
ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟ್ ಮಾಡಿರುವ ಅವಹೇಳನ ಬರಹಗಳನ್ನು ಖಂಡಿಸಿ ರವಿವಾರ ಪೊಳಲಿ ರಾಜರಾಜೇಶ್ವರೀ ಕ್ಷೇತ್ರದಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಿಯ ಸನ್ನಿಧಿಗೆ ಸಾವಿರಾರು ಭಕ್ತರು ಪಾದಯಾತ್ರೆ ನಡೆಸಿದರು. ಮಧ್ಯಾಹ್ನ 12 ಗಂಟೆಗೆ ಕಟೀಲು ಕ್ಷೇತ್ರ ತಲುಪಿದ ಭಕ್ತಾಧಿಗಳು ಶ್ರೀ ಕ್ಷೇತ್ರದಲ್ಲಿ ದುರ್ಗೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಅವರು, ತಾಯಿ ಸಮಾನಳಾದ ದುರ್ಗಾಪರಮೇಶ್ವರೀ ದೇವಿಗೆ ಮಾಡಿರುವ ಅವಹೇಳನವು ಭಕ್ತರನ್ನು ಕೆರಳಿಸಿದೆ. ಪುರಾಣ ಕಾಲದಲ್ಲಿಯೂ ದೇವತೆಗಳಿಗೆ ಆಪತ್ತು ಎದುರಾದಾಗ ದೇವಿಯ ಮೊರೆ ಹೋಗುತ್ತಿದ್ದರು.ದುರುಳರಿಗೆ ಆ ದುರ್ಗೆಯೇ ಸರಿಯಾದ ಶಿಕ್ಷೆ ನೀಡುತ್ತಾಳೆ ಎಂದರು.
ಸಮಾಜದಲ್ಲಿ ಡ್ರಗ್ಸ್ ಮಾಫಿಯಾ, ಅತ್ಯಾಚಾರ, ಗೋಹತ್ಯೆ, ಭ್ರಷ್ಟಾಚಾರ, ಲವ್ ಜಿಹಾದ್, ಭಯೋತ್ಪಾದಕ ಚಟುವಟಿಕೆಗಳು ನಿರಂತರವಾಗಿ ಹೆಚ್ಚುತ್ತಲೇ ಇವೆ. ಇವುಗಳನ್ನು ತಡೆಗಟ್ಟಲು ಯುವಕರು ಪಣತೊಡಗಬೇಕೆ ವಿನ: ಸಮಾಜದಲ್ಲಿ ಕೋಮು ಸಾಮರಸ್ಯವನ್ನು ಕದಡುವುದಲ್ಲ. ನಮ್ಮೊಳಗಿನ ಭೇದಭಾವವನ್ನು ಹೋಗಲಾಡಿಸಿದಾಗ ಮಾತ್ರ ಸಾಮಾಜಿಕ ಸಮತೋಲನ ಕಾಯ್ದುಕೊಳ್ಳಲು ಸಾಧ್ಯ ಎಂದರು.

ಕೆಲವರಿಂದ ಹಿಂದೂ ಧರ್ಮದ ತಾಳ್ಮೆ ಪರೀಕ್ಷೆ ನಡೆಯುತ್ತಿದೆ. ನಾವು ಶಾಂತಚಿತ್ತರಾಗಿ ದುರ್ಗೆಯನ್ನೇ ಪ್ರಾರ್ಥಿಸೋಣ. ದುರುಳರಿಗೆ ದೇವಿಯೇ ಸರಿಯಾದ ಶಿಕ್ಷೆ ನೀಡಲಿ ಎಂದು ಕೇಮಾರು ಸಾಂದೀಪನಿ ಮಠದ ಶ್ರೀ ಈಶಧಿವಿಠಲಧಿದಾಸ ಸ್ವಾಮೀಜಿ ಹೇಳಿದರು.
ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ, ಸಂಸದರಾದ ನಳಿನ್ ಕುಮಾರ್ ಕಟೀಲು, ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ,ಮುಜರಾಯಿ ಇಲಾಖೆಯ ಮಾಜಿ ಸಚಿವ ನಾಗರಾಜ ಶೆಟ್ಟಿ, ಬಾಳೆಕೋಡಿ ಮಠದ ಶ್ರೀ ಶಶಿಕಾಂತ ಸ್ವಾಮೀಜಿ, ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಕಮಲಾ ದೇವಿಪ್ರಸಾದ ಆಸ್ರಣ್ಣ, ಶ್ರೀಹರಿ ನಾರಾಯಣದಾಸ ಆಸ್ರಣ್ಣ, ರಾಜೇಶ್ ನಾಯ್ಕ್ ಉಳಿಪಾಡಿ ಗುತ್ತು, ಸತ್ಯಜಿತ್ ಸುರತ್ಕಲ್, ರುಕ್ಮಯ ಪೂಜಾರಿ, ಈಶ್ವರ ಕಟೀಲು, ಕಿರಣ್ ಕುಮಾರ್ ಶೆಟ್ಟಿ, ಯಾದವ ಕೋಟ್ಯಾನ್, ಅಭಿಧಿಲಾಷ್ ಶೆಟ್ಟಿ, ದೇವದಾಸ್ ಶೆಟ್ಟಿ ಬಂಟ್ವಾಳ, ದೇವ ಪ್ರಸಾದ್ ಪುನರೂರು ಮತ್ತಿತರರು ಇದ್ದರು.
ಸುಮಾರು 5,000 ಮಂದಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.ಪಾದಯಾತ್ರೆಯ ಉದ್ದಕ್ಕೂ ಚೆಂಡೆ, ಶಂಖ, ಜಾಗಟೆಗಳ ನಿನಾದ ಮೊಳಗಿತು. ಪಾದಯಾತ್ರೆ ಆರಂಭದಲ್ಲಿ ನಾಸಿಕ್ ಬ್ಯಾಂಡ್ ವ್ಯವಸ್ಥೆಗೊಳಿಸಲಾಗಿತ್ತು.ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಹೆಚ್ಚಿನವರು ಬಿಳಿ ಅಂಗಿ, ಕೇಸರಿ ಲುಂಗಿ ಮತ್ತು ಕೇಸರಿ ಶಾಲು ಧರಿಸಿದ್ದರು. ಆರಂಭದಿಂದ ಕೊನೆವರೆಗೂ ಶಿಸ್ತಿನಲ್ಲಿ ಸಾಗಿದರು. ಹೆಚ್ಚಿನವರು ಬರಿಗಾಲಿ ನಲ್ಲಿಯೇ ನಡೆದು ಕ್ಷೇತ್ರ ತಲುಪಿದರು.
ಒಂದೆಡೆ ಪಾದಯಾತ್ರೆಯಲ್ಲಿ ಭಾಗಹಿಸಿದ್ದ ಭಕ್ತರು, ಇನ್ನೊಂದೆಡೆ ರವಿವಾರ ಹಾಗೂ ಸೋಣ ತಿಂಗಳು. ಆದುದರಿಂದ ದೇಗುಲದಲ್ಲಿ ಭಕ್ತರ ಸಂಖ್ಯೆ ತುಂಬಾ ಹೆಚ್ಚಾಗಿತ್ತು. ದೇವಾಲಯದ ವತಿಯಿಂದ 10,000 ಮಂದಿಗೆ ಮಧ್ಯಾಹ್ನದ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ರವಿವಾರ ಇಡೀ ದಿನದಲ್ಲಿ ದೇವಾಲಯಕ್ಕೆ ಸುಮಾರು 25,000 ಮಂದಿ ಭೇಟಿ ನೀಡಿದ್ದಾರೆ ಎಂದು ದೇಗುಲದ ಮೂಲಗಳಿಂದ ತಿಳಿದು ಬಂದಿದೆ.
Comments are closed.