ಕರಾವಳಿ

ಶೂಟೌಟ್ ಪ್ರಕರಣದ ಪ್ರಮುಖ ಆರೋಪಿ ಹನೀಫ್ ಅಲಿಯಾಸ್ ಮುನ್ನಾ ಬಂಧನ :ದೇಶೀ ನಿರ್ಮಿತ ಪಿಸ್ತೂಲ್ ವಶ

Pinterest LinkedIn Tumblr

Puttur_shotout_accused_1

ಮಂಗಳೂರು, ಜೂ.21: ಪುತ್ತೂರು ನಗರ ಠಾಣಾ ವ್ಯಾಪ್ತಿಯ ರಾಜಧಾನಿ ಜುವೆಲ್ಲರ್ಸ್‌ನಲ್ಲಿ 2015ರ ಅಕ್ಟೋಬರ್ 6ರಂದು ನಡೆದ ಶೂಟೌಟ್ ಪ್ರಕರಣದ ಪ್ರಮುಖ ಆರೋಪಿ ಮುಹಮ್ಮದ್ ಹನೀಫ್ ಅಲಿಯಾಸ್ ಅಲಿ ಅಲಿಯಾಸ್ ಮುನ್ನಾ ಎಂಬಾತನನ್ನು ಇಂದು ಮುಂಜಾನೆ ವಿಟ್ಲದ ಉಕ್ಕುಡ ಪ್ರಯಾಣಿಕರ ತಂಗುದಾಣದ ಬಳಿ ಬಂಧಿಸಲಾಗಿದ್ದು, ಆರೋಪಿಯಿಂದ ದೇಶೀ ನಿರ್ಮಿತ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ.

ಮಂಗಳೂರಿನ ತಮ್ಮ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್‌ರಾವ್ ಬೊರಸೆ ಅವರು, ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಒಟ್ಟು ನಾಲ್ಕು ಮಂದಿಯನ್ನು ಬಂಧಿಸಲಾಗಿದ್ದು, ಇನ್ನು ಮೂವರು ಆರೋಪಿಗಳಿಗಾಗಿ ಶೋಧ ಮುಂದುವರೆದಿದೆ. ಇಂದು ಬಂಧಿಸಲಾಗಿರುವ ಆರೋಪಿಯ ಮನೆಯಿಂದ ಪ್ರಕರಣಕ್ಕೆ ಬಳಸಿದ್ದ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

Puttur_shotout_accused_2

ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿ 2015ರ ಅಕ್ಟೋಬರ್ 6ರಂದು ನಡೆದ ಶೂಟೌಟ್ ಪ್ರಕರಣದಲ್ಲಿ ದುಷ್ಕರ್ಮಿಗಳು ಮೋಟಾರು ಸೈಕಲ್‌ನಲ್ಲಿ ಬಂದು ಪಿಸ್ತೂಲಿನಿಂದ ಮೂರು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದರು. ಘಟನೆಯಂದ ಜುವೆಲ್ಲರ್ಸ್‌ನ ಶಟರ್, ಗ್ಲಾಸ್ ಮತ್ತು ಗೋಡೆಗೆ ಗುಂಡು ತಗುಲಿತ್ತು. ಪ್ರಕರಣದ ಪ್ರಮುಖ ಆರೋಪಿ ಅಬ್ದುಲ್ ಆಸೀರ್ ಎಂಬಾತನನ್ನು ಕಳೆದ ಎಪ್ರಿಲ್ ಒಂದರಂದು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಪ್ರಕರಣದ ಪೂರ್ತಿ ಚಿತ್ರಣ ಬಯಲುಗೊಂಡಿತ್ತು ಎಂದು ಅವರು ವಿವರ ನೀಡಿದರು.

Puttur_shotout_accused_3

ಪ್ರಕರಣದಲ್ಲಿ ಭೂಗತ ಜಗತ್ತಿನ ಪಾತಕಿ ಕಲಿ ಯೋಗೀಶ್ ತನ್ನ ಸಹಚರರಾದ ಖಾಲಿಯಾ ರಫೀಕ್, ಮುಹಮ್ಮದ್ ಹನೀಫ್ ಎಂಬವರ ಮೂಲಕ ಪುತ್ತೂರಿನ ಮುಳಿಯ ಜುವೆಲ್ಲರ್ಸ್ ಮತ್ತು ರಾಜಧಾನಿ ಜುವೆಲ್ಲರ್ಸ್‌ಗೆ ಗುಂಡಿನ ದಾಳಿ ನಡೆಸಿ ಹಫ್ತಾ ಪಡೆಯಲು ಒಳಸಂಚು ನಡೆಸಿದ್ದರು. ಮುಳಿಯ ಜ್ಯುವೆಲ್ಲರಿಯಲ್ಲಿ ಸಾಕಷ್ಟು ಭದ್ರತಾ ವ್ಯವಸ್ಥೆಯಿದ್ದ ಕಾರಣ ಖಾಲಿಯಾ ರಫೀಕ್‌ನ ನಿರ್ಧಾರದಂತೆ ರಾಜಧಾನಿ ಜುವೆಲ್ಲರ್ಸ್‌ಗೆ ಗುಂಡಿನ ದಾಳಿ ನಡೆಸಿ ಹಫ್ತಾಕ್ಕೆ ಬೇಡಿಕೆ ಇರಿಸಲು ಯೋಜನೆ ರೂಪಿಸಲಾಗಿತ್ತು. ಖಾಲಿಯಾ ರಫೀಕ್ ಮತ್ತು ಮುಹಮ್ಮದ್ ಹನೀಫ್ ಸೇರಿಕೊಂಡು ಅವರ ಸಹಚರರಾದ ಕುಂಬ್ಳೆಯ ಅಬ್ದುಲ್ ಆಸೀರ್, ರಮೀಝಾ ರಾಜಾ, ಪೈಯ ಅಲಿಯಾಸ್ ಫಯಾಝ್, ಅನ್ವರ್ ಸುಂಕದಕಟ್ಟೆ ಎಂಬವರೊಂದಿಗೆ ಸೇರಿಕೊಂಡು ಗುಂಡಿನ ದಾಳಿ ನಡೆಸಲಾಗಿತ್ತು.

Puttur_shotout_accused_4

ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಅಬ್ದುಲ್ ಆಸೀರ್ ಹಾಗೂ ಅನ್ವರ್‌ನನ್ನು ದಸ್ತಗಿರಿ ಮಾಡಲಾಗಿದ್ದು, ಇವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಕರಣದ ಸಂದರ್ಭ ಬಳಸಲಾದ ಆಲ್ಟೋ ಕಾರು ಹಾಗೂ ಮೋಟಾರು ಸೈಕಲನ್ನು ಕೂಡಾ ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಖಾಲಿಯಾ ರಫೀಕ್ ಎಂಬಾತನನ್ನು ತ್ರಿಶೂರು ಜೈಲಿನಿಂದ ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ತನಿಖೆಗೆ ಒಳಪಡಿಸಲಾಗಿದೆ. ಈತನನ್ನು ಗೂಂಡಾ ಕಾಯ್ದೆಯಡಿ ಮಂಜೇಶ್ವರ ಪೊಲೀಸರು ಬಂಧಿಸಿದ್ದು, ಪ್ರಸ್ತುತ ಜೈಲಿನಲ್ಲಿದ್ದಾನೆ.

Puttur_shotout_accused_5

ಆರೋಪಿ ಮುಹಮ್ಮದ್ ಹನೀಫ್ ಅಲಿಯಾಸ್ ಮುನ್ನಾ ಕಾಸರಗೋಡು ಜಿಲ್ಲೆಯವನಾಗಿದ್ದು, ಈತನ ಮೇಲೆ ಬೆಂಗಳೂರಿನ ಏರ್‌ಪೋರ್ಟ್ ಪೊಲೀಸ್ ಠಾಣೆಯಲ್ಲಿ ಖೋಟಾನೋಟು ಪ್ರಕರಣ, ವಿಟ್ಲ ಠಾಣೆಯಲ್ಲಿ ದರೋಡೆಗೆ ಸಂಚು ಪ್ರಕರಣ, ಕಾಸರಗೋಡು ಪೊಲೀಸ್ ಠಾಣೆಯ ಬೇವಿಂಜೆ ಶೂಟೌಟ್ ಪ್ರಕರಣ, ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ಶೂಟೌಟ್ ಪ್ರಕರಣ ಹಾಗೂ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಕಾಯಿತಿಗೆ ಸಂಚು ಪ್ರಕರಣ ಸೇರಿದಂತೆ ಒಟ್ಟು ಏಳು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

ಈ ಪ್ರಕರಣದ ಕಾರ್ಯಾಚರಣೆಯಲ್ಲಿ ಪುತ್ತೂರು ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ರಿಷ್ಯಂತ್, ಪುತ್ತೂರು ನಗರ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್, ಪುತ್ತೂರು ನಗರ ಠಾಣಾ ಪೊಲೀಸ್ ಉಪನಿರೀಕ್ಷಕ ಹಾಗೂ ತನಿಖಾಧಿಕಾರಿ ಅಬ್ದುಲ್ ಖಾದರ್, ಎಎಸೈ ಪಾಂಡುರಂಗ, ವೆಂಕಟರಮಣ ಗೌಡ ಹಾಗೂ ತಂಡದ ಕಾರ್ಯದಕ್ಷತೆಯನ್ನು ಹಿರಿಯ ಅಧಿಕಾರಿಗಳು ಪ್ರಶಂಸಿಸಿ 25,000 ರೂ. ನಗದು ಬಹುಮಾನ ಘೋಷಿಸಿದ್ದಾರೆ ಎಂದು ಎಸ್ಪಿ ಗುಲಾಬ್‌ರಾವ್ ತಿಳಿಸಿದರು.

Puttur_shotout_accused_6

ಉಳಿದ ಆರೋಪಿಗಳ ಬಂಧನಕ್ಕೆ ವಿಶೇಷ ತಂಡ : ಎಸ್ಪಿ

ಪ್ರಕರಣಕ್ಕೆ ಸಂಬಂಧಿಸಿ ಭೂಗತ ಪಾತಕಿ ಕಲಿ ಯೋಗೀಶ್ ರಮೀಝ್ ರಾಜಾ, ಪೈಯ ಅಲಿಯಾಸ್ ಫಯಾಝ್‌ರನ್ನು ಬಂಧಿಸಬೇಕಾಗಿದ್ದು, ಇವರು ಮೂವರು ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ. ಅವರ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಎಸ್ಪಿ ಗುಲಾಬ್‌ರಾವ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಇತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.