
ಬೆಂಗಳೂರು: ಮದುವೆಯಾಗುವಂತೆ ವಿವಾಹಿತ ಮಹಿಳೆಯನ್ನು ಒತ್ತಾಯಿಸುತ್ತಿದ್ದ ವ್ಯಕ್ತಿಯೊಬ್ಬ ಆಕೆಯ ಮಕ್ಕಳ ಮುಖವನ್ನು ಬೀಡಿಯಿಂದ ಸುಟ್ಟು ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ವೈಯಾಲಿಕಾವಲ್ ಮುನೇಶ್ವರ ಬ್ಲಾಕ್ ಸಮೀಪದ ಅಯ್ಯಪ್ಪಸ್ವಾಮಿ ದೇವಸ್ಥಾನ ಬಳಿ ರಸ್ತೆ ಪಕ್ಕದ ಖಾಲಿ ಜಾಗದಲ್ಲಿ ವಾಸವಿದ್ದ ಫಾತಿಮಾ (25) ಎಂಬುವರ ಇಬ್ಬರು ಮಕ್ಕಳ ಮುಖವನ್ನು ಸುಟ್ಟ ಆರೋಪದಡಿ ದೇವರಾಜ್ (26) ಎಂಬಾತನನ್ನು ವೈಯಾಲಿಕಾವಲ್ ಪೊಲೀಸರು ಬಂಧಿಸಿದ್ದಾರೆ.
ದೊಡ್ಡಬಳ್ಳಾಪುರ ಮೂಲದ ಫಾತಿಮಾ ಅವರಿಗೆ ಗಾಯತ್ರಿ, ಬದ್ರಿ, ವಿಶ್ವ ಎಂಬ ಮೂವರು ಮಕ್ಕಳೊಂದಿಗೆ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದರು. ಕಲ್ಯಾಣ ಮಂಟಪ, ಹೋಟೆಲ್‌ಗಳಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು.
ಮನೆ ಇಲ್ಲದಿದ್ದರಿಂದ ರಸ್ತೆಬದಿಯಲ್ಲಿ ಮಕ್ಕಳೊಂದಿಗೆ ಫಾತಿಮಾ ಉಳಿದುಕೊಂಡಿದ್ದರು.ಕೆಲಸದ ಜಾಗದಲ್ಲಿ ಫಾತಿಮಾಗೆ ಪರಿಚಯವಾದ ಮಲ್ಲೇಶ್ವರದ ದೇವರಾಜ್, ಸಲುಗೆ ಬೆಳೆಸಿ ಫಾತಿಮಾ ಜತೆಯೇ ವಾಸವಿದ್ದ.
ಬಳಿಕ ಮದುವೆಯಾಗುವಂತೆ ಪೀಡಿಸುತ್ತಿದ್ದ ದೇವರಾಜ್, ಮಕ್ಕಳನ್ನು ಹಾಸ್ಟೆಲ್‌ಗೆ ಸೇರಿಸುವಂತೆ ಒತ್ತಾಯಿಸುತ್ತಿದ್ದ. ಅದಕ್ಕೆ ಫಾತಿಮಾ ವಿರೋಧ ವ್ಯಕ್ತಪಡಿಸುತ್ತಿದ್ದರು. ಅದೇ ಕಾರಣಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆ ಯುತ್ತಿತ್ತು. ಈ ವೇಳೆ ಫಾತಿಮಾ ಮಕ್ಕಳನ್ನು ಥಳಿಸುತ್ತಿದ್ದ ದೇವರಾಜ್, ಮಕ್ಕಳ ಮುಖವನ್ನು ಬೀಡಿಯಿಂದ ಸುಡುತ್ತಿದ್ದ ಎಂದು ಪೊಲೀಸರು ಮಾಹಿತಿ ತಿಳಿಸಿದ್ದಾರೆ.
ಪ್ರತಿದಿನವೂ ಮುಖವನ್ನು ಬೀಡಿ ಯಿಂದ ಸುಡುತ್ತಿದ್ದರಿಂದ ಎರಡು ಹಾಗೂ ನಾಲ್ಕು ವರ್ಷದ ಮಗುವಿನ ಮುಖಕ್ಕೆ ಹೆಚ್ಚಿನ ಗಾಯವಾಗಿ ಕೀವು ಬರುತ್ತಿತ್ತು. ಅದನ್ನು ನೋಡಿದ ಸಾರ್ವಜನಿಕರು, ಫಾತಿಮಾ ಹಾಗೂ ದೇವರಾಜ್‌ನನ್ನು ಪ್ರಶ್ನಿಸಿದ್ದರು. ಈ ವೇಳೆ ದೇವರಾಜ್, ಸಾರ್ವ ಜನಿಕರನ್ನು ಅವಾಚ್ಯ ಶಬ್ದಗಳಿಂದ ನಿಂದಿ ಸಿದ್ದ. ಕೋಪಗೊಂಡ ಸಾರ್ವಜನಿಕರು, ಆತನನ್ನು ಥಳಿಸಿದ್ದರು.ಬಳಿಕ ಠಾಣೆಗೆ ಮಾಹಿತಿ ನೀಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ದೇವರಾಜ್ ಮಾದಕ ವ್ಯಸನಿಯಾಗಿದ್ದು, ಹಣಕ್ಕಾಗಿ ಮಕ್ಕಳನ್ನು ಬಿಕ್ಷೆ ಬೇಡುವಂತೆ ಒತ್ತಾಯಿಸುತ್ತಿದ್ದ, ಮಕ್ಕಳು ನಿರಾಕರಿಸಿದರೇ ಅವರಿಗೆ ಬೀಡಿ ಹಾಗೂ ಸಿಗರೇಟ್ ನಿಂದ ಸುಡುತ್ತಿದ್ದ ಎಂದು ಅಪ್ಪು ಎಂಬಾತ ಹೇಳಿದ್ದಾನೆ.
Comments are closed.