
ಬೆಂಗಳೂರು, ಜೂ. ೨೨- ನಮಗೆ ವ್ಯಕ್ತಿಗಿಂತ ಪಕ್ಷ ಮುಖ್ಯ. ಪಕ್ಷದ ಉಳಿವಿಗಾಗಿ ಮತ್ತು ಮುಂದಿನ 2 ವರ್ಷಗಳ ಕಾಲ ಉತ್ತಮ ಆಡಳಿತ ನೀಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಾವು ಚರ್ಚೆ ಮಾಡುತ್ತಿದ್ದೇವೆ ಎಂದು ಸಚಿವ ಸ್ಥಾನ ಕಳೆದುಕೊಂಡಿರುವ ಹಿರಿಯ ಶಾಸಕ ವಿ. ಶ್ರೀನಿವಾಸ್‌ಪ್ರಸಾದ್ ಅವರು ಇಂದಿಲ್ಲಿ ತಿಳಿಸಿದರು.
ಸಚಿವ ಸಂಪುಟ ಪುನರ್ ರಚನೆ ಸಮರ್ಪಕವಾಗಿ ಆಗಿಲ್ಲ. ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ಸ್ವಹಿತಾಸಕ್ತಿ ಕಾಪಾಡಿಕೊಳ್ಳಲು ಮನ ಬಂದಂತೆ ಪುನರ್ ರಚನೆ ಮಾಡಿದ್ದಾರೆ. ಅವರಿಗೆ ಪಕ್ಷಕ್ಕಿಂತ ಸ್ವಹಿತಾಸಕ್ತಿಯೇ ಮುಖ್ಯವಾಗಿದೆ. ನಮ್ಮನ್ನು ಸೌಜನ್ಯಕ್ಕಾದರೂ ಸಂಪರ್ಕಿಸದೆ ಏಕಾಏಕಿ ಸಚಿವ ಸ್ಥಾನದಿಂದ ಕೈ ಬಿಟ್ಟಿರುವುದು ತಮಗೆ ನೋವುಂಟು ಮಾಡಿದೆ ಎಂದು ಅವರು ಹೇಳಿದರು.
ತಮ್ಮ ನಿವಾಸದಲ್ಲಿ ಮಾಜಿ ಸಚಿವ ಖಮರುಲ್ಲಾ ಇಸ್ಲಾಂ, ಶಾಸಕರಾದ ಡಾ. ಎ.ಬಿ. ಮಾಲಕರೆಡ್ಡಿ, ಎಸ್.ಟಿ. ಸೋಮಶೇಖರ್ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ಪುನರ್ ರಚನೆ ಬಗ್ಗೆ ನಮಗಿರುವ ಅಸಮಾಧಾನವನ್ನು ಈಗಾಗಲೇ ವ್ಯಕ್ತಪಡಿಸಿದ್ದೇವೆ. ಸಂಪುಟ ಪುನರ್ ರಚನೆ ಸರಿಯಾದ ರೀತಿಯಲ್ಲಿ ಮಾಡಿಲ್ಲ ಎಂದು ಹೆಚ್ಚಿನ ಶಾಸಕರು ಪ್ರತಿಕ್ರಿಯಿಸಿದ್ದಾರೆ. ಪಕ್ಷ ಮತ್ತು ಸರ್ಕಾರದ ವರ್ಚಸ್ಸು ಹೆಚ್ಚಿಸುವುದಕ್ಕೆ ಪೂರಕವಾಗಿ ಏನೇನು ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಅತೃಪ್ತ ಶಾಸಕರೊಂದಿಗೆ ಚರ್ಚೆ ಮಾಡುತ್ತೇವೆ ಎಂದರು.
ನಾಯಕತ್ವ ಬದಲಾವಣೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತುಕತೆ ಸಂದರ್ಭದಲ್ಲಿ ಪ್ರಸ್ತಾಪಕ್ಕೆ ಬರಲಿವೆ. 2018 ರ ವಿಧಾನಸಭಾ ಚುನಾವಣೆಯನ್ನು ಎದುರಿಸಲು ಪಕ್ಷದ ಸಂಘಟನೆಯನ್ನು ಬಲಿಷ್ಠಗೊಳಿಸುವ ವಿಚಾರವೂ ಚರ್ಚೆಯಾಗಲಿದೆ ಎಂದರು.
ಸಚಿವ ಸಂಪುಟದಿಂದ ತಮ್ಮನ್ನು ಕೈಬಿಟ್ಟಿರುವ ವಿಧಾನ ಸರಿಯಲ್ಲ. ಸಿದ್ಧರಾಮಯ್ಯ ಅವರ ಜತೆಯಲ್ಲೇ ಇದ್ದು ಅವರ ಕಷ್ಟ ಸುಖಕ್ಕೆ ಆದವರು ನಾವು. ಸಂಪುಟದಿಂದ ಕೈ ಬಿಡುವ ಬಗ್ಗೆ ನಮ್ಮ ಬಳಿ ಒಂದೂ ಮಾತು ಹೇಳಲಿಲ್ಲ. ಸೌಜನ್ಯಕ್ಕಾದರೂ ಮಾತನಾಡಲಿಲ್ಲ. ಇದರ ಬಗ್ಗೆ ನಮಗೆ ತುಂಬಾ ನೋವಾಗಿದೆ ಎಂದು ಶ್ರೀನಿವಾಸ್‌ಪ್ರಸಾದ್ ಹೇಳಿದರು.
ರಾಜ್ಯದಲ್ಲಿ ಮತ್ತೆ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ಸಿದ್ಧರಾಮಯ್ಯ ಕೇವಲ ಬರೀ ಮಾತಿನಲ್ಲಿ ಹೇಳುತ್ತಿದ್ದಾರೆ. ಅದನ್ನು ಕೃತಿಗಿಳಿಸುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತಿಲ್ಲ ಎಂದರು.
@12bc = ಮಾತನಾಡುವುದಿಲ್ಲ
ಸಿದ್ಧರಾಮಯ್ಯ ನವರ ಜತೆ ಮಾತನಾಡುವ ಪ್ರಶ್ನೆಯೇ ಇಲ್ಲ. ಅವರಿಂದಲೆ ನನಗೆ ಅಸಮಾಧಾನ ಉಂಟಾಗಿರುವುದರಿಂದ ಅವರ ಜತೆ ಚರ್ಚೆ ಮಾಡಲ್ಲ ಎಂದರು.
ಕಾಂಗ್ರೆಸ್‌ನ ಹಿರಿಯ ನಾಯಕ ಆಸ್ಕರ್‌ಫರ್ನಾಂಡಿಸ್ ಅವರೊಂದಿಗೆ ನಮಗಾಗಿರುವ ನೋವು ಕುರಿತು ಚರ್ಚೆ ಮಾಡುತ್ತೇವೆ. ಅವರು ವರಿಷ್ಠ ಮಂಡಳಿಯ ಹಿರಿಯ ಸದಸ್ಯರಲ್ಲಿ ಒಬ್ಬರು. ಅವರಿಗೆ ಈ ಬೆಳವಣಿಗೆಗಳ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ ಎಂದರು.
ಸದ್ಯಕ್ಕೆ ದೆಹಲಿಗೆ ಹೋಗುವ ಪ್ರಸ್ತಾಪ ನಮ್ಮ ಮುಂದಿಲ್ಲ ಎಂದ ಅವರು, ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡಲು ಹೊರಟಿದೆ ಎಂದು ಹೇಳಿರುವುದು ಸೂಕ್ತವಾಗಿದೆ. ಇದಕ್ಕೆ ಅವಕಾಶ ಕೊಡಬಾರದು ಎಂಬುದೆ ನಮ್ಮ ಉದ್ದೇಶವಾಗಿದ್ದು, ಪಕ್ಷವನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲ ಸೇರಿ ಚರ್ಚೆ ಮಾಡುತ್ತೇವೆ ಎಂದರು.
Comments are closed.