ಕಾಡಿನೊಳಕ್ಕೆ ಹಿದ್ಮೆಯನ್ನು ಕೊಂಡೊಯ್ದ ರಕ್ಷಣಾಪಡೆಯ ಅತ್ಯಾಚಾರಿಗಳು ಸಾಮೂಹಿಕ ಅತ್ಯಾಚಾರ ಮಾಡಿದ್ದಲ್ಲದೆ, ಆಕೆಯ ಸ್ತನಗಳನ್ನು ಕತ್ತರಿಸಿ, ತೊಡೆ ಭಾಗವನ್ನು ಕೊರೆದು, ಹೊಟ್ಟೆಗೆ ಇರಿದು ಹಿಂಸಿಸಿದರು. ಆಕೆ ಒದ್ದಾಡುತ್ತಿರುವಾಗ ಗುಂಡಿಟ್ಟು ಕೊಂದು, ಮಾವೋವಾದಿ ನಕ್ಸಲರ ಯುನಿಫಾರ್ಮ್ ತೊಡಿಸಿದರು ಮತ್ತು ಸುಕ್ಮಾಗೆ ತೆರಳಿ ಹಳ್ಳಿಯ ನಡುವೆ ಆಕೆಯ ದೇಹವನ್ನು ಎಸೆದರು….
ಚತ್ತೀಸ್ ಗಡದ ಗೋಮ್’ಪಾದ್ ಹಳ್ಳಿಯಲ್ಲಿ ನಡೆದ ಮದ್ಕಮ್ ಹಿದ್ಮೆ ಎನ್ಕೌಂಟರ್ ಕುರಿತು ಸಿವಿಲ್ ಲಿಬರ್ಟೀಸ್ ಕಮಿಟಿ ಸತ್ಯ ಶೋಧನಾ ವರದಿ ನೀಡಿದೆ. ಕಳೆದ ಎರಡು ದಿನಗಳಿಂದ ಚತ್ತೀಸ್ ಗಡದ ಸುಕ್ಮಾ ಜಿಲ್ಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀಡುಬಿಟ್ಟು ಈ ಸಮಿತಿ ಕೂಲಂಕಷ ಪರಿಶೀಲನೆ ನಡೆಸಿತ್ತು.
ಸತ್ಯಶೋಧನಾ ಸಮಿತಿಯ ವರದಿ
ಈ ಸಮಿತಿ ನೀಡಿರುವ ವರದಿಯನ್ನು ಅದು ಇರುವಂತೆಯೇ ಇಲ್ಲಿ ನೀಡಲಾಗಿದೆ. ಓದಿ….
“13.06.2016ರ ಮುಂಜಾನೆ ವಿಶೇಷ ಕಾರ್ಯಾಚರಣೆ ಪಡೆಯ ಸುಮಾರು 300ಕ್ಕೂ ಹೆಚ್ಚು ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್’ಗಳು ಕುಂಟಾ ಠಾಣೆಯ ವ್ಯಾಪ್ತಿಗೆ ಬರುವ ಗೋಮ್’ಪಾದ್ ಹಳ್ಳಿಯನ್ನು ಸುತ್ತುವರಿದು, ಅಲ್ಲಿಯ ನಿವಾಸಿಗಳನ್ನು ಮನಬಂದಂತೆ ಥಳಿಸಿದರು. ಮಕ್ಕಳು, ಮುದುಕರೆನ್ನದೆ ಕೈಗೆ ಸಿಕ್ಕವರನ್ನೆಲ್ಲ ಎಳೆದಾಡಿ ಬಡಿಯುತ್ತಿದ್ದರು. ಅವರಲ್ಲಿ ಕೆಲವರು ಮದ್ಕಮ್ ಹಿದ್ಮೆ ಮನೆಗೂ ನುಗ್ಗಿ ಆಕೆಯ ತಂದೆ, ತಾಯಿ, 6 ಮತ್ತು 10 ವರ್ಷಗಳ ಇಬ್ಬರು ತಮ್ಮಂದಿರನ್ನೂ ಹೊಡೆಯತೊಡಗಿದರು. ಅವರನ್ನು ಬಿಡಿಸಲು ಮುಂದಾದ ಹಿದ್ಮೆ, “ಅವರನ್ನೆಲ್ಲ ಯಾಕೆ ಹೊಡೆಯುತ್ತಿದ್ದೀರಿ?” ಎಂದು ಪ್ರಶ್ನಿಸಿದ್ದೇ ಅಪರಾಧವಾಯ್ತು. ರಕ್ಷಣಾ ಪಡೆಯ ಸಿಬ್ಬಂದಿ ಆಕೆಯನ್ನು ಹಿಡಿದು ಎಳೆದಾಡಿ, ಆಕೆಯ ಮೂಗುತಿ, ಕಿವಿಯೋಲೆಗಳನ್ನು ಹರಿದು ತೆಗೆದರು. ಆಕೆಯನ್ನು ಎಳೆದುಕೊಂಡು ಹಳ್ಳಿಯಿಂದ ಹೊರಟರು. ತಡೆಯಲು ಮುಂದಾದ ಹಳ್ಳಿಗರನ್ನು ಗುಂಡಿಟ್ಟು ಕೊಲ್ಲುವುದಾಗಿ ಬೆದರಿಸಿದರು. ಜೊತೆಗೆ, ಹಳ್ಳಿಗರ ಮನೆಗೆ ನುಗ್ಗಿ ಆಹಾರ ಸಾಮಗ್ರಿಗಳನ್ನೂ, ಚಾಕು, ಕೊಡಲಿ ಮೊದಲಾದ ಪರಿಕರಗಳನ್ನೂ ಹೊತ್ತೊಯ್ದರು.
ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಗೋಮ್’ಪಾದ್ ನಿಂದ ದೂರವಿರುವ ಕಾಡಿನೊಳಕ್ಕೆ ಹಿದ್ಮೆಯನ್ನು ಕೊಂಡೊಯ್ದ ರಕ್ಷಣಾಪಡೆಯ ಅತ್ಯಾಚಾರಿಗಳು ಸಾಮೂಹಿಕ ಅತ್ಯಾಚಾರ ಮಾಡಿದ್ದಲ್ಲದೆ, ಆಕೆಯ ಸ್ತನಗಳನ್ನು ಕತ್ತರಿಸಿ, ತೊಡೆ ಭಾಗವನ್ನು ಕೊರೆದು, ಹೊಟ್ಟೆಗೆ ಇರಿದು ಹಿಂಸಿಸಿದರು. ಆಕೆ ಒದ್ದಾಡುತ್ತಿರುವಾಗ ಗುಂಡಿಟ್ಟು ಕೊಂದು, ಮಾವೋವಾದಿ ನಕ್ಸಲರ ಯುನಿಫಾರ್ಮ್ ತೊಡಿಸಿದರು ಮತ್ತು ಸುಕ್ಮಾಗೆ ತೆರಳಿ ಹಳ್ಳಿಯ ನಡುವೆ ಆಕೆಯ ದೇಹವನ್ನು ಎಸೆದರು. ಸುದ್ದಿ ತಿಳಿಯುತ್ತಲೇ ಅಲ್ಲಿಗೆ ಧಾವಿಸಿದ ಗೋಮ್’ಪಾದ್ ಹಳ್ಳಿಗರು ಆಕೆಯ ದೇಹವನ್ನು ತಮ್ಮ ಸ್ಥಳಕ್ಕೆ ಕೊಂಡೊಯ್ದರು ಮತ್ತು ಜೂನ್ 14ರಂದು ಮಣ್ಣು ಮಾಡಿದರು. ಇದು ಸ್ಪಷ್ಟವಾಗಿ ರೇಪ್, ಮರ್ಡರ್ ಮತ್ತು ಫೇಕ್ ಎನ್ಕೌಂಟರ್ ಪ್ರಕರಣವಾಗಿದೆ.”
ಧರಣಿ ಕುಳಿತಿದ್ದಾರೆ ಸೋನಿ ಸೋರಿ
ಮದ್ಕಮ್ ಹಿದ್ಮೆಯ ಮೇಲೆ ನಡೆದ ಹತ್ಯಾಚಾರದ ಸುದ್ದಿ ತಿಳಿಯುತ್ತಲೇ (ಜೂನ್ 16ರಂದು) ಬುಡಕಟ್ಟು ಜನರ ಹಕ್ಕುಗಳ ಹೋರಾಟಗಾರ್ತಿ, ಆಪ್ ನಾಯಕಿ ಸೋನಿ ಸೋರಿ ಮತ್ತು ತಂಡ ಗೋಮ್’ಪಾದ್ ಹಳ್ಳಿಯತ್ತ ಧಾವಿಸಿತ್ತು. ಆದರೆ ಪೊಲೀಸರು ಕರೆತಂದ ಗೂಂಡಾಗಳು ಅವರ ಮೇಲೆ ಹಲ್ಲೆ ನಡೆಸಿ ಹಳ್ಳಿ ಪ್ರವೇಶಿಸದಂತೆ ಹಿಮ್ಮೆಟ್ಟಿಸಿದ್ದರು. ಸೋನಿ ಈ ಕುರಿತು ರಾಜ್ಯಾಡಳಿತದ ಗಮನ ಸೆಳೆಯಲು ಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ಸೋನಿ ಸೋರಿ ಸದರಿ ಪ್ರಕರಣದ ಕುರಿತು ತನಿಖೆ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಇಂದು ಈ ಸತ್ಯಾಗ್ರಹ 4ನೇ ದಿನ ತಲುಪಿದೆ. ಈ ಸಂದರ್ಭದಲ್ಲಿ ಸೋನಿ, ನಾಳೆ ತಮ್ಮ ಸತ್ಯಾಗ್ರಹವನ್ನು ಚತ್ತೀಸ್ ಗಡದ ರಾಜಧಾನಿ ರಾಯಪುರಕ್ಕೆ ಕೊಂಡೊಯ್ಯುವ ನಿರ್ಧಾರ ಮಾಡಿದ್ದಾರೆ.
ಎನ್ಕೌಂಟರ್ ಕಟ್ಟುಕಥೆ
ಜೂನ್ 13ರಂದು ಸುಕ್ಮಾ ಪೊಲೀಸರು ಮಹಿಳಾ ಮಾವೋ ನಕ್ಸಲೈಟ್ ಮದ್ಕಮ್ ಹಿದ್ಮೆ ಎಂಬಾಕೆಯನ್ನು ಕೊಂಟ ತಹಸೀಲಿನ ಗೋಮ್ಪಾದ್ ಬಳಿಯಲ್ಲಿ ಎನ್ಕೌಂಟರ್ ಮಾಡಿದ್ದೇವೆ ಎಂದು ಘೋಷಿಸಿಕೊಂಡಿದ್ದರು. ಹಳ್ಳಿಗರು ಅದನ್ನು ವಿರೋಧಿಸಿ, ಹೋರಾಟಗಾರ್ತಿ ಸೋನಿ ಸೋರಿಗೆ ಕರೆ ಮಾಡಿ ಹಿದ್ಮೆ ನಕ್ಸಲೈಟ್ ಅಲ್ಲವೆಂದೂ ಆಕೆಯನ್ನು ಎಳೆದೊಯ್ದು ಕೊಂದಿದ್ದಾರೆಂದೂ ತಿಳಿಸಿದ್ದರು ಮತ್ತು ನ್ಯಾಯ ದೊರಕಿಸಿಕೊಡುವಂತೆ ಕೋರಿದ್ದರು.
ಆಪ್ ಪಕ್ಷದ ರಾಜ್ಯ ಸಂಚಾಲಕ ಸಂಕೇತ್ ಠಾಕೂರ್ ಈ ಕುರಿತು ಕೋರ್ಟ್’ನಲ್ಲಿ ದೂರು ದಾಖಲಿಸಿದ್ದು, ಮಕ್ದಮ್ ಹಿದ್ಮೆ ಸಾವನ್ನು ಅತ್ಯಾಚಾರ ಮತ್ತು ಕೊಲೆ ಎಂದು ಪರಿಗಣಿಸುವಂತೆ ಮನವಿ ಸಲ್ಲಿಸಿದ್ದಾರೆ. ಬಹುತೇಕ ದೇಹ ಪೂರ್ತಿ ಇರಿತದ, ಕತ್ತರಿಸಿದ ಗಾಯಗಳಿದ್ದು, ಗುಂಡುಗಳೂ ಹೊಕ್ಕಿವೆ. ಆದರೆ ಮೃತ ದೇಹದ ಮೇಲಿದ್ದ ಯುನಿಫಾರ್ಮ್ ಮೇಲೆ ಒಂದು ತೂತು ಕೂಡ ಇಲ್ಲದಿರುವುದು ಇದೊಂದು ಫೇಕ್ ಎನ್ಕೌಂಟರ್ ಅನ್ನುವುದನ್ನು ಸಾಬೀತು ಪಡಿಸುತ್ತದೆ ಎಂದು ಸಂಕೇತ್ ವಾದಿಸಿದ್ದಾರೆ.
ನೂರರಲ್ಲಿ ಒಂದಾಗುತ್ತದೆಯೇ?
ಬಸ್ತಾರ್, ನಿಮಾಯಿಗಿರಿಯಲ್ಲಿ ಫೇಕ್ ಎನ್ಕೌಂಟರ್’ಗಳು, ಅತ್ಯಾಚಾರ – ಹತ್ಯಾಚಾರಗಳು ಸಾಮಾನ್ಯ ವಿದ್ಯಮಾನ ಇನ್ನುವಂತಾಗಿಹೋಗಿದೆ. ಈ ಪ್ರದೇಶದ ಅಗಾಧ ನೈಸರ್ಗಿಕ ಸಂಪತ್ತಿನ ಮೇಲೆ ಸರ್ಕಾರಗಳ ಕಣ್ಣಿದ್ದು, ಇಲ್ಲಿಯ ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ತಂತ್ರವಾಗಿ ‘ಆಪರೇಷನ್ ಗ್ರೀನ್ ಹಂಟ್’ ನಡೆಸಲಾಗುತ್ತಿದೆ ಅನ್ನುವುದು ಹೋರಾಟಗಾರರ ದೂರು. ಈ ಹಿನ್ನೆಲೆಯಲ್ಲಿ ಮದ್ಕಮ್ ಹಿದ್ಮೆ ಪ್ರಕರಣವೂ ಈವರೆಗಿನ ನೂರಾರು ಪ್ರಕರಣಗಳಲ್ಲಿ ಒಂದಾಗಿ ಮುಚ್ಚಿಹೋಗ್ತದೆಯಾ ಅನ್ನುವ ಪ್ರಶ್ನೆ ಕಾಡುತ್ತದೆ.

Comments are closed.