ಕರ್ನಾಟಕ

ಸಚಿವ ಜಾರ್ಜ್ ಸೇರಿದಂತೆ ಇಬ್ಬರು ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ ಮೃತ ಗಣಪತಿ ಪತ್ನಿ

Pinterest LinkedIn Tumblr

ganapathi

ಕುಶಾಲನಗರ: ಮಡಿಕೇರಿಯ ಲಾಡ್ಜ್ ವೊಂದರಲ್ಲಿ ಆತ್ಮಹತ್ಯೆಗೆ ಶರಣಾದ ಮೃತ ಡಿವೈಎಸ್ ಪಿ ಎಂ.ಕೆ ಗಣಪತಿ ಅವರ ಪತ್ನಿ ಪಾವನಾ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಮತ್ತು ಇಬ್ಬರು ಅಧಿಕಾರಿಗಳ ವಿರುದ್ಧ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆರು ಪುಟಗಳ ದೂರು ನೀಡಿರುವ ಪಾವನಾ ತಮ್ಮ ಪತಿಯ ಸಾವಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ. ಡಿವೈಎಸ್‌ಪಿ ಎಂ.ಕೆ. ಗಣಪತಿ ಪುತ್ರರಾದ ನೇಹಾಲ್‌ ಹಾಗೂ ಸೋಹಿಲ್‌ ಅವರು ಕುಶಾಲನಗರದ ಗ್ರಾಮಾಂತರ ಪೊಲೀಸ್‌ ಠಾಣೆಗೆ ಭಾನುವಾರ ರಾತ್ರಿ ಆರು ಪುಟಗಳ ದೂರು ಸಲ್ಲಿಸಿದ್ದರೂ ಸಚಿವ ಕೆ.ಜೆ. ಜಾರ್ಜ್‌, ಐಜಿಪಿ ಪ್ರಣವ್‌ ಮೊಹಂತಿ, ಎಡಿಜಿಪಿ ಎ.ಎಂ. ಪ್ರಸಾದ್‌ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ ಘಟನೆ ನಡೆದಿದೆ.

ಪೊಲೀಸರು ಐ ಆರ್ ದಾಖಲಿಸಿಕೊಳ್ಳುವುದನ್ನು ವಿರೋಧಿಸಿ ಜೆಡಿಎಸ್ ಕಾರ್ಯಕರ್ತರು ಪೊಲೀಸ್ ಠಾಣೆ ಹೊರಗೆ ಪ್ರತಿಭಟನೆ ನಡೆಸಿದರು.

ತಮ್ಮ ಪತಿ ಸಾಯುವ ಮುನ್ನ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಗಳು ಸತ್ಯವಾಗಿದ್ದು ಮೂವರ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲು ಮಾಡಬೇಕು. ಮೂವರ ಕಿರುಕುಳದಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಸಾಕ್ಷ್ಯನಾಶ ಪಡಿಸಲು ಮುಂದಾಗಿದ್ದಾರೆ. ಎಲ್ಲವನ್ನು ಸಂರಕ್ಷಿಸಿ ನಮಗೆ ನ್ಯಾಯಕೊಡಿಸಿ ಎಂದು ಪಾವನಾ ಮನವಿ ಮಾಡಿದ್ದಾರೆ.

ನನ್ನ ಪತಿ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ. ಕಾನೂನು ಚೌಕಟ್ಟು ಮೀರಿ ಕರ್ತವ್ಯ ನಿರ್ವಹಿಸುತ್ತಿರಲಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರು. ದೈಹಿಕ ಹಾಗೂ ಮಾನಸಿಕವಾಗಿ ಸಮರ್ಥರಿದ್ದರು. 1996ರಲ್ಲಿ ನಮ್ಮಿಬ್ಬರ ವಿವಾಹ ನಡೆದಿತ್ತು. 2008ರಲ್ಲಿ ನಡೆದಿದ್ದ ಚರ್ಚ್‌ ದಾಳಿ ಗಲಾಟೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿದ್ದರು. ಆದರೆ, ಸಮಾಜಘಾತುಕ ಶಕ್ತಿಗಳ ವಿರುದ್ಧವೇ ಕ್ರಮ ಕೈಗೊಳ್ಳದಿರುವಂತೆ ಪತಿಯ ಮೇಲೆ ಒತ್ತಡ ಹಾಕಲಾಗುತ್ತಿತ್ತು. ಯಾವುದೇ ಪಕ್ಷದ ಪರವಾಗಿ ಪತಿ ಕೆಲಸ ಮಾಡುತ್ತಿರಲಿಲ್ಲ ಎಂದು ಪತ್ನಿ ಪಾವನ ಬರೆದಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇಬ್ಬರು ಅಧಿಕಾರಿಗಳು ಹಾಗೂ ಸಚಿವ ಜಾರ್ಜ್‌ ನನ್ನ ಪತಿಗೆ ಸಾಕಷ್ಟು ಕಿರುಕುಳ ನೀಡಿದ್ದರು. ಮಾಧ್ಯಮದ ಮುಂದೆ ನನ್ನ ಪತಿ ಹೇಳಿರುವುದೆಲ್ಲಾ ಸತ್ಯ. ಮೂವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಿ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಆದರೆ ಎಫ್ ಐ ಆರ್ ದಾಖಲಿಸಲು ನಿರಾಕರಿಸಿರುವ ಪೊಲೀಸರು ಪಿಎಸ್‌ಐ ಇಲ್ಲ. ಈಗಾಗಲೇ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಐಡಿ ತನಿಖೆ ಪ್ರಗತಿಯಲ್ಲಿದೆ. ಈ ಹಂತದಲ್ಲಿ ಮತ್ತೊಮ್ಮೆ ಎಫ್‌ಐಆರ್‌ ದಾಖಲು ಮಾಡಲು ಸಾಧ್ಯವಿಲ್ಲ. ಈ ಪ್ರತಿಯನ್ನು ಸಿಐಡಿ ಅಧಿಕಾರಿಗಳಿಗೆ ನೀಡುತ್ತೇವೆ ಎಂದು ಹೇಳಿದ್ದಾರೆ.

Comments are closed.