
ಕೋಲ್ಕತ: ಜೀವನದಲ್ಲಿಯೇ ಒಂದೇ ಒಂದು ದಿನ ತನ್ನ ಆರೋಗ್ಯ ಕೆಟ್ಟಿದೆ ಎಂದು ಬೇರೆಯವರಿಗೆ ತೊಂದರೆ ಕೊಡದ 120 ವರ್ಷ ವಯಸ್ಸಿನ ಬಾಬಾ ಇದೇ ಮೊದಲ ಬಾರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು!
ಅಚ್ಚರಿಯಾದರೂ ಇದು ಸತ್ಯ. ಸ್ವಾಮಿ ಶಿವಾನಂದ ಅವರು ಇಷ್ಟು ವರ್ಷ ಹೇಗೆ ಆರೋಗ್ಯ ಕಾಪಾಡಿಕೊಂಡಿದ್ದರು ಎನ್ನುವುದು ಅವರ ಭಕ್ತಾದಿಗಳಲ್ಲಿ ಸಾಕಷ್ಟು ಆಶ್ಚರ್ಯವನ್ನುಂಟು ಮಾಡಿದೆ. ಶನಿವಾರ ವಯೋಸಹಜ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಸ್ವಾಮಿ ಶಿವಾನಂದ ಅವರ ಎಕ್ಸ್ರೇ ಮಾಡಿ, ಪರೀಕ್ಷೆ ನಡೆಸಿರುವ ವೈದ್ಯರು ಆರೋಗ್ಯವಾಗಿದ್ದಾರೆ. ವಯೋಸಹಜವಾದ ಸಮಸ್ಯೆಗಳಿವೆಯಷ್ಟೇ ಎಂದು ಆಶ್ರಮಕ್ಕೆ ಕಳುಹಿಸಿಕೊಟ್ಟಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚೆಗಿನ ವರ್ಷಗಳ ವರೆಗೂ ಫಿಟ್ನೆಟ್ ಕಾಪಾಡಿಕೊಂಡು, ತಮ್ಮ ಯಾವುದೇ ಕೆಲಸಕ್ಕೆ ಬೇರೆಯವರನ್ನು ಅವಲಂಭಿಸದ ಸ್ವಾಮಿ ಶಿವಾನಂದ ಅವರು ಈಗೀಗ ದೈಹಿಕ ಕ್ಷಮತೆ ಕಾಪಾಡಿಕೊಳ್ಳುವಲ್ಲಿ ಸಾಧ್ಯವಾಗದಿರುವ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಸ್ವಾಮಿ ಶಿವಾನಂದ ಅವರು ಪ್ರತಿದಿನ ನುರಿದ ಹಸಿಮೆಣಸಿನಕಾಯಿ ಪದಾರ್ಥ, ಬೇಯಿಸಿದ ಆಹಾರ ಸೇವನೆಯ ಜತೆಗೆ ಒಂದಿಷ್ಟು ವ್ಯಾಯಾಮವೇ ಅವರ ಫಿಟ್ನೆಸ್ ಗುಟ್ಟು. ಇನ್ನು ಸಹಾಯ ಮಾಡಿ ಸಂತೋಷ ಅನುಭವಿಸುವುದು ಅವರ ನಿತ್ಯ ಕರ್ಮ ಎನ್ನುತ್ತಾರೆ ಅವರನ್ನು ಹತ್ತಿರದಿಂದ ಬಲ್ಲ ಭಕ್ತಾದಿಗಳು. ಇಷ್ಟನ್ನು ಹೊರತು ಪಡಿಸಿ ಬೇರೇನೂ ಇಲ್ಲ ಎನ್ನುತ್ತಾರೆ.
ಸ್ವಾಮಿ ಶಿವಾನಂದ ಅವರ ಆಧಾರ ಕಾರ್ಡ್ ಮತ್ತು ಪಾಸ್ಪೋರ್ಟ್ ಕಾಡುಗಳಲ್ಲಿ 120 ವರ್ಷ ಎಂದಿದೆಯಾದರೂ ಅವರು ಇಂದಿಗೂ 50ರಿಂದ 60 ವರ್ಷ ಆಗಿರುವವರಂತೆ ಇದ್ದಾರೆ. ಕೆನ್ನೆಗಳು ಸಾಕಷ್ಟು ಸುಕ್ಕು ಕಟ್ಟಿಕೊಂಡಿದೆಯಾದರೂ ಅವರಲ್ಲಿರುವ ಉತ್ಸಾಹ ಎಲ್ಲರನ್ನು ಅಚ್ಚರಿಗೊಳಿಸುತ್ತದೆ ಎನ್ನುವುದು ಹತ್ತಿರದಿಂದ ಬಲ್ಲವರ ಅಂಬೋಣ. ಚಿಕಿತ್ಸೆಯ ವೇಳೆ ಸ್ವತಃ ವೈದ್ಯರು ಮತ್ತು ನರ್ಸ್ಗಳು ಆಶ್ಚರ್ಯ ಚಕಿತರಾಗಿ ನಿಂತಿದ್ದರು ಎನ್ನುತ್ತಾರೆ.
1896, ಆಗಸ್ಟ್ 8 ಸ್ವಾಮಿ ಶಿವಾನಂದ ಅವರ ಜನ್ಮದಿನ. ಬೆಹಾಲಾ ಎನ್ನುವ ಹಳ್ಳಿಯಲ್ಲಿ ಜನಿಸಿದ ಸ್ವಾಮಿ ಶಿವಾನಂದ ಅವರು ಬದುಕು ಸಾಗಿಸುತ್ತಿರುವ ಅತಿ ಹಿರಿಯರು ಎನಿಸಿಕೊಂಡಿದ್ದಾರೆ. 2013ರಲ್ಲಿ ನಿಧನರಾದ, ಅತಿ ಹೆಚ್ಚು ವರ್ಷ ಬದುಕು ನಡೆಸಿ ಗಿನ್ನೆಸ್ ದಾಖಲೆ ನಿರ್ಮಿಸಿದ ಜಪಾನ್ನ ಜಿರೋಯ್ಮಾನ್ ಕಿಮುರಾ ಅವರಿಂತ ಸ್ವಾಮಿ ಶಿವಾನಂದ ಅವರು 5ವರ್ಷ ಚಿಕ್ಕವರಾಗಿದ್ದಾರೆ. ಸ್ವಾಮಿ ಶಿವನಂದ ಅವರು ಮೂಲತಃ ವಾರಾಣಸಿಯವರಾಗಿದ್ದಾರೆ.
ಸ್ವಾಮಿ ಶಿವಾನಂದ ಅವರು ಕಳೆದ ಕೆಲವು ತಿಂಗಳಿಂದ ತಮ್ಮ ಭಕ್ತರ ಜತೆ ಸಾಲ್ಟ್ಲೇಕ್ನಲ್ಲಿದ್ದಾರೆ. ಕೆಲ ದಿನಗಳಿಂದ ಪ್ರವಚನ ಮುಗಿಸಿದ ಬಳಿಕ ತಲೆನೋವು ಎಂದು ಹೇಳಿದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆರಂಭದಲ್ಲಿ ಬೇಡ ಎಂದು ಹೇಳಿಕೊಳ್ಳುತ್ತಿದ್ದ ಸ್ವಾಮಿ ಶಿವನಂದ ಅವರು ಬಳಿಕ ಭಕ್ತರ ಒತ್ತಾಯಕ್ಕೆ ಒಪ್ಪಿಕೊಂಡಿದ್ದರು ಎನ್ನಲಾಗಿದೆ.
ಚಿಕಿತ್ಸೆ ಬಳಿಕ ಪ್ರತಿಕ್ರಿಯಿಸಿದ್ದ ವೈದ್ಯ ಎಸ್.ಸಿ. ಗರೈ, ನನ್ನ ಸೇವಾವಧಿಯಲ್ಲಿ ಇಂಥವರಿಗೆ ಚಿಕಿತ್ಸೆ ನೀಡಿದ್ದೇ ಇಲ್ಲ. ಅಷ್ಟು ವಯಸ್ಸಾದರು ಅವರಲ್ಲಿರುವ ಉತ್ಸಾಹ ಎಲ್ಲರನ್ನೂ ಅಚ್ಚರಿಗೊಳಿಸುವಂತದ್ದು ಎಂದಿದ್ದಾರೆ.
ಸಹಜವಾಗಿ ಅವರಲ್ಲಿ ರಕ್ತದೊತ್ತಡದಿಂದ ತಲೆನೋವು ಬಂದಿರುವುದಷ್ಟೆ. ಅವರು ಆರೋಗ್ಯವಾಗಿದ್ದು, ಯಾವುದೇ ಆತಂಕವಿಲ್ಲ. ಈಗಲೂ ಯುವಕರಂತೆ ಇರುವ ಅವರಲ್ಲಿನ ಉತ್ಸಾಹ ಮೆಚ್ಚುವಂತದ್ದು ಎಂದು ಆಸ್ಪತ್ರೆಯ ಕಾರ್ಡಿಯೋಲಾಜಿಸ್ಟ್ ಡಾ. ಪಿ.ಸಿ. ಮೊಂಡಲ್ ಹೇಳಿದ್ದಾರೆ.
Comments are closed.