
ತಿರುವನಂತರಪುರ: ಕಲಬುರ್ಗಿಯ ಅಲ್ ಖಮರ್ ನರ್ಸಿಂಗ್ ಕಾಲೇಜಿನಲ್ಲಿ ನಡೆದಿದೆಯೆನ್ನಲಾದ ರ್ಯಾಗಿಂಗ್ನಲ್ಲಿ ಅನ್ನನಾಳಕ್ಕೆ ಗಂಭೀರ ಗಾಯಗೊಂಡಿದ್ದ ಕೇರಳ ಮೂಲದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಕೋಯಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಲ್ ಖಮರ್ ಕಾಲೇಜಿನ ವಸತಿ ನಿಲಯದಲ್ಲಿ ಮೇ ಒಂಬತ್ತರಂದು ತಮ್ಮ ಮಗಳ ಮೇಲೆ ಹಲ್ಲೆ ನಡೆದಿತ್ತು ಎಂದು ವಿದ್ಯಾರ್ಥಿನಿಯ ಪೋಷಕರು ಆರೋಪಿಸಿದ್ದರೂ ಕಾಲೇಜು ಆಡಳಿತ ಮಂಡಳಿ ಅದನ್ನು ಅಲ್ಲಗಳೆದಿದೆ.
ವಿದ್ಯಾರ್ಥಿನಿಯ ಹೇಳಿಕೆ: ತ್ರಿಶೂರ್ ಜಿಲ್ಲೆಯ ಎಡಪ್ಪಾಲ್ ಮೂಲದ ಬಿಎಸ್ಸಿ ವಿದ್ಯಾರ್ಥಿನಿ ಘಟನೆಯ ಬಗ್ಗೆ ಹೇಳಿಕೆ ನೀಡಿದ್ದಾರೆ. ಕೇರಳ ಮೂಲದವರೂ ಸೇರಿದಂತೆ ಹಿರಿಯ ವಿದ್ಯಾರ್ಥಿನಿಯರು ರ್ಯಾಗಿಂಗ್ ಮಾಡಿ ಶೌಚಾಲಯ ಶುಚಿಕಾರಕವನ್ನು ಒತ್ತಾಯಪೂರ್ವಕ ಕುಡಿಸಿದ್ದರು. ಅಲ್ಲದೆ ಅವರು ಮಾನಸಿಕ ಕಿರುಕುಳವನ್ನೂ ನೀಡಿದ್ದರು. ನಂತರ ರಕ್ತ ವಾಂತಿಯಾಗಿ ಕಲ್ಬುರ್ಗಿಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಇದೇ ವೇಳೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ಆಕೆ ವಿವರಿಸಿದ್ದಾರೆ.
ದಾಖಲಾಗದ ದೂರು
ಕಲಬುರ್ಗಿ: ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳ ಮೇಲೆ ನಡೆದಿದೆ ಎನ್ನಲಾದ ರ್ಯಾಗಿಂಗ್ ಆರೋಪಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯಾಗಲಿ ಅಥವಾ ಆಕೆಯ ಪೋಷಕರಿಂದ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಇದುವರೆಗೂ ದೂರು ದಾಖಲಾಗಿಲ್ಲ.
ಕೇರಳ ಮೂಲದ ವಿದ್ಯಾರ್ಥಿನಿಯೊಬ್ಬಳು 2016ರ ಫೆಬ್ರುವರಿಯಲ್ಲಿ ಇಲ್ಲಿನ ಅಲ್–ಖಮರ್ ನರ್ಸಿಂಗ್ ಕಾಲೇಜಿನಲ್ಲಿ ಪ್ರಥಮ ಬಿ.ಎಸ್ಸಿ ಪ್ರವೇಶ ಪಡೆದು ಹಾಸ್ಟೆಲ್ನಲ್ಲಿ ವಾಸವಾಗಿದ್ದಳು. ಮೇ 9ರಂದು ವಿಷಯುಕ್ತ ದ್ರಾವಣ ಸೇವಿಸಿದ್ದ ಆಕೆಯನ್ನು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ನೀಡಿದ ವೈದ್ಯರು ದ್ರಾವಣದಲ್ಲಿ ವಿಷ ಪದಾರ್ಥವಿದೆ ಎಂದು ಮೆಡಿಕೋ ಲೀಗಲ್ ಕೇಸ್ ಮಾಡಿದ್ದರು.
‘ವಿಷಯ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದೆವು. ಆಕೆ ಅರೆಪ್ರಜ್ಞಾವಸ್ಥೆಯಲ್ಲಿದ್ದಳು. ಹೀಗಾಗಿ ಹೇಳಿಕೆ ಪಡೆಯಲು ಆಗಲಿಲ್ಲ. ಗುಣಮುಖವಾದ ಬಳಿಕ ಪೊಲೀಸ್ ಠಾಣೆಗೆ ಬಂದು ದೂರು ನೀಡುವಂತೆ ಆಕೆಯ ಸಹಪಾಠಿಗಳಿಗೆ ಹೇಳಿದ್ದೆವು. ಆದರೆ ಮೂರು ದಿನದ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾದ ವಿದ್ಯಾರ್ಥಿನಿ ಕೇರಳಕ್ಕೆ ತೆರಳಿದ್ದಾಳೆ. ಇದುವರೆಗೆ ನಮ್ಮಲ್ಲಿ ಯಾವುದೇ ದೂರು ದಾಖಲಾಗಿಲ್ಲ’ ಎಂದು ರೋಜಾ ಪೊಲೀಸ್ ಠಾಣೆಯ ಮೂಲಗಳು ತಿಳಿಸಿವೆ.
‘ಆಕೆಯ ಪೋಷಕರು ಕೇರಳದಲ್ಲಿ ದೂರು ದಾಖಲಿಸಿದ್ದಾರೆ. ಆ ಪ್ರಕರಣ ನಮಗೆ ವರ್ಗಾವಣೆಯಾದ ಬಳಿಕ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಈ ಕುರಿತು ಅಲ್–ಖಮರ್ ಟ್ರಸ್ಟ್ನ ಟ್ರಸ್ಟಿ ಅಸದ ಅಲಿ ಅನ್ಸಾರಿ ‘ರ್ಯಾಗಿಂಗ್ ಆರೋಪದ ಮೇಲೆ ಯಾವುದೇ ದೂರು ದಾಖಲಾಗಿಲ್ಲ. ವಿದ್ಯಾರ್ಥಿನಿ, ಕೌಟುಂಬಿಕ ಸಮಸ್ಯೆ ಕಾರಣ ವಿಷಯುಕ್ತ ದ್ರಾವಣ ಸೇವಿಸಿದ್ದಳು. ಕಾಲೇಜು ಆಡಳಿತ ಮಂಡಳಿಯಿಂದಲೇ ಆಕೆಯ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿತ್ತು’ ಎಂದು ತಿಳಿಸಿದರು.
Comments are closed.