ಚೆನ್ನೈ: ಕಳೆದ ಶುಕ್ರವಾರ ನಂಗಂಬಾಕಂ ರೈಲು ನಿಲ್ದಾಣದಲ್ಲಿ ಇನ್‌ಫೋಸಿಸ್ ಸಂಸ್ಥೆಯ ಉದ್ಯೋಗಿ 24ರ ಹರೆಯದ ಎಸ್ ಸ್ವಾತಿ ಎಂಬವರನ್ನು ಹಾಡುಹಗಲೇ, ಜನರ ಸಮ್ಮುಖದಲ್ಲಿ ಅಮಾನುಷವಾಗಿ ಕೊಚ್ಚಿ ಕೊಂದಿದ್ದ ಆರೋಪಿಯನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತರಾಗಿರುವ ಚೆನ್ನೈ ಪೊಲೀಸರಿಗೆ ಈಗ ಕೆಲವೊಂದು ಅಮೂಲ್ಯ ಸುಳಿವುಗಳು ದೊರಕಿವೆ.
ಸ್ವಾತಿ ತನ್ನ ಉದ್ಯೋಗ ತಾಣವಾದ ಮಹೀಂದ್ರಾ ಟೆಕ್ ಪಾರ್ಕ್ ಗೆ ಹೋಗಲು 2ನೇ ನಂಬರ್ ನ ಪ್ಲಾಟ್ ಫಾರಂನಲ್ಲಿ ರೈಲಿಗಾಗಿ ಕಾಯುತ್ತಿದ್ದಾಗ ಆಕೆಯ ಬಳಿ ನೇರವಾಗಿ ನಡೆದುಕೊಂಡು ಬಂದ ಕಪ್ಪು ಪ್ಯಾಂಟ್, ಹಸಿರು ಶರ್ಟ್ ತೊಟ್ಟ ವ್ಯಕ್ತಿಯು ಸ್ವಾತಿಯೊಂದಿಗೆ ಯಾವುದೇ ಮಾತುಕತೆ ನಡೆಸದೆ ತನ್ನ ಚೀಲದದಲ್ಲಿದ್ದ ಹರಿತವಾದ ಕತ್ತಿಯಿಂದ ಆಕೆಯನ್ನು ಹೊಡೆದು ಸಾಯಿಸಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಸ್ವಾತಿಯೊಂದಿಗೆ ಮಾತನಾಡದಿದ್ದ ಕಾರಣಕ್ಕೆ ಆತ ಸ್ವಾತಿಗೆ ಅಪರಿಚಿತನಾಗಿದ್ದ ಎಂದು ತಿಳಿಯುವಂತಿಲ್ಲ ಎಂದವರು ಹೇಳಿದ್ದಾರೆ.
ಸಿಸಿಟಿವಿ ಚಿತ್ರಿಕೆಯ ಪ್ರಕಾರ ಹಂತಕನು ಬೆಳಗ್ಗೆ 6.30ರ ಹೊತ್ತಿಗೆ ರೈಲ್ವೆ ನಿಲ್ದಾಣದೊಳಗೆ ಬಂದಿದ್ದಾನೆ. 6.42ರ ಹೊತ್ತಿಗೆ ನಿಲ್ದಾಣದಿಂದ ನಿರ್ಗಮಿಸಿದ್ದಾನೆ.ಕೇವಲ 11 ನಿಮಿಷಗಳ ಕಾಲ ಆತ ನಿಲ್ದಾಣದ ಒಳಗೆ ಇದ್ದು ಸ್ವಾತಿಯನ್ನು ಕೊಲೆಗೈದು ತಣ್ಣಗೆ ನಡೆದುಕೊಂಡು ನಿಲ್ದಾಣದಿಂದ ಹೊರಹೋಗಿದ್ದಾನೆ. ಆತನು ಕೊಲೆಗೆ ಬಳಸಿದ ಆಯುಧಕ್ಕೆ ಮರದ ಹಿಡಿ ಇದ್ದು ಅದರಲ್ಲಿ ಆತನ ಬೆರಳಚ್ಚು ದಾಖಲಾಗಿದೆ. ಅದನ್ನು ಫೊರೆನ್ಸಿಕ್ ವಿಶ್ಲೇಷಣೆಗೆ ಕಳುಹಿಸಲಾಗಿದೆ ಎಂದು ಹಿರಿಯ ತನಿಖಾಧಿಕಾರಿ ತಿಳಿಸಿದ್ದಾರೆ.
ಈ ತನಿಖಾಧಿಕಾರಿಗೆ ಒಬ್ಟಾತ ಫೋನ್ ಮಾಡಿ, ಸ್ವಾತಿಯ ಹಂತಕನು ಈ ಹಿಂದೆಯೂ ರೈಲಿನಲ್ಲಿ ಸ್ವಾತಿಯನ್ನು ಅನುಸರಿಸಿಕೊಂಡು ಬಂದು ಆಕೆಗೆ ಕಿರುಕುಳ ನೀಡಿರುವುದನ್ನು ತಾನು ಕಂಡಿದ್ದೇನೆ ಎಂದು ಹೇಳಿದ್ದಾನೆ.
ಹೈದರಾಬಾದ್‌ನ ತಂಡದಿಂದ ಈಗ ಹಂತಕನ ಸಿಸಿಟಿವಿ ಚಿತ್ರಿಕೆಯನ್ನು ಇನ್ನಷ್ಟು ದೊಡ್ಡದಾಗಿ ಕಾಣುವ ಯತ್ನ ನಡೆದಿದೆ ಎಂದು ತನಿಖಾಧಿಕಾರಿ ಹೇಳಿದ್ದಾರೆ.
-ಉದಯವಾಣಿ
Comments are closed.