ಬೆಂಗಳೂರು: ಪಿಯು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯನ್ನು ಭಾಗಶಃ ಪೂರ್ಣಗೊಳಿಸಿರುವ ಸಿಐಡಿ ಸದ್ಯದಲ್ಲೇ ವಿಶೇಷ ನ್ಯಾಯಾಲಯಕ್ಕೆ 1,200 ಪುಟಗಳ ಪ್ರಾಥಮಿಕ ಆರೋಪಪಟ್ಟಿ ಸಲ್ಲಿಸಲಿದೆ.
‘ಆರೋಪಿಗಳ ವಿರುದ್ಧ ಕೋಕಾ ಅಡಿ ಪ್ರಕರಣ ದಾಖಲಾಗಿರುವುದರಿಂದ ಆರೋಪಪಟ್ಟಿ ಸಲ್ಲಿಕೆಗೆ 180 ದಿನಗಳ ಕಾಲಾವಕಾಶವಿದೆ. ಆದರೆ, ತನಿಖೆ ಬಹುತೇಕ ಪೂರ್ಣಗೊಂಡಿರುವ ಕಾರಣ ಪ್ರಾಥಮಿಕ ಆರೋಪಪಟ್ಟಿ ಸಲ್ಲಿಸುತ್ತೇವೆ. ಮುಂದಿನ ದಿನಗಳಲ್ಲಿ ಹೆಚ್ಚುವರಿ ದಾಖಲೆಗಳು ಲಭ್ಯವಾದರೆ, ಅವುಗಳನ್ನು ಸೇರಿಸಿ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಕೆ ಮಾಡುತ್ತೇವೆ’ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
‘ಪ್ರಕರಣ ಸಂಬಂಧ ಶಿವಕುಮಾರಯ್ಯ ಅಲಿಯಾಸ್ ಗುರೂಜಿ, ಕಿರಣ್ ಅಲಿಯಾಸ್ ಕುಮಾರಸ್ವಾಮಿ, ಹಾನಗಲ್ ಉಪಖಜಾನೆಯ ಕಚೇರಿ ಸಹಾಯಕ ಸಂತೋಷ್ ಅಗಸಿಮನಿ ಸೇರಿದಂತೆ 16 ಮಂದಿಯನ್ನು ಬಂಧಿಸಲಾಗಿದೆ. ಸದಾಶಿವನಗರದ ರಿಯಲ್ ಎಸ್ಟೇಟ್ ಉದ್ಯಮಿ ನಾರಾಯಣ್ ಎಂಬಾತನ ಶೋಧ ಕಾರ್ಯ ಮುಂದುವರಿದಿದೆ. ಶಿವಕುಮಾರಯ್ಯ ಮತ್ತು ಕಿರಣ್ ಪ್ರತ್ಯೇಕ ತಂಡಗಳನ್ನು ರಚಿಸಿಕೊಂಡು ಪ್ರಶ್ನೆಪತ್ರಿಕೆ ಸೋರಿಕೆ ಮಾಡುತ್ತಿದ್ದರು’.
‘ಬಂಧಿತರು, ತನಿಖಾಧಿಕಾರಿಗಳು, ಅಮಾನತಾಗಿದ್ದ ಪಿಯು ಮಂಡಳಿಯ 40 ನೌಕರರು, ವಾಟ್ಸ್‌ಆ್ಯಪ್ ಮೂಲಕ ಪರೀಕ್ಷೆಗೂ ಮೊದಲೇ ಪ್ರಶ್ನೆಪತ್ರಿಕೆ ಪಡೆದಿದ್ದ ವಿದ್ಯಾರ್ಥಿಗಳು ಹಾಗೂ ಪೋಷಕರು ಸೇರಿ 300ಕ್ಕೂ ಹೆಚ್ಚು ಮಂದಿಯ ಹೇಳಿಕೆಗಳನ್ನು ಆರೋಪಪಟ್ಟಿಯಲ್ಲಿ ಸೇರಿಸಲಾಗಿದೆ’.
‘ಶಿವಕುಮಾರಯ್ಯನಿಂದ ಹಿರಿಯ ಪೊಲೀಸ್ ಅಧಿಕಾರಿಗಳು ಲಾಭ ಪಡೆದಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಆದರೆ, ಅದಕ್ಕೆ ಯಾವುದೇ ಪುರಾವೆಗಳು ಸಿಕ್ಕಿಲ್ಲ. ಅಲ್ಲದೆ, ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಪಿಯು ಮಂಡಳಿಯ ಅಧಿಕಾರಿಗಳು ಅಥವಾ ಸಿಬ್ಬಂದಿಯ ಪಾತ್ರ ಕಂಡು ಬಂದಿಲ್ಲ’.
‘ಎರಡು ಸಲವೂ ಹಾನಗಲ್ ಉಪ ಖಜಾನೆಯಿಂದಲೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ಮಾರ್ಚ್ 19ರಂದು ಶಿವಕುಮಾರಯ್ಯನ ತಂಡ, ಅಲ್ಲಿನ ಕಚೇರಿ ಸಹಾಯಕ ಸಂತೋಷ್ ಅಗಸಿಮನಿಗೆ ₹ 75 ಸಾವಿರ ಕೊಟ್ಟು ಪ್ರಶ್ನೆಪತ್ರಿಕೆ ಎಗರಿಸಿತ್ತು. ಏಪ್ರಿಲ್ 29ರಂದು ಮರುಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಕಿರಣ್ ಅದೇ ಖಜಾನೆಯಿಂದ ಕದ್ದಿದ್ದ. ಇದಕ್ಕೆ ನೆರವು ನೀಡಿದ್ದಕ್ಕೆ ಆತ ಸಂತೋಷ್‌ಗೆ ₹ 1 ಲಕ್ಷ ಕೊಟ್ಟಿದ್ದ’ ಎಂದು ಆರೋಪಪಟ್ಟಿಯಲ್ಲಿ ತಿಳಿಸಿರುವುದಾಗಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಕರ್ನಾಟಕ
Comments are closed.