ಹುಬ್ಬಳ್ಳಿ, ಜು 1- ಅತೃಪ್ತ ಬಣದ ಮಾಜಿ ಸಚಿವ ಶ್ರೀನಿವಾಸ ಪ್ರಸಾದ ಅವರ ಜೊತೆ ಮಾತುಕತೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂದಿಲ್ಲಿ ತಿಳಿಸಿದರು.
ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಂಪುಟ ವಿಸ್ತರಣೆ ಕಾಲಕ್ಕೆ ಕೆಲವರಿಗೆ ಅಸಮಾಧಾನವಾಗುವುದು ಸಹಜ ಎಂದು ಪ್ರತಿಕ್ರಿಯಿಸಿದರು.
ಹೊಸಬರಿಗೆ ಅವಕಾಶ ಕೊಡಬೇಕೆಂಬ ಹಿತದೃಷ್ಟಿಯಿಂದ ಕೆಲವರನ್ನು ಅನಿವಾರ್ಯವಾಗಿ ಸಚಿವ ಸಂಪುಟದಿಂದ ಕೈಬಿಡುವುದು ಅನಿವಾರ್ಯ ಎಂದು ಅವರು ಹೇಳಿದರು.
ರಾಜಕೀಯದಲ್ಲಿ ಪರಸ್ಪರ ಒಬ್ಬರಿಗೊಬ್ಬರ ಸಹಾಯ ಸಹಕಾರ ಅನಿವಾರ್ಯ ಎಂದು ಶ್ರೀನಿವಾಸ ಪ್ರಸಾದ ಅವರ ಹಿಂದಿನ ಹೇಳಿಕೆ ಬಗ್ಗೆ ಪ್ರಶ್ನೆಯೊಂದಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರತಿಕ್ರಿಯಿಸಿದರು.
ಸಂಪುಟ ವಿಸ್ತರಣೆ ಕಾಲಕ್ಕೆ ಹೊಸಬರಿಗೆ ಅವಕಾಶ ನೀಡಬಾರದೆಂದು ತೀರ್ಮಾನಿಸಲಾಗಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಮೊದಲ ಬಾರಿ ಶಾಸಕರಾದವರಿಗೆ ಅವಕಾಶ ನೀಡಲಾಗಿದೆ ಎಂದು ಅವರು ನುಡಿದರು.
ಚಳಿಗಾಲದ ಅಧಿವೇಶನ
ಬರುವ ನವೆಂಬರ್ 4 ರಂದು ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ ಎಂದು ಅವರು ತಿಳಿಸಿದರು. ಚಳಿಗಾಲದ ಅಧಿವೇಶನದಲ್ಲಿ ಇಲಾಖಾವಾರು ಬೇಡಿಕೆ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಇಲಾಖಾವಾರು ಚರ್ಚೆ ನಂತರ ಪೂರ್ಣಪ್ರಮಾಣದ ಬಜೆಟ್ ಬಗ್ಗೆ ಇದೇ ಅಧಿವೇಶನದಲ್ಲಿ ಚರ್ಚಿಸಲು ತೀರ್ಮಾನಿಸಲಾಗಿದೆ ಎಂದು ಸಿಎಂ ತಿಳಿಸಿದರು.
ಕಳಸಾ ಬಂಡೂರಿ
ಕಳಸಾ ಬಂಡೂರಿ ಮಹಾದಾಯಿ ಯೋಜನೆ ಜಾರಿ ಬಗ್ಗೆ ಈಗಾಗಲೇ ಪ್ರದಾನ ಮಂತ್ರಿಗಳನ್ನು ಭೆಟ್ಟಿ ಮಾಡಿ ಚರ್ಚಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪೊಲೀಸರ ವಿವಿಧ ಬೇಡಿಕೆಗಳ ಬಗ್ಗೆ ಈಗಾಗಲೇ ಗೃಹ ಸಚಿವರೊಂದಿಗೆ ಚರ್ಚಿಸಲಾಗಿದೆ. ಬೇಡಿಕೆಗಳ ಈಡೇರಿಸುವ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ, ಹು.ಡಾ. ಅಧ್ಯಕ್ಷ ದಾನಪ್ಪ ಕಬ್ಬೇರ, ಮುಖಂಡರಾದ ಎ.ಎಂ. ಹಿಂಡಸಗೇರಿ, ಹು.ಧಾ.ಮ. ಪಾಲಿಕೆ ಸದಸ್ಯರಾದ ದೀಪಕ ಚಿಂಚೋರೆ, ಬಾಲವಿಕಾಸ ಅಕಾಡೆಮಿ ಅಧ್ಯಕ್ಷರಾದ ದ್ರಾಕ್ಷಾಯಣಿ ಬಸವರಾಜ ಮಹಿಳಾ ಮುಖಂಡರಾದ ಶಾಂತವ್ವ ಗುಜ್ಜಳ, ಶೈಲಾ ಕಾಮರೆಡ್ಡಿ, ಇತರರು ಈ ಸಂದರ್ಭದಲ್ಲಿದ್ದರು.
Comments are closed.