ರಾಷ್ಟ್ರೀಯ

ತಮಿಳುನಾಡಿನಲ್ಲಿ ದಾಖಲೆ ಬರೆದ ಅಮ್ಮ, ಸತತ 2ನೇ ಬಾರಿಗೆ ಅಧಿಕಾರದತ್ತ ಎಐಡಿಎಂಕೆ

Pinterest LinkedIn Tumblr

jayalalitha

ಒಟ್ಟು 234 ಕ್ಷೇತ್ರಗಳ ಪೈಕಿ ಬರೊಬ್ಬರಿ 130 ಕ್ಷೇತ್ರಗಳಲ್ಲಿ ಎಐಡಿಎಂಕೆ ಮುನ್ನಡೆ

ಚೆನ್ನೈ: ತಮಿಳುನಾಡಿನ ರಾಜಕೀಯ ದಾಖಲೆಗಳು ಧೂಳಿಪಟವಾಗಿದ್ದು, ಸಾಂಪ್ರದಾಯಿಕ ಅಧಿಕಾರ ಬದಲಾವಣೆಗೆ ತಿಲಾಂಜಲಿ ಹಾಕಿರುವ ಜನತೆ ಸತತ 2ನೇ ಬಾರಿಗೆ ಜಯಲಲಿತಾ ಅವರಿಗೆ ಸ್ಪಷ್ಟ ಬಹುಮತ ನೀಡಿದ್ದಾರೆ.

ಒಟ್ಟು 234 ಕ್ಷೇತ್ರಗಳ ಪೈಕಿ ಸಿಎಂ ಜಯಲಲಿತಾ ಅವರ ಎಐಎಡಿಎಂಕೆ ಪಕ್ಷ 130 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಅಧಿಕಾರದತ್ತ ದಾಪುಗಾಲಿರಿಸಿದೆ. ಇನ್ನು ಡಿಎಂಕೆ ಪಕ್ಷ ಕೇವಲ 89 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ತಮ್ಮ ಬಳಿಕವಷ್ಟೇ ಪುತ್ರ ಸ್ಟಾಲಿನ್ ಸಿಎಂ ಅಭ್ಯರ್ಥಿ ಎಂದು ಹೇಳಿದ್ದ ಮಾಜಿ ಸಿಎಂ ಕರುಣಾನಿಧಿ ಅವರ ಹೇಳಿಕೆಯೇ ಅವರಿಗೆ ಹಿನ್ನಡೆಯಾಯಿತೇ ಎಂದು ಅವಲೋಕಿಸುತ್ತಿದ್ದಾರೆ. ಆಡಳಿತಾರೂಢ ಎಐಎಡಿಎಂಕೆ ಪಕ್ಷದ ವೈಫಲ್ಯಗಳನ್ನು ಜನರಿಗೆ ಮನದಟ್ಟು ಮಾಡುವಲ್ಲಿ ಡಿಎಂಕೆ ಪಕ್ಷ ಸಂಪೂರ್ಣ ವಿಫಲವಾಗಿರುವುದು ಪ್ರಸ್ತುತ ಚುನಾವಣಾ ಫಲಿತಾಂಶದಿಂದ ಗೋಚರವಾಗುತ್ತಿದೆ.

ಇನ್ನು ಪ್ರತಿಪಕ್ಷ ನಾಯಕರಾಗಿದ್ದ ಡಿಎಂಡಿಕೆ ಪಕ್ಷದ ಮುಖ್ಯಸ್ಥ ವಿಜಯ್ ಕಾಂತ್ ಅವರಿಗೆ ಭಾರಿ ಮುಖಭಂಗವಾಗಿದ್ದು, ಕಳೆದ ಬಾರಿ ಮೈತ್ರೀಕೂಟದಲ್ಲಿದ್ದ ವಿಜಯ್ ಕಾಂತ್ ಅವರ ಡಿಎಂಕೆ ಪಕ್ಷ 16 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ಪ್ರಸ್ತುತ ಚುನಾವಣೆಯಲ್ಲಿ ಮೈತ್ರೀಕೂಟದಿಂದ ಹೊರಬಂದ ವಿಜಯ್ ಕಾಂತ್ ಅವರು, ಸಿಪಿಐ, ಸಿಪಿಐಎಂ ಸೇರಿದಂತೆ ಒಟ್ಟು 5 ಪಕ್ಷಗಳ ಜೊತೆಗೂಡಿ ತಮ್ಮದೇ ಆದ ಸ್ವತಂತ್ರ ಮೈತ್ರೀಕೂಟ (ತೃತೀಯರಂಗ) ರಚನೆ ಮಾಡಿಕೊಂಡಿದ್ದರು. ಆದರೀಗ ವಿಜಯ್ ಕಾಂತ್ ಅವರ ಈ ಯೋಜನೆ ವಿಫಲವಾಗಿದ್ದು, ಡಿಎಂಡಿಕೆ ಒಂದೂ ಕ್ಷೇತ್ರದಲ್ಲಿಯೂ ಕೂಡ ಮುನ್ನಡೆ ಸಾಧಿಸಿಲ್ಲ.

ಸ್ವತಃ ಪಕ್ಷದ ಮುಖಂಡ ವಿಜಯ್ ಕಾಂತ್ ಅವರು ತಮ್ಮ ಸ್ವಕ್ಷೇತ್ರ ರಿಷಿವ್ಯಾಂಡಿಯಂನಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ.

ಪ್ರವಾಹ ಪೀಡಿತ ಚೆನ್ನೈನಲ್ಲಿ ಡಿಎಂಕೆಗೆ ಭಾರಿ ಮುನ್ನಡೆ
ಇನ್ನು ರಾಜಧಾನಿ ಚೆನ್ನೈನಗರದಲ್ಲಿ ಆಢಳಿತಾ ರೂಢ ಎಐಎಡಿಎಂಕೆಗೆ ಭಾರಿ ಮುಖಭಂಗವಾಗಿದ್ದು, ಚೆನ್ನೈನ ಒಟ್ಟು 16 ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳಲ್ಲಿ ಡಿಎಂಕೆ ಪಕ್ಷದ ಸದಸ್ಯರು ಮುನ್ನಡೆ ಸಾಧಿಸಿದ್ದಾರೆ. ಕೇವಲ ಮೂರು ಕ್ಷೇತ್ರಗಳಲ್ಲಿ ಮಾತ್ರ ಎಐಎಡಿಎಂಕೆ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಚೆನ್ನೈ ಪ್ರವಾಹ ಪರಿಸ್ಥಿತಿಯನ್ನು ನಿರ್ಹಹಿಸುವುದರಲ್ಲಿ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಪಕ್ಷ ವಿಫಲವಾದ ಹಿನ್ನಲೆಯಲ್ಲಿ ಚೆನ್ನೈ ಜನತೆ ಆ ಪಕ್ಷವನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ಚೆನ್ನೈ ನಗರವನ್ನು ಹೊರತುಪಡಿಸಿದರೆ ತಮಿಳುನಾಡಿನಲ್ಲಿ ಮತ್ತೆ ಅಮ್ಮ ಮ್ಯಾಜಿಕ್ ಮುಂದುವರೆದಿದೆ.

Comments are closed.