟ್ಟು ಅವರು ಕ್ಷಮೆ ಕೇಳಬೇಕು ಎಂದು ಜನಾರ್ದನ ಪೂಜಾರಿ ಹೇಳಿದರು.

ಸಿಎಂ ಸಿದ್ದರಾಮಯ್ಯ ಬಗ್ಗೆ ಪೂಜಾರಿ ತಾರೀಫು:

ಕೊನೆಗೂ ಸಿಎಂ ಸಿದ್ದರಾಮಯ್ಯ ಕಾವೇರಿ ನೀರು ಬಿಡದಿರುವಂತೆ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಸರ್ವ ಪಕ್ಷಗಳ ಸಭೆ ಕರೆದು ಕಠಿಣ ನಿರ್ಧಾರಕ್ಕೆ ಬಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೊನೆಗೂ ದಿಟ್ಟವಾಗಿ ಯೋಚಿಸಿದ್ದಾರೆ. ಅವರ ನಿಲುವನ್ನು ನಾನು ಶ್ಲಾಘಿಸುತ್ತೇನೆ ಎಂದು ಪೂಜಾರಿ ಸಂತಸ ವ್ಯಕ್ತಪಡಿಸಿದರು.

ಆದರೆ ಬಿಜೆಪಿ ಮಾತ್ರ ಈ ಸಭೆಯಲ್ಲಿ ಪಾಲ್ಗೊಳ್ಳದಿರುವುದು ಐತಿಹಾಸಿಕ ಪ್ರಮಾದ. ಬಿಜೆಪಿಯವರು ಮನಸ್ಸು ಮಾಡಿದ್ದರೆ ಕಾವೇರಿ ನೀರು ಬಿಡದಂತೆ ಪ್ರಧಾನಿಯವರನ್ನು ಭೇಟಿ ಮಾಡಿ ಮನವಿ ಮಾಡಬಹುದಿತ್ತು. ಸಂಸದರಿಂದ ರಾಜೀನಾಮೆ ಕೊಡಿಸಬೇಕಿತ್ತು. ಇದನ್ನೇ ರಾಜ್ಯದ ಆರು ಕೋಟಿ ಜನ ಬಯಸಿದ್ದರು. ಅದರೆ, ನೀವು ಜನತೆಯನ್ನು ಮೂರ್ಖರನ್ನಾಗಿ ಮಾಡಿದ್ದೀರಾ. ರಾಜ್ಯದ ಸಮಸ್ಯೆಯನ್ನು ಬಗೆಹರಿಸದೆ ಹೇಡಿಯಾಗಿಬಿಟ್ಟಿರಿ. ಯಡಿಯೂರಪ್ಪ, ಜಗದೀಶ್ ಶೆಟ್ಟರೇ ನೀವು ರಾಜ್ಯದಲ್ಲಿ ಅಧಿಕಾರ ವಹಿಸುವ ಅವಕಾಶವನ್ನು ಶಾಶ್ವತವಾಗಿ ಕಳೆದುಕೊಂಡಿದ್ದೀರಿ ಎಂದು ಪೂಜಾರಿ ಆಕ್ರೋಶ ವ್ಯಕ್ತ ಪಡಿಸಿದರು.

ಎರಡು ರಾಜ್ಯಗಳಲ್ಲಿ ನೀರಿಗಾಗಿ ನಡೆದ ಸಂಘರ್ಷವನ್ನು ಪ್ರಧಾನಿ ಬಗೆಹರಿಸಬಹುದಿತ್ತು. ಆದರೆ, ತಾವು ತಮ್ಮ ಕರ್ತವ್ಯವನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದೀರಿ. ಇಂದಿರಾಗಾಂಧಿ, ಲಾಲ್‍ಬಹದ್ದೂರು ಶಾಸ್ತ್ರಿ, ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಹಿಂದಿನ ಪ್ರಧಾನಿಗಳು ನೀರಿನ ಬಿಕ್ಕಟ್ಟನ್ನು ಬಗೆಹರಿಸಿದ್ದರು. ಆದರೆ, ತಾವು ಸಂವಿಧಾನಿಕ ಬಿಕ್ಕಟ್ಟಿಗೆ ಕಾರಣರಾಗುತ್ತಿದ್ದೀರಿ ಎಂದು ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಪಕ್ಷ ಮುಖಂಡರಾದ ಕಳ್ಳಿಗೆ ತಾರನಾಥ ಶೆಟ್ಟಿ, ಅರುಣ್ ಕುವೆಲ್ಲೋ ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.

Comments are closed.