ಕರ್ನಾಟಕ

ಕಾಮಗಾರಿ – ಅಧಿಕಾರಿಗಳಿಗೆ ಸಿಎಂ ಚಾಟಿ ನಗರ ಪ್ರದಕ್ಷಿಣೆ

Pinterest LinkedIn Tumblr

14j8ಬೆಂಗಳೂರು, ಜೂ. ೧೪- ಮುಂಗಾರು ಮಳೆ ಆರಂಭಗೊಂಡಿರುವ ಹಿನ್ನಲೆಯಲ್ಲಿ ಬಿಬಿಎಂಪಿ, ಬಿಡಿಎ ಹಾಗೂ ಮತ್ತಿತರ ಇಲಾಖೆಗಳು ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಖುದ್ದು ಪರಿಶೀಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ನಗರದ ವಿವಿಧ ಕಡೆ ನಗರ ಪ್ರದಕ್ಷಿಣೆ ನಡೆಸಿ ಅಭಿವೃದ್ಧಿ ಕಾಮಗಾರಿಗಳನ್ನು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಇಂದು ಬೆಳಿಗ್ಗೆ 10.40ಕ್ಕೆ ಸರಿಯಾಗಿ ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಮೇಯರ್ ಮಂಜುನಾಥ ರೆಡ್ಡಿ ಹಾಗೂ ನಗರದ ಕೆಲ ಶಾಸಕರೊಂದಿಗೆ ನಗರ ಪ್ರದಕ್ಷಿಣೆ ನಡೆಸಿದ ಮುಖ್ಯಮಂತ್ರಿಗಳು ಕೆಲವೆಡೆ ಅಭಿವೃದ್ಧಿ ಕಾಮಗಾರಿಗಳು ಮಂದಗತಿಯಲ್ಲಿ ನಡೆದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ತಿಂಗಳು 24 ರಂದು ನಡೆಸಿದ್ದ ನಗರ ಪ್ರದಕ್ಷಿಣೆಯ ಮುಂದುವರೆದ ಭಾಗವಾಗಿ ಇಂದು ಮೈಸೂರು ರಸ್ತೆಯ ಗಾಳಿ ಆಂಜನೇಯ ಸ್ವಾಮಿ ದೇವಾಲಯದ ಬಳಿ ನಿರ್ಮಾಣವಾಗುತ್ತಿರುವ ಸೇತುವೆ ಕಾಮಗಾರಿಯನ್ನು ಮುಖ್ಯಮಂತ್ರಿಗಳು ಪರಿಶೀಲಿಸಿದರು.

ಪ್ರತಿ ಬಾರಿಯೂ ಮಳೆ ಬಂದಾಗ ಗಾಳಿ ಆಂಜನೇಯ ಸ್ವಾಮಿ ದೇವಾಲಯಕ್ಕೆ ನೀರು ನುಗ್ಗಿ ಸಮಸ್ಯೆ ಸೃಷ್ಟಿಯಾಗುತ್ತಿತ್ತು. ಅದನ್ನು ತಡೆಗಟ್ಟಲು ದೇವಾಲಯದ ಪಕ್ಕದ ಮೇಲುಸೇತುವೆಗೆ ಸರಿಸಮನಾಗಿ ನಿರ್ಮಾಣವಾಗುತ್ತಿರುವ ಸೇತುವೆ ಕಾಮಗಾರಿಯನ್ನು 20 ದಿನದೊಳಗಾಗಿ ಪೂರ್ಣಗೊಳಿಸುವುದಾಗಿ ಬಿಬಿಎಂಪಿ ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ಭರವಸೆ ನೀಡಿದರು.

ಸೇತುವೆ ಕಾಮಗಾರಿ ಪೂರ್ಣಗೊಂಡ ಬಳಿಕ ದೇವಾಲಯಕ್ಕೆ ಮಳೆ ನೀರು ನುಗ್ಗದು. ಇದೇ ವೇಳೆ ದೇವಾಲಯದ ಮುಂಭಾಗದ ರಸ್ತೆಯಲ್ಲಿ ಆಗುತ್ತಿದ್ದ ಸಂಚಾರ ದಟ್ಟಣೆಯೂ ತಗ್ಗಲಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ವಿವಿರಿಸಿದರು.

ಇದಕ್ಕೂ ಮುನ್ನ ಮೈಸೂರು ರಸ್ತೆಯ ಸ್ಯಾಟ್ ಲೈಟ್ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತೆ ಇರುವ ಬೃಹತ್ ಮಳೆ ನೀರು ಕಾಲುವೆಯ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿಗಳಿಗೆ ಶಾಸಕ ಎಂ. ಕೃಷ್ಣಪ್ಪ ಅವರು ಈ ರಾಜಕಾಲುವೆಯಲ್ಲಿ ಹೂಳು ತೆಗೆಯಬೇಕು ಹಾಗೂ ತಡೆಗೋಡೆಯನ್ನು ಎತ್ತರಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ನಂತರ ಮುಖ್ಯಮಂತ್ರಿಗಳ ನಗರ ಪ್ರದಕ್ಷಿಣೆಯು ಕಂಠೀರವ ಸ್ಟುಡಿಯೊ ಬಳಿ ನಿರ್ಮಾಣವಾಗುತ್ತಿರುವ ಅಂಡರ್ ಪಾಸ್ ಕಾಮಗಾರಿ ಸ್ಥಳಕ್ಕೆ ತೆರಳಿತು. ಅಲ್ಲಿನ ಕಾಮಗಾರಿಯನ್ನು ಕೆಲವೇ ಕ್ಷಣಗಳಲ್ಲಿ ಪರಿಶೀಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುವಂತೆ ಆದೇಶಿಸಿದರು.

ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಕೈಗೆತ್ತಿಕೊಂಡಿರುವ ರಸ್ತೆ ಅಗಲೀಕರಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿಗಳಿಗೆ ಅಧಿಕಾರಿಗಳು ಜುಲೈ ತಿಂಗಳ ಒಳಗೆ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ನೀಡಿದ ಭರವಸೆಗೆ ಒಪ್ಪದ ಮುಖ್ಯಮಂತ್ರಿಗಳು ಕಳೆದ ಬಾರಿಯೂ ಇದೇ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ್ದೆ. ಆಗಸ್ಟ್ 15ರ ವೇಳೆಗೆ ರಸ್ತೆ ಅಗಲೀಕರಣ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಬಿಡಬೇಕೆಂದು ಕಟ್ಟಪ್ಪಣೆ ನೀಡಿದರು.

ನಗರೋತ್ಥಾನ ಯೋಜನೆಯಡಿ 3.5 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಈ ರಸ್ತೆ ಅಗಲೀಕರಣದಿಂದಾಗಿ ತುಮಕೂರು ರಸ್ತೆಗೆ ತೆರಳಲು 10 ಕಿ.ಮೀ. ಅಂತರ ತಗ್ಗಲಿದೆ ಎಂಬುದನ್ನು ಅಧಿಕಾರಿಗಳು ಮಾಹಿತಿ ಒದಗಿಸಿದರು.

ನಂತರ ಮುಖ್ಯಮಂತ್ರಿಗಳು ಗೊರಗುಂಟೆಪಾಳ್ಯದ ಎಂಇಎಸ್ ರೈಲ್ವೆ ಜಂಕ್ಷನ್ ಬಳಿ ಮೇಲುಸೇತುವೆ ಕಾಮಗಾರಿಯನ್ನು ಪರಿಶೀಲಿಸಿದರು.

Comments are closed.