ಕರ್ನಾಟಕ

ಮಾಧ್ಯಮಗಳು ವೈಚಾರಿಕತೆಗೆ ಆದ್ಯತೆ ನೀಡಬೇಕು : ಸಿದ್ದರಾಮಯ್ಯ

Pinterest LinkedIn Tumblr

belegali

ಬೆಂಗಳೂರು: ಮಾಧ್ಯಮಗಳು ಮೌಢ್ಯವನ್ನು ಪೋಷಿಸಬಾರದು ವೈಚಾರಿಕತೆ ಯನ್ನು ಬೆಳೆಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ವಿಧಾನಸೌಧದ ಬಾಂಕ್ವೆಟ್ ಹಾಲ್‌ನಲ್ಲಿ ವಾರ್ತಾ ಇಲಾಖೆ ಆಯೋಜಿಸಿದ್ದ ಟಿಯೆಸ್ಸಾರ್ ಪ್ರಶಸ್ತಿ ಮೊಹರೆ ಹಣಮಂತರಾಯ ಪ್ರಶಸ್ತಿ ಹಾಗೂ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ 4ನೇ ಸ್ತಂಭವಾಗಿರುವ ಪತ್ರಿಕೋದ್ಯಮ, ಅಭಿವ್ಯಕ್ತಿ ಸ್ವಾತಂತ್ರ್ಯದ ಜೀವಾಳವಾಗಿದೆ. ಇದರ ಬಗ್ಗೆ ನನಗೆ ಅತ್ಯಂತ ಗೌರವವಿದೆ. ಮಾಧ್ಯಮಗಳು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು. ಸಮಾಜದಲ್ಲಿ ವೈಚಾರಿಕತೆಯನ್ನು ಬೆಳೆಸಬೇಕು, ಮೌಢ್ಯವನ್ನು ತೊಲಗಿಸಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ಮೌಢ್ಯಗಳನ್ನು ಬಿತ್ತರಿಸುವ ಕೆಲಸವಾಗುತ್ತಿರುವುದು ವಿಷಾದಕರ. ಪತ್ರಿಕೋದ್ಯಮಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಅದಕ್ಕಾಗಿ ನಮ್ಮ ಸರ್ಕಾರದ ವಿರುದ್ದ ಎಷ್ಟೇ ಟೀಕೆ ಟಿಪ್ಪಣಿಗಳನ್ನು ಬರೆದಿದ್ದರೂ ನಾನು ಯಾರಿಗೂ ದೂರವಾಣಿ ಕರೆ ಮಾಡಿ ಮಾತನಾಡುವುದಿಲ್ಲ. ವಿರುದ್ಧವಾಗಿ ಬರೆದಾಗ ಅಥವಾ ಹೊಗಳಿ ಬರೆದಾಗ ನಾನು ಪ್ರತಿಕ್ರಿಯಿಸುವುದಿಲ್ಲ. ಆದರೆ ಆಧಾರರಹಿತ ಸುದ್ದಿಗಳು ಪ್ರಕಟವಾದಾಗ ಮನಸ್ಸಿಗೆ ಬೇಸರವಾಗುತ್ತದೆ. ಸಮಾಜದ ಹಿತಕ್ಕೆ ವಿರುದ್ದವಾಗಿ ಮಾಧ್ಯಮಗಳು ವರ್ತಿಸಬಾರದು ಎಂದು ಹೇಳಿದರು.

ಸರ್ಕಾರವನ್ನು ರಚಿಸುವ, ಉರುಳಿಸುವ ಶಕ್ತಿ ಪತ್ರಿಕೆಗಳಿಗೆ ಇತ್ತು. ಆದರೆ ಈಗ ಆ ಭಯ ಹೋಗಿದೆ. ರಾಜಕಾರಣಿಗಳನ್ನು ಟೀಕಿಸುವ ಮಾಧ್ಯಮದ ಮಂದಿ ಏನು ಸಾಚಾನ? ಎಂದು ಪ್ರಶ್ನಿಸುವ ಕಾಲ ಬಂದಿದೆ. ಮಾಧ್ಯಮಗಳ ಬಗ್ಗೆ ಇದ್ದ ಭಯ ಹೋಗಿದೆ. ಈ ಪರಿಸ್ಥಿತಿಯ ಬಗ್ಗೆ ಚರ್ಚೆಯಾಗಬೇಕು. ಪತ್ರಕರ್ತರು, ಮಾಧ್ಯಮ ಸಂಸ್ಥೆಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.

ಸಮಾಜದ ಕಾವಲುಗಾರನಂತೆ ಕೆಲಸ ಮಾಡುತ್ತಿದ್ದ ಪತ್ರಿಕೆಗಳು ಈಗ ವಕೀಲಿಕೆ, ಜಡ್ಜ್‌ಗಳಂತೆ ವರ್ತಿಸುತ್ತಿವೆ. ವಾದವನ್ನು ಅವರೇ ಮಾಡಿ ತೀರ್ಪನ್ನೂ ಕೊಟ್ಟುಬಿಡುತ್ತಾರೆ. ಮೌಢ್ಯವನ್ನು ಪೋಷಿಸುವ ಜೊತೆಗೆ ಕೌಟುಂಬಿಕ ಸಮಸ್ಯೆಗಳನ್ನು ಬೀದಿಗೆಳೆದು ರಾಡಿ ಎಬ್ಬಿಸುವುದರಿಂದ ಸಮಾಜಕ್ಕೆ ಏನು ಒಳ್ಳೆಯದು ಆಗುತ್ತದೆ ಎಂದು ಪ್ರಶ್ನಿಸಿದರು.

ಗಂಗಾಧರ ಮೊದಲಿಯಾರ್ , ಸನತ್‌ಕುಮಾರ್ ಬೆಳಗಲಿ(ಟಿಯೆಸ್ಸಾರ್) ಬಸವರಾಜು ಸ್ವಾಮಿ, ಟಿ.ವೆಂಕಟೇಶ್( ಮೊಹರೆ ಹಣಮಂತರಾಯ ಪ್ರಶಸ್ತಿ) ಜಿ.ಎನ್.ಮೋಹನ್, ಶೇಷ ಮೂರ್ತಿ ಅವಧಾನಿ, ಗಾಣದಾಳು ಶ್ರೀಕಂಠ, ಡಾ.ಎನ್.ಜಗದೀಶ್ ಕೊಪ್ಪ ಅವರಿಗೆ ಪರಿಸರ ಪತ್ರಿಕೋದ್ಯಮ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದಾನ ಮಾಡಿದರು. ಮೊಹರೆ ಹಣಮಂತರಾಯ ಪ್ರಶಸ್ತಿ ಪಡೆದ ಟಿ.ವೆಂಕಟೇಶ್ ಅವರು ಪ್ರಶಸ್ತಿ ಮೊತ್ತ ಒಂದು ಲಕ್ಷವನ್ನು ಅಭಿಮಾನಿ ಪ್ರಶಸ್ತಿಗಾಗಿ ಮಾಧ್ಯಮ ಅಕಾಡೆಮಿಗೆ ಈ ಸಂದರ್ಭದಲ್ಲಿ ನೀಡಿದರು. ಸಚಿವ ಕೃಷ್ಣಭೈರೇಗೌಡ, ಪತ್ರಕರ್ತ ಪಿ.ಸಾಯಿನಾಥ್ , ವಾರ್ತಾ ಇಲಾಖೆ ನಿರ್ದೇಶಕ ವಿಶುಕುಮಾರ್ ಉಪಸ್ಥಿತರಿದ್ದರು.

Comments are closed.