ರಾಷ್ಟ್ರೀಯ

ಉಗ್ರ ಅಬು ಜುಂದಾಲ್ ಸೇರಿ 7 ಜನರಿಗೆ ಜೀವಾವಧಿ ಶಿಕ್ಷೆ

Pinterest LinkedIn Tumblr

Jundal-Webನವದೆಹಲಿ: 2006ರಲ್ಲಿ ಔರಂಗಾಬಾದ್ನಲ್ಲಿ ಅಕ್ರಮ ಶಸ್ತ್ರಾಸ್ತ್ರ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ 26/11ಮುಂಬೈ ದಾಳಿಯ ಸೂತ್ರಧಾರ ಅಬು ಜುಂದಾಲ್ ಸೇರಿ 7 ಜನರಿಗೆ ಮೋಕಾ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಇದೇ ಪ್ರಕರಣದಲ್ಲಿ ಕೋರ್ಟ್ ಇಬ್ಬರು ಅಪರಾಧಿಗಳಿಗೆ 14 ವರ್ಷ ಜೈಲು ಶಿಕ್ಷೆ ಮತ್ತು ಉಳಿದ ಮೂವರು ಅಪರಾಧಿಗಳಿಗೆ 8 ವರ್ಷ ಶಿಕ್ಷೆ ವಿಧಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ಮೋಕಾ ವಿಶೇಷ ನ್ಯಾಯಾಲಯ ಕಳೆದ ವಾರ ಅಬು ಜುಂದಾಲ್ ಸೇರಿದಂತೆ ಒಟ್ಟು 12 ಜನರು ದೋಷಿಗಳು ಎಂದು ತೀರ್ಪು ನೀಡಿತ್ತು. ಮತ್ತು 8 ಜನರನ್ನು ಖುಲಾಸೆಗೊಳಿಸಿತ್ತು.

2002ರ ಗುಜರಾತ್ ಗಲಭೆಯ ಬಳಿಕ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ವಿಶ್ವ ಹಿಂದು ಪರಿಷತ್ನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರನ್ನು ಹತೈಗೈಯಲು ಸಂಚು ರೂಪಿಸಿದ್ದ ಜುಂದಾಲ್ ಮತ್ತು ಆತನ ಸಹಚರರು ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಸಂಗ್ರಹಿಸಿದ್ದರು.

2006ರ ಮೇ 8ರಂದು ಮಹಾರಾಷ್ಟ್ರ ಎಟಿಎಸ್ ತಂಡವು ಔರಂಗಾಬಾದ್ನ ಚಂದ್ವಾಡ್ – ಮನ್ಮಾದ್ ಹೆದ್ದಾರಿಯಲ್ಲಿ ಟಾಟಾ ಸುಮೋ, ಇಂಡಿಕಾ ಕಾರನ್ನು ಬೆನ್ನಟ್ಟಿ ಮೂವರು ಶಂಕಿತ ಉಗ್ರರನ್ನು ಬಂಧಿಸಿ ಅವರಿಂದ 30 ಕೆ.ಜಿ. ಆರ್ಡಿಎಕ್ಸ್, 10 ಎ.ಕೆ.47ಬಂದೂಕು, 3,200 ಬುಲೆಟ್ಗಳನ್ನು ವಶಪಡಿಸಿ ಕೊಂಡಿತ್ತು. ಇಂಡಿಕಾ ಕಾರನ್ನು ಚಲಾಯಿಸುತ್ತಿದ್ದ ಜುಂದಾಲ್ ತಪ್ಪಿಸಿಕೊಂಡು ಪರಾರಿಯಾಗಿದ್ದ. 2012ರಲ್ಲಿ ಜುಂದಾಲ್ ಬಂಧನದ ಬಳಿಕ ಆತ ನೀಡಿದ ಮಾಹಿತಿಯಂತೆ ನಾಸಿಕ್ನಲ್ಲಿ 13 ಕೆ.ಜಿ.ಆರ್ಡಿಎಕ್ಸ್, 1,200 ಕ್ಯಾಟ್ರಿಡ್ಜ್, 50 ಹ್ಯಾಂಡ್ ಗ್ರೆನೇಡ್ಗಳು, 22 ಸುತ್ತು ಮದ್ದುಗುಂಡುಗಳು ಸಿಕ್ಕಿದ್ದವು.

ಮೋದಿ, ತೊಗಾಡಿಯಾ ಹತ್ಯೆಗೆ ಸಂಚು ಹಾಗೂ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹದ ಅಡಿಯಲ್ಲಿ ಜುಂದಾಲ್ ಸೇರಿದಂತೆ 22 ಮಂದಿ ವಿರುದ್ಧ ದೋಷಾರೋಪ ಹೊರಿಸಲಾಗಿತ್ತು. ಜುಂದಾಲ್ ಬಂಧನದ ಬಳಿಕ ಮೋಕಾ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಕಳೆದ ಮಾರ್ಚ್ನಲ್ಲಿ ವಿಚಾರಣೆ ಮುಕ್ತಾಯಗೊಂಡಿತ್ತು.

Comments are closed.