ನವದೆಹಲಿ (ಪಿಟಿಐ): ಕಣಿವೆ ರಾಜ್ಯದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಕಾಶ್ಮೀರಕ್ಕೆ ತೆರಳಲಿರುವ ಸರ್ವಪಕ್ಷಗಳ ನಿಯೋಗವು ಹುರಿಯತ್ ಕಾನ್ಫರೆನ್ಸ್ ಒಳಗೊಂಡಂತೆ ಸಂಬಂಧಪಟ್ಟ ಎಲ್ಲರ ಜತೆ ಮಾತುಕತೆ ನಡೆಸಬೇಕು ಎಂಬ ಬೇಡಿಕೆಯನ್ನು ಕಾಂಗ್ರೆಸ್ ಮತ್ತು ಸಿಪಿಎಂ ಮುಂದಿಟ್ಟಿವೆ.
‘ಸರ್ವಪಕ್ಷಗಳ ನಿಯೋಗದ ಜತೆ ಮಾತುಕತೆ ನಡೆಸಲು ಸರ್ಕಾರವು ಹುರಿಯತ್ ಕಾನ್ಫರೆನ್ಸ್ ಅನ್ನು ಆಹ್ವಾನಿಸಬೇಕು. ಇತರರಿಗೆ ಆಹ್ವಾನ ನೀಡಿದಂತೆ ಅವರಿಗೂ ನೀಡಲಿ. ನಿಯೋಗವನ್ನು ಭೇಟಿ ಮಾಡಬೇಕೇ, ಬೇಡವೇ ಎಂಬುದು ಅವರಿಗೆ ಬಿಟ್ಟ ವಿಚಾರ’ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿದ್ದಾರೆ.
‘ಕಾಶ್ಮೀರ ಬಿಕ್ಕಟ್ಟಿಗೆ ಅಂತಿಮ ಪರಿಹಾರ ಕಂಡುಕೊಳ್ಳಲು ಮಾತುಕತೆಯಲ್ಲಿ ಪಾಕಿಸ್ತಾನವನ್ನೂ ಸೇರಿಸಿಕೊಳ್ಳುವುದು ಅಗತ್ಯ’ ಎಂದು ಅಭಿಪ್ರಾಯಪಟ್ಟಿದ್ದಾರೆ. ‘ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸುವ ಪ್ರಯತ್ನದಲ್ಲಿ ಸಂಬಂಧಪಟ್ಟ ಎಲ್ಲರ ಜತೆ ಮಾತುಕತೆಗೆ ಯುಪಿಎ ಸಿದ್ಧ’ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ತಿಳಿಸಿದ್ದಾರೆ.
‘ಎಲ್ಲರ ಜತೆ ಮಾತುಕತೆಗೆ ಅವಕಾಶ ಇರಬೇಕು ಎಂದು ಈ ಹಿಂದೆಯೇ ಹೇಳಿದ್ದೇವೆ. ಮಾತುಕತೆಗೆ ಯಾರನ್ನು ಆಹ್ವಾನಿಸಬೇಕು ಎಂಬುದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಧರಿಸಬೇಕು’ ಎಂದಿದ್ದಾರೆ.
ಪ್ರತಿನಿಧಿಗಳ ಸಭೆ: ಕಾಶ್ಮೀರಕ್ಕೆ ತೆರಳಲಿರುವ ಸರ್ವಪಕ್ಷಗಳ ನಿಯೋಗದಲ್ಲಿರುವ ಸಂಸದರಿಗಾಗಿ ಸರ್ಕಾರ ಶನಿವಾರ ಸಭೆ ಏರ್ಪಡಿಸಿತ್ತು. ಕಾಶ್ಮೀರ ಭೇಟಿಯ ವೇಳೆ ಚರ್ಚಿಸಬೇಕಾದ ವಿಷಯಗಳ ಬಗ್ಗೆ ಪ್ರತಿನಿಧಿಗಳಿಗೆ ಮಾಹಿತಿ ನೀಡಲಾಯಿತು.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್, ಪ್ರಧಾನಿ ಕಚೇರಿಯ ರಾಜ್ಯ ಖಾತೆ ಸಚಿವ ಜಿತೇಂದ್ರ ಸಿಂಗ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಮಾತನಾಡಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿನ ಪ್ರಸ್ತುತ ಪರಿಸ್ಥಿತಿ, ಪ್ರತ್ಯೇಕತಾವಾದಿಗಳು ಮತ್ತು ವಿವಿಧ ಸಂಘಟನೆಗಳ ನಿಲುವಿನ ಬಗ್ಗೆ ಪ್ರತಿನಿಧಿಗಳಿಗೆ ವಿವರಿಸಲಾಗಿದೆ. ಪ್ರತ್ಯೇಕತಾವಾದಿಗಳು ಸೇರಿದಂತೆ ಯಾರನ್ನು ಬೇಕಾದರೂ ಭೇಟಿಯಾಗುವ ಅಧಿಕಾರವನ್ನು ನಿಯೋಗದ ಸದಸ್ಯರಿಗೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ರಾಜನಾಥ್ ಅಥವಾ ನಿಯೋಗದಲ್ಲಿರುವ ಕೇಂದ್ರ ಸಚಿವರು ಸಂವಿಧಾನದ ಚೌಕಟ್ಟಿನೊಳಗೆ ವಿವಾದ ಬಗೆಹರಿಸಲು ಸಿದ್ಧವಿರುವವರ ಜತೆ ಮಾತ್ರ ಮಾತುಕತೆ ನಡೆಸಲಿದ್ದಾರೆ.
ಪ್ರತ್ಯೇಕತಾವಾದಿಗಳ ಜತೆ ಮಾತುಕತೆ ನಡೆಸಬೇಕೇ, ಬೇಡವೇ ಎಂಬ ಬಗ್ಗೆ ಸಭೆಯಲ್ಲಿ ಸ್ಪಷ್ಟ ನಿರ್ಧಾರ ಹೊರಬೀಳಲಿಲ್ಲ ಎನ್ನಲಾಗಿದೆ.
ನಿಯೋಗದಲ್ಲಿ ರಾಜನಾಥ್ ಮತ್ತು ಜಿತೇಂದ್ರ ಸಿಂಗ್ ಅಲ್ಲದೆ, ಹಣಕಾಸು ಸಚಿವ ಅರುಣ್ ಜೇಟ್ಲಿ, ಗುಲಾಂ ನಬಿ ಆಜಾದ್, ಲೋಕಸಭೆಯ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ನ ಹಿರಿಯ ನಾಯಕಿ ಅಂಬಿಕಾ ಸೋನಿ, ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ (ಎಲ್‌ಜೆಪಿ), ಜೆಡಿಯು ನಾಯಕ ಶರದ್ ಯಾದವ್, ಸೀತಾರಾಂ ಯೆಚೂರಿ ಮತ್ತು ಸಿಪಿಐ ನಾಯಕ ಡಿ. ರಾಜಾ ಇದ್ದಾರೆ.
ಅಂದ್ರಾಬಿ ಸಹೋದರನ ಬಂಧನ
ಶ್ರೀನಗರ (ಪಿಟಿಐ): ದುಖ್ತರನ್‌್ ಎ ಮಿಲ್ಲತ್ ಸಂಘಟನೆ ಮುಖ್ಯಸ್ಥೆ ಆಸಿಯಾ ಅಂದ್ರಾಬಿ ಅವರ ಕಿರಿಯ ಸಹೋದರ ಸೈಯದ್ ತಾಹಾ ಅಂದ್ರಾಬಿ ಅವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ತಾಂತ್ರಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾಗಿರುವ ತಾಹಾ ಅವರನ್ನು ಅವರ ನಿವಾಸದಿಂದ ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಬಂಧನದ ಹಿಂದಿನ ಕಾರಣ ತಿಳಿದುಬಂದಿಲ್ಲ. ಆಸಿಯಾ ಅವರು ಹಲವು ಸಲ ಪಾಕಿಸ್ತಾನದ ಧ್ವಜವನ್ನು ಹಾರಿಸಿ ವಿವಾದಕ್ಕೆ ಕಾರಣವಾಗಿದ್ದರು.
ಕಾಶ್ಮೀರದಲ್ಲಿ ಮತ್ತೆ ಹಿಂಸಾಚಾರ ಯುವಕನ ಸಾವು: ಉದ್ವಿಗ್ನ ಸ್ಥಿತಿ
ಶ್ರೀನಗರ: ಸರ್ವ ಪಕ್ಷಗಳ ನಿಯೋಗವು ಕಾಶ್ಮೀರಕ್ಕೆ ಭೇಟಿ ನೀಡುವ ಮುನ್ನಾ ದಿನ ಕಣಿವೆ ರಾಜ್ಯದಲ್ಲಿ ಹಿಂಸಾಚಾರ ಮರುಕಳಿಸಿ ಯುವಕನೊಬ್ಬ ಸತ್ತಿದ್ದು ನೂರಕ್ಕೂ ಹೆಚ್ಚು ನಾಗರಿಕರು ಗಾಯಗೊಂಡಿದ್ದಾರೆ.
ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ವೆಸ್ಸೊ ಹಳ್ಳಿಯಲ್ಲಿ ನಡೆದ ಹಿಂಸಾಚಾರದಲ್ಲಿ ಗಾಯಗೊಂಡಿದ್ದ ಯುವಕ ಆಸ್ಪತ್ರೆಯಲ್ಲಿ ಸತ್ತಿದ್ದಾನೆ.
ಪೆಲೆಟ್ ಗುಂಡಿನಿಂದ ಯುವಕನ ದೇಹ ಮತ್ತು ತಲೆಗೆ ಗಾಯಗಳಾಗಿತ್ತು ಎಂದು ಜಿಲ್ಲಾ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಶ್ರೀನಗರದ ಲಾಲ್ ಚೌಕ್ ಬಳಿಯ ಜೆಹಲಂ ನದಿಯಿಂದ ಯುವಕನ ಶವವನ್ನು ಹೊರಗೆ ತೆಗೆದಾಗ ಆತನ ದೇಹದ ಮೇಲೆ ಪೆಲೆಟ್ ಗುಂಡಿನ ಗಾಯಗಳಿದ್ದವು ಎಂದು ಹೇಳಲಾಗುತ್ತಿದೆ. ಯುವಕನ ದೇಹ ಪತ್ತೆಯಾದ ನಂತರ ಈ ಪ್ರದೇಶದಲ್ಲಿ ಗಲಭೆ ಆರಂಭವಾಯಿತು.
ಹರಿಸಿಂಗ್ ರಸ್ತೆಯಲ್ಲಿ ಪ್ರತಿಭಟನಾಕಾರರು ಈದ್ಗಾ ಸ್ಮಶಾನದತ್ತ ಶವ ಒಯ್ಯಲು ಪ್ರಯತ್ನಿಸಿದಾಗ ಕೇಂದ್ರ ಮೀಸಲು ಪಡೆಯ ಪೊಲೀಸರು ಬಲ ಪ್ರಯೋಗ ಮಾಡಿ ತಡೆದರು. ನಂತರ ಯುವಕನ ಶವವನ್ನು ಪೊಲೀಸ್ ನಿಯಂತ್ರಣ ಕಚೇರಿಗೆ ಒಯ್ದರು. ದೇಹದಲ್ಲಿ ಹಿಂಸಾಚಾರದಿಂದ ಆಗಿರುವ ಗಾಯಗಳಿದ್ದು, ಯುವಕನ ಗುರುತು ಪತ್ತೆಗೆ ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ 8ರಿಂದ ಆರಂಭವಾದ ಹಿಂಸಾಚಾರದಲ್ಲಿ ಇದುವರೆಗೆ ಸತ್ತವರ ಸಂಖ್ಯೆ 74ಕ್ಕೆ ಏರಿದೆ. ರಾಜ್ಯದ ವಿವಿಧೆಡೆ ಹಿಂಸಾಚಾರ ಮುಂದುವರಿದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Comments are closed.