*ಯೋಗೀಶ್ ಕುಂಭಾಸಿ
ಉಡುಪಿ: ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿ ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯದಲ್ಲೇ ಹೆಸರು ಗಳಿಸಿದ ಉಡುಪಿ ಎಸ್ಪಿ ಕೆ. ಅಣ್ಣಾಮಲೈ ಅವರನ್ನು ಚಿಕ್ಕಮಗಳೂರು ಎಸ್ಪಿ ಆಗಿ ವರ್ಗಾಯಿಸಿ ಸರಕಾರ ಆದೇಶಿಸಿದೆ.
ಐಪಿಎಸ್ 2006 ಬ್ಯಾಚಿನ ಅಧಿಕಾರಿ ಕೆ.ಟಿ. ಬಾಲಕೃಷ್ಣ ಅವರು ಉಡುಪಿ ಜಿಲ್ಲೆಗೆ ನೂತನ ಎಸ್ಪಿ ಆಗಲಿದ್ದಾರೆ. ಇವರು ಈ ಹಿಂದೆ ಗದಗ ಜಿಲ್ಲೆಯ ಎಸ್ಪಿ ಆಗಿದ್ದವರು.

ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಎ.ಎಸ್ಪಿ ಆಗಿದ್ದ ಅಣ್ಣಾಮಲೈ ಅವರು ಕುಂದಾಪುರದ ಗಂಗೊಳ್ಳಿ ಹಾಗೂ ಕೋಡಿ ಭಾಗದಲ್ಲಿ ಕೋಮುಗಲಭೆ ನಡೆಯುವ ಆ ಕರಾಳ ದಿವಸದಲ್ಲಿ ಪದೋನ್ನತಿ ಹೊಂದಿ 2015 ಜನವರಿ 1 ರಿಂದ ಉಡುಪಿ ಎಸ್ಪಿ ಆಗಿ ಅಧಿಕಾರ ಸ್ವೀಕರಿಸಿದ್ದರು. ಬಳಿಕ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಗೆ ಅವರು ಕೈಗೊಂಡ ಕ್ರಮಗಳು ಜಿಲ್ಲೆಯಲ್ಲಿ ಸುಧಾರಣೆಯ ಗಾಳಿ ಬೀಸುವ ಹಾಗೆ ಮಾಡಿತ್ತು. ಇನ್ನು ವಿದ್ಯಾರ್ಥಿಗಳ ಬಗ್ಗೆ ಅತೀವ ಕಾಳಜಿ ಹೊಂದಿದ್ದ ಎಸ್ಪಿ ಅವರು ಜಿಲ್ಲೆಯ ಹಲವಾರು ಶಾಲಾ-ಕಾಲೇಜಿಗೆ ತೆರಳಿ ಅಲ್ಲಿ ಕಾನೂನಿನ ಬಗ್ಗೆ ಮಾಹಿತಿ ನೀಡುವುದು ಮಾತ್ರವಲ್ಲದೇ ಮಾಧಕ ವ್ಯಸನದ ದುಷ್ಪರಿಣಾಮಗಳು, ಸಂಚಾರಿ ನಿಯಮಗಳ ಪಾಲನೆಯಲ್ಲಿ ವಿದ್ಯಾರ್ಥಿಗಳ ಅನುಸರಿಸಬೇಕಾದ ಕರ್ತವ್ಯದ ಬಗ್ಗೆ ಮಾತುಗಳನ್ನಾಡಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದವರು.

ವಿದ್ಯಾರ್ಥಿಗಳ ಮಟ್ಟಿಗೆ ‘ಹೀರೋ’ ಆಗಿದ್ದ ಎಸ್ಪಿ ಅವರು ತಮ್ಮೂರಿಗೆ ಅಥವಾ ತಮ್ಮ ಶಾಲೆ-ಕಾಲೇಜಿಗೆ ಬಂದರೆಂದರೇ ಅಂದು ಅಲ್ಲಿ ಹಬ್ಬದ ವಾತಾವರಣ. ಯಾರೂ ಕೂಡ ಕಾಲೇಜು ಬಂಕ್ ಮಾಡುತ್ತಿರಲಿಲ್ಲ. ಸೆಲ್ಫಿ, ಗ್ರೂಫ್ ಫೋಟೋ ಮೊದಲಾದವುಗಳನ್ನು ತಮ್ಮ ನೆಚ್ಚಿನ ಅಧಿಕಾರಿಯಾದ ಅಣ್ಣಾಮಲೈ ಅವರೊಂದಿಗೆ ತೆಗೆದುಕೊಳ್ಳುವುದೇ ವಿದ್ಯಾರ್ಥಿಗಳು ಅವರ ಬಗೆಗಿಟ್ಟ ಅಭಿಮಾನಕ್ಕೆ ಹಿಡಿದ ಕೈಗನ್ನಡಿ. ಇನ್ನು ಸೈಕಲಿಂಗ್ ಬಗ್ಗೆ ಅಣ್ಣಾಮಲೈ ಅವರು ತೋರಿದ ಕಾಳಜಿ ಬಗ್ಗೆ ಅದೆಷ್ಟೋ ಯುವಕರು ಫಿದಾ ಆಗಿದ್ದರು.

ಜಿಲ್ಲೆಯಲ್ಲಿ ನಡೆದ ಕಳ್ಳತನ ಪ್ರಕರಣಗಳು, ಕೊಲೆ, ಅತ್ಯಾಚಾರ ಪ್ರಕರಣಗಳು ಸೇರಿದಂತೆ ಇನ್ನಿತರ ಕ್ರೈಮ್ ಗಳನ್ನು ತನ್ನದೇ ಆದ ಚಾಕಾಚಕ್ಯತೆ ಮೂಲಕ ಪೊಲೀಸರ ತಂಡದೊಂದಿಗೆ ಭೇದಿಸಿ ಅದಕ್ಕೊಂದು ಮೋಕ್ಷ ನೀಡಿದ ಖ್ಯಾತಿ ಇವರದ್ದು. ತಾವು ಎಸ್ಪಿ ಆಗಿ ಬಂದ ತರುವಾಯ ಪತ್ರಿಕೆಗಳಲ್ಲಿ ಕೆಲವೊಬ್ಬರು ಹಾಕಿದ ಶುಭಾಶಯ ಜಾಹಿರಾತುಗಳಿಗೆ ಕಡಿವಾಣ ಹಾಕಿದ ಎಸ್ಪಿ ಅಣ್ಣಾಮಲೈ ಅವರು ಎಂದಿಗೂ ಯಾರೊಂದಿಗೂ ರಾಜಿಯಾಗದೇ ಯಾವ ಪ್ರಚಾರಕ್ಕೆ ತಲೆಭಾಗದೇ, ಖತರ್ನಾಕ್ ಮಂದಿಯನ್ನ ಹತ್ತಿರದ ಸೇರಿಸಿದ್ದೇ ಇವರ ದಕ್ಷತೆಗೆ ಉದಾಹರಣೆ.


ಈ ವರ್ಷದ ಜನವರಿಯಲ್ಲಿಯೇ ಎಸ್ಪಿ ಅಣ್ಣಾಮಲೈ ಅವರ ವರ್ಗಾವಣೆ ಬಗ್ಗೆ ಉಹಾಪೋಹದ ಮಾತುಗಳು ಬಂತಾದರೂ ಅದೆಲ್ಲವೂ ಸತ್ಯಕ್ಕೆ ದೂರವಾಗಿತ್ತು. ಅಂದು ಕೂಡ ಎಸ್ಪಿ ಅವರ ವರ್ಗಾವಣೆಯ ಬಗ್ಗೆ ಸಾರ್ವಜನಿಕರು ಪ್ರತಿಭಟನೆಗೆ ಸಜ್ಜಾಗಿದ್ದರು.
ಸರಕಾರದ ವರ್ಗಾವಣೆಯಂತೆ ಈಗಾಗಲೇ ಈ ಆದೇಶ ಹೊರಬಿದ್ದಿದೆ. ಖಡಕ್ ಅಧಿಕಾರಿಯೋರ್ವರು ಎಲ್ಲೇ ಇದ್ದರು ಖಡಕ್ ಆಗಿರ್ತಾರೆ. ಆ ಜಿಲ್ಲೆಯ ಜನರಿಗೆ ನ್ಯಾಯ ಒದಗಿಸ್ತಾರೆ ಎನ್ನುತ್ತಾರೆ ಅವರನ್ನು ಬಲ್ಲ ಹತ್ತಿರದವರು.
Comments are closed.