ರಾಷ್ಟ್ರೀಯ

ಜೇತ್ಲಿ ಸಂಪತ್ತು 6 ಕೋಟಿ ಕಡಿಮೆ; ಮೋದಿಯದ್ದು 15 ಲಕ್ಷ ಹೆಚ್ಚು

Pinterest LinkedIn Tumblr

Arun Jaitley2-700ಹೊಸದಿಲ್ಲಿ : ಕೇಂದ್ರ ವಿತ್ತ ಸಚಿವ ಅರುಣ್‌ ಜೇತ್ಲಿ ಅವರ ಸಂಪತ್ತಿನ ಮೌಲ್ಯ 2015-16ರ ಹಣಕಾಸು ವರ್ಷದಲ್ಲಿ 6.02 ಕೋಟಿ ರೂ. ಕಡಿಮೆಯಾಗಿದ್ದು (ಶೇ.8.9) 60.99 ಕೋಟಿ ರೂ.ಗಳಿಗೆ ಇಳಿದಿದೆ. 2015-15ರಲ್ಲಿ ಜೇತ್ಲಿ ಅವರ ಸಂಪತ್ತಿನ ಮೌಲ್ಯ 67.01 ಕೋಟಿ ರೂ.ಗಳಿತ್ತು ಎಂಬುದನ್ನು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.

ಪ್ರಧಾನಿ ನರೇಂದ್ರ ಮೋದಿ ಅವರ ಸಂಪತ್ತಿನ ಮೌಲ್ಯ 2013-14ರಲ್ಲಿ 1.26 ಕೋಟಿ ರೂ.ಗಳಿತ್ತು. 2014-15ರಲ್ಲಿ ಅದು 15 ಲಕ್ಷ ರೂ. ಜಾಸ್ತಿಯಾಗಿ 1.41 ಕೋಟಿ ರೂ.ಗಳಿಗೆ ಏರಿದೆ. ಮೋದಿ ಅವರ ಸಂಪತ್ತಿನಲ್ಲಿ ಅವರ ಗಾಂಧಿನಗರ ಆಸ್ತಿ ಸೇರಿದ್ದು ಅದರ ಮೌಲ್ಯವೇ 1 ಕೋಟಿ ರೂ. ಇದೆ.

ವಿತ್ತ ಸಚಿವ ಅರುಣ್‌ ಜೇತ್ಲಿ ಅವರ ವಸತಿ ಮತ್ತು ವಾಣಿಜ್ಯ ಆಸ್ತಿ ಪಾಸ್ತಿಗಳ ಮಾರುಕಟ್ಟೆ ಮೌಲ್ಯ 2015ರ ಹಣಕಾಸು ವರ್ಷದಲ್ಲಿ ಇದ್ದಷ್ಟೇ 2106ರಲ್ಲೂ ಇದೆ. ಆದರೆ ಬ್ಯಾಂಕ್‌ ಖಾತೆಗಳಲ್ಲಿನ ಅವರ ಹಣ, ಕೈಯಲ್ಲಿನ ನಗದು ಮತ್ತು ಕಡಿಮೆಯಾಗಿರುವ ಅವರ ಒಡೆತನದ ವಾಹನಗಳ ಸಂಖ್ಯೆಯಿಂದಾಗಿ ಅವರ ಸಂಪತ್ತು ಕಡಿಮೆಯಾಗಿದೆ.

2015ರಲ್ಲಿ ಜೇತ್ಲಿ ಅವರ ಬ್ಯಾಂಕ್‌ ಉಳಿತಾಯ ಖಾತೆಗಳಲ್ಲಿ (ಎಚ್‌ಡಿಎಫ್ಸಿ ಬ್ಯಾಂಕಿನಲ್ಲಿ ಮೂರು ಮತ್ತು ಎಸ್‌ಬಿಐನಲ್ಲಿ ಒಂದು ಖಾತೆ) 2105ರ ಹಣಕಾಸು ವರ್ಷದಲ್ಲಿ 3.52 ಕೋಟಿ ರೂ.ಗಳಿದ್ದವು. 2016ರಲ್ಲಿ ಅದು 1 ಕೋಟಿ ರೂ.ಗೆ ಇಳಿದಿದೆ.

ಎರಡೂ ಹಣಕಾಸು ವರ್ಷಗಳಲ್ಲಿ ಪರಿಶೀಲನೆಗೆ ಒಳಪಟ್ಟಿರುವ ಪ್ರಕಾರ ಜೇತ್ಲಿ ಅವರ ಕಂಪೆನಿ ಠೇವಣಿ ಎಂಪ್ರೋ ಆಯಿಲ್ಸ್‌ನಲ್ಲಿ 9 ಕೋಟಿ ರೂ., ಹಾಗೂ ಡಿಸಿಎಂ ಶ್ರೀರಾಮ್‌ ಕನ್ಸಾಲಿಡೇಟೆಡ್‌ನ‌ಲ್ಲಿ 8 ಕೋಟಿ ರೂ. ಇದೆ.

2013-14ರಲ್ಲಿ ಜೇತ್ಲಿ ಅವರ 2 ಕೋಟಿ ರೂ.ಗಳ ಹೂಡಿಕೆಯನ್ನು ಮಾಡಿದ್ದರು. ಆ ಬಳಿಕ ಅವರು ಯಾವುದೇ ಹಣ ಹೂಡಿಕೆ ಮಾಡಿಲ್ಲ. 2015ರಲ್ಲಿ ಜೇತ್ಲಿ ಬಳಿ ಇದ್ದ ಹಣ 95.30 ಲಕ್ಷ ರೂ; 2016ರಲ್ಲಿ ಅದು 65.29 ಲಕ್ಷ ರೂ.ಗಳಿಗೆ ಇಳಿದಿದೆ. ಅವರ ಪಿಪಿಎಫ್ ಖಾತೆಯಲ್ಲಿ 2015ರಲ್ಲಿ 22.18 ಲಕ್ಷ ರೂ.ಗಳಿದ್ದರೆ 2016ರಲ್ಲಿ ಇದು 25.69 ಲಕ್ಷ ರೂ.ಗಳಿಗೆ ಏರಿದೆ.

ಜೇತ್ಲಿ ಅವರ ಚರಾಸ್ತಿ 2015ರಲ್ಲಿ 9.10 ಕೋಟಿ ರೂ. ಇತ್ತು; 2016ರಲ್ಲಿ ಇದು 9.34 ಕೋಟಿ ರೂ.ಗಳಾಗಿವೆ. 2015ರಲ್ಲಿ ಜೇತ್ಲಿ ಅವರು ತಮ್ಮ 75 ಲಕ್ಷ ರೂ. ಮೌಲ್ಯದ ಆಸ್ತಿಪಾಸ್ತಿಗೆ ಬಹಿರಂಗಪಡಿಸದ ಮುಂಗಡವನ್ನು ಕೊಟ್ಟಿದ್ದಾರೆ; 2016ರಲ್ಲಿ 75.6 ಲಕ್ಷ ರೂ. ಮೌಲ್ಯದ ಆಸ್ತಿಗೆ ಮುಂಗಡ ಕೊಟ್ಟಿದ್ದಾರೆ.

ಜೇತ್ಲಿ ಅವರ ಬಳಿ 5.6 ಕಿಲೋ ಚಿನ್ನವಿದೆ. 2015ರಲ್ಲಿ ಇದರ ಮೌಲ್ಯ 1.25 ಕೋಟಿ ರೂ. ಇತ್ತು. 2016ರಲ್ಲಿ ಇದರ ಮೌಲ್ಯ 1.35 ಕೋಟಿ ರೂ.ಗಳಾಗಿವೆ. ಹಾಗೆಯೇ ಅವರ ಬಳಿ ಇರುವ 15 ಕಿಲೋ ಬೆಳ್ಳಿಯ ಬೆಲೆ 205ರಲ್ಲಿ 5.54 ಲಕ್ಷ ರೂ.ಇತ್ತು; 2016ರಲ್ಲಿ ಅದು 5.67 ಲಕ್ಷ ರೂ.ಗಳಾಗಿವೆ.

ವಿತ್ತ ಸಚಿವರ ಒಡೆತನದಲ್ಲಿ , ದಿಲ್ಲಿ, ಹರಿಯಾಣದ ಗುರುಗ್ರಾಮ, ಪಂಜಾಬ್‌ನ ಅಮೃತಸರ ಮತ್ತು ಗುಜರಾತ್‌ ನ ಗಾಂಧಿನಗರದಲ್ಲಿ ಒಟ್ಟು ಆರು ಬಂಗಲೆಗಳಿವೆ; ಮಾತ್ರವಲ್ಲದೆ ನಗರದ ಉದ್ದಗಲದಲ್ಲೂ ಅವರಿಗೆ ವಾಣಿಜ್ಯ ಸೊತ್ತುಗಳಿವೆ ಎಂದು ಅಂಕಿ ಅಂಶಗಳು ತಿಳಿಸಿವೆ.
-ಉದಯವಾಣಿ

Comments are closed.