ಕರ್ನಾಟಕ

ಆಗಿದ್ದು ಲವ್ ಮ್ಯಾರೇಜ್….ಇನ್ನೊಬ್ಬನೊಂದಿಗಿತ್ತು ಪತ್ನಿಗೆ ಅನೈತಿಕ ಸಂಬಂಧ….ಕೊನೆಗೆ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಂದ

Pinterest LinkedIn Tumblr

murder111

ಬೆಂಗಳೂರು: ಕುಟುಂಬದವರ ವಿರೋಧದ ನಡುವೆಯೂ ಪ್ರೇಮ ವಿವಾಹವಾಗಿದ್ದ ದಂಪತಿಗೆ ಒಂದು ಮಗು ಇತ್ತು. ಆದರೆ ಪರಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಪತ್ನಿ, ಎಷ್ಟೇ ಬುದ್ಧಿ ಹೇಳಿದರೂ ತಿದ್ದಿಕೊಳ್ಳಲಿಲ್ಲ. ಕಾರಣ, ರೊಚ್ಚಿಗೆದ್ದ ಪತಿ ಮಚ್ಚಿನಿಂದ ಕೊಚ್ಚಿ ಪತ್ನಿಯನ್ನು ಕೊಂದು ಬಳಿಕ ಪೊಲೀಸರಿಗೆ ಶರಣರಾಗಿರುವ ಘಟನೆ ಗುರುವಾರ ರಾತ್ರಿ ಸುಂಕದಕಟ್ಟೆಯಲ್ಲಿ ನಡೆದಿದೆ.

ಸುಂಕದಕಟ್ಟೆ ಬಳಿಯ ಶ್ರೀನಿವಾಸನಗರದ ೯ನೇ ಕ್ರಾಸ್ ನಿವಾಸಿ ಪಲ್ಲವಿ (೨೪) ಕೊಲೆಯಾದವರು. ಪುನೀತ್ ಕುಮಾರ್ (೨೮) ಕೊಲೆ ಮಾಡಿ ಪೊಲೀಸರಿಗೆ ಶರಣಾದವ.

ಏನಿದು ಪ್ರಕರಣ: ಪಲ್ಲವಿ ಮತ್ತು ಆಟೋ ಚಾಲಕ ಪುನೀತ್ ಕುಮಾರ್ ಐದು ವರ್ಷ ಹಿಂದೆ ಪರಸ್ಪರ ಪ್ರೀತಿಸಿ ಕುಟುಂಬದವರ ವಿರೋಧ ನಡುವೆ ವಿವಾಹವಾಗಿದ್ದರು. ಕೆಲ ತಿಂಗಳು ಪ್ರತ್ಯೇಕವಾಗಿ ನೆಲೆಸಿದ್ದು, ಬಳಿಕ ಎರಡೂ ಕುಟುಂಬಗಳು ಒಂದಾಗಿದ್ದವು. ದಂಪತಿ ಎರಡು ವರ್ಷ ಉತ್ತಮವಾಗಿ ಸಂಸಾರ ನಡೆಸಿದ್ದರು. ಈ ನಡುವೆ ಪಲ್ಲವಿ ಪರಪುರುಷನೊಂದಿಗೆ ಸ್ನೇಹ ಬೆಳೆಸಿ ಮನೆ ಬಿಟ್ಟು ಹೋಗಿದ್ದರು. ಆಗ ಎರಡೂ ಕುಟುಂಬದ ಹಿರಿಯರು ಸಂಧಾನ ನಡೆಸಿದ್ದರು.

ಕೆಲಕಾಲ ಅನ್ಯೋನ್ಯವಾಗಿದ್ದರೂ ಪಲ್ಲವಿ ಮತ್ತೆ ಪರಪುರುಷನ ಸಹವಾಸಕ್ಕೆ ಬಿದ್ದಿದ್ದರು. ಈ ವಿಚಾರ ಪುನೀತ್‌ಗೆ ಗೊತ್ತಾಗಿ ಬುದ್ಧಿವಾದ ಹೇಳಿದ್ದ. ಆದರೂ ಆಕೆ ಅನೈತಿಕ ಸಂಬಂಧ ಮುಂದುವರಿಸಿದ್ದಳು. ಈ ವಿಚಾರವಾಗಿ ದಂಪತಿ ನಡುವೆ ಜಗಳ ನಡೆದು, ಪಲ್ಲವಿ ಕಳೆದ ಆರು ತಿಂಗಳ ಹಿಂದೆ ತವರು ಮನೆಗೆ ಹೋಗಿದ್ದಳು. ಈ ನಡುವೆ ಪುನೀತ್ ಆಕೆಯ ವರ್ತನೆಯಿಂದ ಬೇಸತ್ತು ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ: ವಿಚ್ಛೇದನ ಅರ್ಜಿ ಗುರುವಾರ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿದ್ದು, ದಂಪತಿ ಹಾಜರಾಗಿದ್ದರು. ಈ ವೇಳೆ ಪಲ್ಲವಿ ತನಗೆ ವಿಚ್ಛೇದನ ಬೇಡ. ಪತಿಯೊಂದಿಗೆ ಜೀವನ ನಡೆಸುವುದಾಗಿ ಹೇಳಿದ್ದರು. ಪುನೀತ್ ಕೂಡ ಇದಕ್ಕೆ ಸಮ್ಮತಿಸಿದ್ದರು. ನ್ಯಾಯಾಲಯದಿಂದ ಹೊರ ಬರುತ್ತಿದ್ದಂತೆ ಪಲ್ಲವಿ, ಪುನೀತ್‌ಗೆ ಬೆದರಿಕೆ ಹಾಕಿ ಸರಿಯಾಗಿ ಸಂಸಾರ ಮಾಡದಿದ್ದರೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.

ರಾತ್ರಿ ಮನೆಗೆ ಬಂದ ಪುನೀತ್, ಪತ್ನಿಗೆ ಕರೆ ಮಾಡಿ ಮನೆಗೆ ಬರುವಂತೆ ಹೇಳಿದ್ದಾನೆ. ಈ ವೇಳೆ ತನ್ನ ತಾಯಿಯನ್ನು ಜತೆಯಲ್ಲಿ ಕರೆದುಕೊಂಡು ಪತಿ ಮನೆಗೆ ಆಕೆ ಬಂದಿದ್ದಾಳೆ. ಪತ್ನಿ ಮನೆ ಒಳಗೆ ಬರುತ್ತಿದ್ದಂತೆ ಪುನೀತ್ ಏಕಾಏಕಿ ಆಕೆಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದರು. ಈ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.