ಕರ್ನಾಟಕ

ರೌಡಿಗಳ ಕಾಲು ಕಟ್ ನಸುಕಿನ ಕಾರ್ಯಾಚರಣೆಯಲ್ಲಿ ಪೊಲೀಸರ ಗುಂಡೇಟು

Pinterest LinkedIn Tumblr

rouಬೆಂಗಳೂರು, ಜೂ.೨೨-ಶಿವಾಜಿನಗರದಲ್ಲಿ ನಿನ್ನೆ ರಾತ್ರಿ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದ ರೌಡಿ ಶಬ್ಬೀರ್ ಸೇರಿ ಇಬ್ಬರನ್ನು ಎಚ್.ಬಿ.ಆರ್.ಬಡಾವಣೆಯಲ್ಲಿ ಗುಂಡು ಹಾರಿಸಿ ಗಾಯಗೊಳಿಸಿದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಿವಾಜಿನಗರದ ಎಚ್‌ಕೆಬಿ ದರ್ಗಾ ಬಳಿ ರಾತ್ರಿ ೯ರ ವೇಳೆ ರೌಡಿ ಫರ್ವೇಜ್‌ನ ಮೇಲೆ ಮಾರಕಾಸ್ತಗಳಿಂದ ದಾಳಿ ನಡೆಸಿ ಗುಂಡು ಹಾರಿಸಿ ಕೊಲೆ ಮಾಡಿ ಪರಾರಿಯಾಗಿದ್ದ ಐವರಲ್ಲಿ ರೌಡಿ ಶಿವಾಜಿನಗರದ ದರ್ಗಾದ ಶಬ್ಬೀರ್ ಸೇರಿ ಇಬ್ಬರನ್ನು ಎಚ್.ಬಿ.ಆರ್.ಬಡಾವಣೆಯ ಅರಣ್ಯ ಪ್ರದೇಶದ ಬಳಿ ಇಂದು ನಸುಕಿನಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಗುಂಡು ಹಾರಿಸಿ ಗಾಯಗೊಳಿಸಿ ಬಂಧಿಸಿದ್ದಾರೆ.
ಎಚ್.ಬಿ.ಆರ್.ಬಡಾವಣೆಯ ಅರಣ್ಯ ಪ್ರದೇಶದಲ್ಲಿ ಮುಂಜಾನೆ ೩ರ ವೇಳೆ ನಾಕಾ ಬಂಧಿ ಕೈಗೊಂಡು ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿ, ಪರಾರಿಯಾಗಲು ಯತ್ನಿಸಿದ ರೌಡಿಗಳಾದ ಶಬ್ಬೀರ್(೩೪)ಹಾಗೂ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬರ್ಕತ್‌ನ ಮೇಲೆ ಗುಂಡು ಹಾರಿಸಿ ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್ ತಿಳಿಸಿದ್ದಾರೆ.
ತಪ್ಪಿಸಿಕೊಳ್ಳಲು ಯತ್ನಿಸಿದ ಶಬ್ಬೀರ್ ಹಾಗೂ ಬರ್ಕತ್ ಡ್ರಾಗರ್,ಬಾಕುವಿನಿಂದ ನಡೆಸಿದ ಹಲ್ಲೆಯಿಂದ ಗಾಯಗೊಂಡಿರುವ ಕೆ.ಜಿ.ಹಳ್ಳಿ ಪೊಲೀಸ್ ಠಾಣೆ ಮುಖ್ಯ ಪೇದೆ ಪದ್ಮನಾಭ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರ ಗುಂಡೇಟಿನಿಂದ ಎಡಗಾಲಿಗೆ ಗಾಯವಾಗಿರುವ ಶಬ್ಬೀರ್ ಹಾಗೂ ಬರ್ಕತ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಳೇ ದ್ವೇಷದ ಹಿನ್ನೆಲೆಯಲ್ಲಿ ಶಿವಾಜಿನಗರ ಎಚ್‌ಕೆಬಿ ದರ್ಗಾ ಬಳಿ ನಿನ್ನೆ ರಾತ್ರಿ ಹೆಗಡೆ ನಗರದ ರೌಡಿ ಫರ್ವೇಜ್ ಹಾಗೂ ಆತಷಿಬ್ಬರು ಸಹಚರರ ಮೇಲೆ ಮಾರಕಾಸ್ತ್ರಗಳಿಂದ ಶಬ್ಬೀರ್, ಬರ್ಕತ್ ಮತ್ತು ಇತರ ಐವರ ತಂಡ ಹಲ್ಲೆ ನಡೆಸಿ, ಮೂರು ಸುತ್ತು ಗುಂಡು ಹಾರಿಸಿತ್ತು.
ಹೊಟ್ಟೆ ಹಾಗೂ ತೊಡೆಗೆ ಗುಂಡು ಹೊಕ್ಕು ಗಂಭೀರವಾಗಿ ಗಾಯಗೊಂಡಿದ್ದ ಫರ್ವೇಜ್ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದನು. ಈ ದಾಳಿಯಲ್ಲಿ ಫರ್ವೇಜ್ ಜೊತೆಗಿದ್ದ ಖಾಸಿಫ್ ಹಾಗೂ ವಾಜೀದ್ ಪಾಷನಿಗೂ ಗಾಯವಾಗಿದ್ದು, ಅವರಿಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದಾಳಿ ನಡೆಸಿದ ಶಬ್ಬೀರ್ ಹಾಗೂ ಬರ್ಕತ್ ಸೇರಿ ಐವರು ಬೈಕ್‌ಗಳಲ್ಲಿ ಪರಾರಿಯಾಗಿದ್ದರು.ಶಿವಾಜಿನಗರಕ್ಕೆ ಬರುವ ಮುನ್ನ ಈ ತಂಡ, ಸಿದ್ದಾಪುರದ ಚಲನಚಿತ್ರ ನಿರ್ದೇಶಕ ಮಾಹಿನ್ ಎಂಬವರ ಮನೆಗೆ ನುಗ್ಗಿ ಬೆದರಿಸಿ ನಂತರ ಆಡುಗೋಡಿಗೆ ತೆರಳಿ ನೂರ್ ಎಂಬಾತನ ತಲೆಗೆ ಮಚ್ಚಿನಿಂದ ಹಲ್ಲೆ ನಡೆಸಿತ್ತು.
ದಾಳಿ ನಡೆಸಿದ ಕೃತ್ಯ ಭೇದಿಸಲು ಪೂರ್ವ,ಆಗ್ನೇಯ ಮತ್ತು ದಕ್ಷಿಣ ವಿಭಾಗದ ವಿಶೇಷ ಪೊಲೀಸ್ ತಂಡಗಳು ರಾತ್ರಿಯಿಡೀ ನಗರದಲ್ಲಿ ನಾಕಬಂಧಿ ನಡೆಸಿ, ವಾಹನಗಳ ತಪಾಸಣೆ ನಡೆಸಿದ್ದವು.ಮುಂಜಾನೆ ೩ರ ವೇಳೆ ಎಚ್‌ಬಿಆರ್ ಬಡಾವಣೆಯ ಅರಣ್ಯಪ್ರದೇಶದಲ್ಲಿ ರೌಡಿ ಶಬ್ಬೀರ್ ಮತ್ತು ಬರ್ಕತ್ ಬೈಕ್‌ನಲ್ಲಿ ಅನುಮಾನಾಸ್ಪದವಾಗಿ ಹೋಗುತ್ತಿದ್ದಾಗ ತಪಾಸಣೆ ನಡೆಸಲು ಬಂದ ಮುಖ್ಯ ಪೇದೆ ಪದ್ಮನಾಭ ಹಾಗೂ ಪೇದೆ ಶಾಜು ಅಂಥೋಣಿ ಅವರಿಗೆ ಪಿಸ್ತೂಲ್ ತೋರಿಸಿ ಬೆದರಿಸಿದರು.
ಆದರೆ ಪದ್ಮನಾಭ ಅವರು ಶಬ್ಬೀರ್ ಕೈಯನ್ನು ಬಲವಾಗಿ ಹಿಡಿದು ಪಿಸ್ತೂಲ್ ಬೀಳಿಸಿ ಬಂಧಿಸಲು ಹೋಗಿದ್ದು ಆಕ್ರೋಶಗೊಂಡ ಶಬ್ಬೀರ್ ಸೊಂಟದಲ್ಲಿದ್ದ ಡ್ರಾಗರ್ ಬಾಕುವಿನಿಂದ ಪದ್ಮನಾಭ ಅವರ ಕೈಗೆ ಹಲ್ಲೆ ನಡೆಸಿದ್ದಾರೆ ತಕ್ಷಣ ಇನ್ಸ್‌ಪೆಕ್ಟರ್ ಶ್ರೀನಿವಾಸ್ ಹಾರಿಸಿದ ಎರಡು ಸುತ್ತು ಗುಂಡಿನಿಂದ ಶಬ್ಬೀರ್ ಹಾಗೂ ಬರ್ಕತ್ ಗಾಯಗೊಂಡು ಸಿಕ್ಕಿಬಿದ್ದಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹರಿಶೇಖರನ್ ಅವರು ಶಿವಾಜಿನಗರದಲ್ಲಿ ದಾಳಿ ನಡೆಸಿ ಪರಾರಿಯಾಗಿರುವ ಇನ್ನೂ ಮೂವರ ಸುಳಿವು ದೊರೆತಿದ್ದು, ಶೀಘ್ರದಲ್ಲೇ ಅವರನ್ನು ಬಂಧಿಸುವುದಾಗಿ ತಿಳಿಸಿದ್ದಾರೆ.ಬಂಧಿತರಿಂದ ಪಿಸ್ತೂಲು,ಜೀವಂತ ಗುಂಡುಗಳು,ಡ್ರಾಗರ್,ಬೈಕ್‌ಗಳು ಹಾಗೂ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ
ಹಳೆ ದ್ವೇಷ ಏನು.!
ಕಳೆ ಎರಡು ತಿಂಗಳ ಹಿಂದೆ ಡಿಜೆ ಹಳ್ಳಿಯಲ್ಲಿ ರೌಡಿ ಇದ್ರಿಸ್ ಕೊಲೆಯಾಗಿತ್ತು, ಇದ್ರಿಸ್‌ಗೆ ಕೊಲೆಯಾದ ರೌಡಿ ಪರ್ವೇಜ್ ಪ್ರತಿ ತಿಂಗಳು ೧೦ ಸಾವಿರ ಹಫ್ತಾ ಕೊಡುತ್ತಿದ್ದನು ಇಸ್ತಿಯಾಜ್ ಕೊಲೆಯಾದ ನಂತರ ಆತನ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಶಬ್ಬೀರ್‌ಗೆ ಹಫ್ತಾ ಕೊಡುವುದನ್ನು ನಿಲ್ಲಿಸಿದ್ದರಿಂದ ಕೋಪಗೊಂಡ ಶಬ್ಬೀರ್ ಪರ್ವೇಜ್‌ನನ್ನು ೩ ದಿನಗಳ ಹಿಂದೆ ಸಂಪರ್ಕಿಸಿ ೫ ಲಕ್ಷ ಬೇಡಿಕೆ ಇಟ್ಟಿದ್ದಾನೆ.
ಹಣ ಕೊಡಲು ಒಪ್ಪದ ಪರ್ವೇಜ್ ಧಮ್ಕಿ ಹಾಕಿದ್ದರಿಂದ ಆಕ್ರೋಶಗೊಂಡ ಶಬ್ಬೀರ್ ಕೊಲೆಗೆ ಸಂಚು ರೂಪಿಸಿ ಶಿವಾಜಿನಗರದ ಎಚ್‌ಕೆಬಿ ಮಸೀದಿ ಬಳಿ ನಿನ್ನೆ ರಾತ್ರಿ ಸ್ನೇಹಿತರು ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡು ಪರ್ವೇಜ್ ಮತ್ತವನ ಸ್ನೇಹಿತರು ಹತ್ತಿರದ ಟೀ ಅಂಗಡಿ ಬಳಿ ಟೀ ಕುಡಿಯಲು ಬಂದಿದ್ದಾಗ ಎದುರಾದ ಶಬ್ಬೀರ್ ಮತ್ತವನ ಸಹಚರರು ಹಫ್ತಾ ಹಣದ ಕೇಳಿದ್ದಾರೆ ಹಣ ಕೊಡಲು ನಿರಾಕರಿಸಿದಾಗ ರೊಚ್ಚಿಗೆದ್ದ ಶಬ್ಬೀರ್ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಗುಂಡು ಹಾರಿಸಿ ಪರಾರಿಯಾಗಿದ್ದರು.

*ಶಿವಾಜಿನಗರದಲ್ಲಿ ಗುಂಡು ಹಾರಿಸಿ ಸಿಕ್ಕಿಬಿದ್ದ ರೌಡಿಗಳು
*ಹೆಚ್‌ಬಿಆರ್ ಲೇಔಟ್ ಅರಣ್ಯದ ಬಳಿ ಕಾರ್ಯಾಚರಣೆ
*ಗುಂಡು ಹಾರಿಸಿ ರೌಡಿಗಳಾದ ಶಬ್ಬೀರ್ ಬರ್ಕತ್ ಸೆರೆ
*ಪಿಸ್ತೂಲು ಮಾರಕಾಸ್ತ್ರಗಳ ವಶ ರಾತ್ರಿಯೀಡಿ ಶೋಧ

Comments are closed.