
ಟೋಕಿಯೊ: ದುಷ್ಕರ್ಮಿಯೊಬ್ಬನ ಅಟ್ಟಹಾಸಕ್ಕೆ ಜಪಾನ್ ಬೆಚ್ಚಿ ಬಿದ್ದಿದ್ದು, ವಿಕಲಾಂಗರ ಆಶ್ರಮದ ಮೇಲೆ ದಾಳಿ ಮಾಡಿದ ದುಷ್ಕರ್ಮಿ 19 ಮಾನಸಿಕ ಅಸ್ವಸ್ಥರನ್ನು ಚಾಕುವಿನಿಂದ ಇರಿದು ಕೊಂದು ಹಾಕಿರುವ ಘಟನೆ ಸೋಮವಾರ ತಡರಾತ್ರಿಯಲ್ಲಿ ನಡೆದಿದೆ.
ಜಪಾನ್ ರಾಜಧಾನಿ ಟೋಕಿಯೋದಿಂದ ಆಣತಿದೂರದಲ್ಲಿರುವ ಸಗಾಮಿಹಾರ ಪ್ರದೇಶದಲ್ಲಿರುವ ವಿಕಲಾಂಗ ಮತ್ತು ಮಾನಸಿಕ ಅಸ್ವಸ್ಥರ ಆಶ್ರಮದೊಳಕ್ಕೆ ಏಕಾಏಕಿ ನುಗ್ಗಿದ ಆಗಂತುಕ ತನ್ನ ಬಳಿ ಇದ್ದ ಚಾಕುವಿನಿಂದ ಮನಬಂದಂತೆ ಸಿಕ್ಕಸಿಕ್ಕವರಿಗೆ ಚುಚ್ಚಿ ದಾರುಣವಾಗಿ ಹತ್ಯೆ ಮಾಡಿದ್ದಾನೆ. ಘಟನೆಯಲ್ಲಿ ಸುಮಾರು 19ಮಂದಿ ಸ್ಥಳದ್ಲಲೇ ಸಾವನ್ನಪ್ಪಿದ್ದು, 20 ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಶ್ರಮದ ನೆರೆ-ಹೊರೆಯವರು ವಿಚಾರವನ್ನು ತಕ್ಷಣವೇ ಪೊಲೀಸರಿಗೆ ತಿಳಿಸಿದ್ದು, ಕೂಡಲೇ ಪೊಲೀಸರು ಸ್ಥಳಕ್ಕಾಗಮಿಸಿದರೂ, ಅಷ್ಟುಹೊತ್ತಿಗಾಗಲೇ ಹತ್ತಾರು ಮಂದಿ ಸಾವನ್ನಪ್ಪಿದ್ದರು.
ಸುಮಾರು 29 ಆ್ಯಂಬುಲೆನ್ಸ್ ಗಳಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು. ಮೂಲಗಳ ಪ್ರಕಾರ ಆಸ್ಪತ್ರೆಯಲ್ಲಿರುವ 20ಕ್ಕೂ ಹೆಚ್ಚು ಮಂದಿಯ ಪೈಕಿ ಐವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಪ್ರಸ್ತುತ ಕೊಲೆಗಾರನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಬಂಧಿತನನ್ನು 26 ವರ್ಷದ ಸ್ಥಳೀಯ ಖಾಸಗಿ ಸಂಸ್ಥೆಯ ಉದ್ಯೋಗಿ ಎಂದು ಗುರುತಿಸಲಾಗಿದೆ. ಅಂತೆಯೇ ಈತ ಇದೇ ವಿಕಲಾಂಗ ಸಂಸ್ಥೆಯ ಹಳೆಯ ನೌಕರನಾಗಿದ್ದ ಎಂದು ತಿಳಿದುಬಂದಿದೆ. ವಿಚಾರಣೆ ವೇಳೆ ಪೊಲೀಸರಿಗೆ ತನ್ನ ಹತ್ಯಾಕಾಂಡದ ಕುರಿತು ಬಾಯಿ ಬಿಟ್ಟಿರುವ ಆತ “ಜಗತ್ತಿನಲ್ಲಿ ವಿಕಲಾಂಗರು ಮತ್ತು ಮಾನಸಿಕ ಅಸ್ವಸ್ಥರು ಇರಲೇಬಾರದು, ಅದಕ್ಕಾಗಿ ಅವರನ್ನು ಹತ್ಯೆ ಮಾಡಿದ್ದೇನೆ” ಎಂದು ಹೇಳಿಕೆ ನೀಡಿದ್ದಾನೆ.
ಜಪಾನ್ ಇತಿಹಾಸದಲ್ಲಿ ವ್ಯಕ್ತಿಯೋರ್ವ ನಡೆಸಿರುವ ಅತೀ ದೊಡ್ಡ ಘನಘೋರ ದಾಳಿ ಇದಾಗಿದೆ ಎಂದು ಜಪಾನ್ ಮಾಧ್ಯಮಗಳು ವರದಿ ಪ್ರಸಾರ ಮಾಡಿವೆ.
Comments are closed.