
ಬೆಂಗಳೂರು, ಸೆ. ೧೬ – ಗ್ರಾಮಾಂತರ ಪ್ರದೇಶಗಳಲ್ಲಿ ರೈತರ ತರಕಾರಿ ಸೇರಿದಂತೆ ವಿವಿಧ ಉತ್ಪನ್ನಗಳ ಮಾರಾಟಕ್ಕಾಗಿ 100 ಹಳ್ಳಿಕಟ್ಟೆಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, ಅದೇ ಮಾದರಿಯಲ್ಲಿ ನಗರದ ಪ್ರದೇಶದಲ್ಲಿ ಜಾನಪದ ಕಲೆಗಳ ಪ್ರದರ್ಶನ ಹಾಗೂ ಮಾರಾಟಕ್ಕಾಗಿ ಕಲಾಕಟ್ಟೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ್ ಇಂದು ಇಲ್ಲಿ ಹೇಳಿದ್ದಾರೆ.
ಕಲಾಕಟ್ಟೆಗಳನ್ನು ತಾಲೂಕು ಪಂಚಾಯ್ತಿ ಮತ್ತು ಜಿಲ್ಲಾ ಪಂಚಾಯ್ತಿಗಳೊಂದಿಗೆ ಚರ್ಚಿಸಿ ಆರಂಭಿಸಲು ಸರ್ಕಾರ ಉದ್ದೇಶಿಸಿದೆ. ಇದರಿಂದ ಜಾನಪದ ಕಲೆ ಮತ್ತು ಪ್ರದರ್ಶನಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಚಿತ್ರಕಲಾ ಪರಿಷತ್ನಲ್ಲಿ ಹಮ್ಮಿಕೊಂಡಿದ್ದ ಕಲೆಯ ಪುನರುಜ್ಜೀವನ ಕುರಿತ ಕಾರ್ಯಾಗಾರ ಮತ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಹಳ್ಳಿಕಟ್ಟೆಗಳನ್ನು ನಿರ್ಮಿಸುವುದರಿಂದ ಆ ಭಾಗದ ರೈತರು ಬೆಳೆಯುವ ತರಕಾರಿ ಸೇರಿದಂತೆ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡಲು ಸಹಕಾರಿಯಾಗಲಿದೆ. ಈ ಮಾದರಿಯಲ್ಲಿ ಕಲಾಕಟ್ಟೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಕಿನ್ನಾಳ ಕಲೆಯನ್ನು ಉಳಿಸಿ ಬೆಳೆಸಲು ಕಿನ್ನಾಳದಲ್ಲಿ ಕಾರ್ಯಾಗಾರವೊಂದನ್ನು ಆಯೋಜಿಸಲಾಗುವುದು ಎಂದು ಹೇಳಿದ ಅವರು, ನಗರ ಪ್ರದೇಶಗಳಲ್ಲೂ ಈ ಕಲೆಯನ್ನು ಉತ್ತೇಜಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚಿತ್ರಕಲಾ ಪರಿಷತ್ ಡಿ.ಎಲ್. ಶಂಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Comments are closed.