ಬೆಂಗಳೂರು,ಜು.೧-ಕುಡಿತದ ಅಮಲಿನಲ್ಲಿದ್ದ ಬಿಜೆಪಿ ಕಾರ್ಪೊರೇಟರ್ ಗುರುಮೂರ್ತಿರೆಡ್ಡಿ ಅವರು ನಿನ್ನೆ ರಾತ್ರಿ ರಸ್ತೆ ಬದಿಯ ವ್ಯಾಪಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದು ಈ ಸಂಬಂಧ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಎಚ್‌ಎಸ್‌ಆರ್ ಲೇಔಟ್‌ನಲ್ಲಿ ರಾತ್ರಿ ೧೧ರ ವೇಳೆ ಮದ್ಯ ಸೇವಿಸಿ ಬಂದ ಗುರುಮೂರ್ತಿರೆಡ್ಡಿ ಅವರು ರಸ್ತೆ ಬದಿ ಅಂಗಡಿ ತೆರೆದು ಸಂಚಾರಕ್ಕೆ ಅಡ್ಡಿ ಉಂಟು ಮಾಡಲಾಗಿದೆ ಎಂದು ದೋಸೆ ಕ್ಯಾಂಪ್ ನಡೆಸುತ್ತಿದ್ದ ಸ್ಥಳೀಯ ನಿವಾಸಿ ಶಕ್ತಿ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ.
ಹಲ್ಲೆಯಿಂದ ಗಾಯಗೊಂಡಿರುವ ಶಕ್ತಿ ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದುಕೊಂಡು ಎಚ್‌ಎಸ್‌ಆರ್ ಲೇಔಟ್ ಪೊಲೀಸರಿಗೆ ದೂರು ನೀಡಿದ್ದಾರೆ.
ಕಳೆದೆರಡು ವರ್ಷಗಳಿಂದ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಮೊದಲ ಹಂತದಲ್ಲಿ ಜೆಪ್ಸಿ ಕಿಚನ್ ಎಂಬ ಫುಡ್ ಟ್ರಕ್ ಹೆಸರಲ್ಲಿ ನಡೆಸುತ್ತಿದ್ದ ದೋಸೆ ಕ್ಯಾಂಪ್ ಬಳಿ ಬಂದ ಸಂಜೆ ೭.೩೦ರ ಸುಮಾರಿಗೆ ಗುರುಮೂರ್ತಿರೆಡ್ಡಿ ಅವರು ತಕ್ಷಣ ವ್ಯಾಪಾರ ನಿಲ್ಲಿಸುವಂತೆ ಎಚ್ಚರಿಕೆ ನೀಡಿದ್ದರು.
ನಂತರ ಮತ್ತೆ ರಾತ್ರಿ ೧೧ ಗಂಟೆಗೆ ಕಂಠಪೂರ್ತಿ ಕುಡಿದು ಬಂದ ಗುರುಮೂರ್ತಿರೆಡ್ಡಿ ಅವರು ಅಂಗಡಿ ಸಾಮಾನುಗಳನ್ನ ಎಸೆಯಲು ಮುಂದಾಗಿದ್ದಾರೆ. ಇದಕ್ಕೆ ಅಡ್ಡಿಪಡಿಸಿದ್ದಕ್ಕೆ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಶಕ್ತಿ ದೂರಿನಲ್ಲಿ ತಿಳಿಸಿದ್ದಾರೆ.
ಆದರೆ ಶಕ್ತಿ ಅವರು ನೀಡಿರುವ ದೂರಿನಲ್ಲಿ ಯಾವುದೇ ಸತ್ಯಾಂಶವಿಲ್ಲ ರಸ್ತೆ ಬದಿ ದೋಸೆ ಕ್ಯಾಂಪ್ ಇಟ್ಟು ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದಲ್ಲದೇ ಗುಂಪಾಗಿ ಜನ ಸೇರಿ ಗಲಾಟೆ ಮಾಡುತ್ತಿದ್ದರು ಈ ಬಗ್ಗೆ ಸ್ಥಳೀಯರು ನನ್ನು ಬಳಿ ಸಮಸ್ಯೆ ಹೇಳಿಕೊಂಡರು ಸಮಸ್ಯೆ ಅರಿಯಲು ನಿನ್ನೆ ರಾತ್ರಿ ೧೧ರ ವೇಳೆ ದೋಸೆ ಕ್ಯಾಂಪ್ ಬಳಿ ಹೋದಾಗ ಜನ ಸೇರಿ ಗಲಾಟೆ ನಡೆಯುತ್ತಿತ್ತು.ಅಲ್ಲಿದ್ದವರಿಗೆ ಅವರಿಗೆ ಬುದ್ದಿ ಹೇಳಿ ಬಂದಿದ್ದೇನೆ ಎಂದು ಗುರುಮೂರ್ತಿರೆಡ್ಡಿ ಅವರು ಸ್ಪಷ್ಟಪಡಿಸಿದ್ದಾರೆ.
Comments are closed.