
ಬೆಂಗಳೂರು: ಕ್ರಿಸ್‌ಗೇಲ್‌ಗೆ ವಿಶ್ರಾಂತಿ ನೀಡಿಲ್ಲ, ಆತನನ್ನು ತಂಡದಿಂದ ಕೈ ಬಿಟ್ಟಿದ್ದೇವೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಕಳೆದ ಶನಿವಾರ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ವಿರುದ್ಧ ಶತಕ ಬಾರಿಸಿದ್ದು ನನಗೆ ಹೆಚ್ಚು ಖುಷಿ ತಂದುಕೊಟ್ಟಿತ್ತು. ಅದಕ್ಕಿಂತ ಹಿಂದಿನ ಪಂದ್ಯಗಳನ್ನು ನಾವು ಸೋತಿದ್ದು, ಈ ಪಂದ್ಯವನ್ನು ನಮಗೆ ಗೆಲ್ಲಲೇ ಬೇಕಾಗಿತ್ತು. ಅಂಥಾ ಪಂದ್ಯದಲ್ಲಿ ನಾನು ಶತಕ ಬಾರಿಸಿದ್ದು ಹೆಚ್ಚಿನ ಖುಷಿ ಕೊಟ್ಟಿದೆ ಎಂದು ಕೊಹ್ಲಿ ಹೇಳಿದ್ದಾರೆ.
ಪ್ರಸ್ತುತ ಪಂದ್ಯದಲ್ಲಿ ಲೋಕೇಶ್ ರಾಹುಲ್ ಮತ್ತು ಶೇನ್ ವಾಟ್ಸನ್ ಚೆನ್ನಾಗಿ ಆಡಿದ್ದು, ಪುಣೆ ವಿರುದ್ದ 8 ರನ್‌ಗಳ ಗೆಲವು ಗಳಿಸಲು ಅವರ ಕೊಡುಗೆ ಮಹತ್ತರ ಪಾತ್ರ ವಹಿಸಿತ್ತು.
ಒಬ್ಬ ಆಟಗಾರನಿಂದಲೇ ಪಂದ್ಯ ಗೆಲ್ಲಲು ಸಾಧ್ಯವಿಲ್ಲ. ನನಗೆ ಕೆ ಎಲ್ ರಾಹುಲ್ ಉತ್ತಮ ಬೆಂಬಲ ನೀಡಿದ್ದು ಆಮೇಲೆ ಬಂದ ವಾಟ್ಟೋ ಕೂಡಾ ತ್ವರಿತ ಗತಿಯಲ್ಲಿ 36 ರನ್ ಕಲೆ ಹಾಕಿದ್ದರು.
ಅದೇ ವೇಳೆ ಕ್ರಿಸ್ ಗೇಲ್ ಎಲ್ಲಿದ್ದಾರೆ? ಅವರಿಗೆ ವಿಶ್ರಾಂತಿ ನೀಡಲಾಗಿದೆಯೇ? ಎಂದು ಮಾಧ್ಯಮದವರು ಕೇಳಿದಾಗ, ಗೇಲ್‌ಗೆ ವಿಶ್ರಾಂತಿ ನೀಡಲಾಗಿಲ್ಲ. ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಅವರ ಬದಲು ಟ್ರಾವಿಸ್ ಹೆಡ್ ಗೆ ಸ್ಥಾನ ನೀಡಲಾಗಿದೆ. ಟ್ರಾವಿಸ್ ತುಂಬಾ ಚೆನ್ನಾಗಿ ಆಡುತ್ತಾರೆ ಎಂದು ಕೊಹ್ಲಿ ಉತ್ತರಿಸಿದ್ದಾರೆ.
ಮಗು ಹುಟ್ಟಿದ ಸಂದರ್ಭದಲ್ಲಿ ಐಪಿಎಲ್ ಪಂದ್ಯದಿಂದ ಹೊರಗುಳಿದಿದ್ದ ಗೇಲ್ , ಅದರ ನಂತರ ವಾಪಸ್ ಬಂದರೂ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಫಾರ್ಮ್ ನಲ್ಲಿ ಇಲ್ಲದೇ ಇರುವ ಕಾರಣದಿಂದಲೇ ಕೊಹ್ಲಿ ಗೇಲ್ ನ್ನು ಕೈ ಬಿಡುವ ನಿರ್ಧಾರ ಮಾಡಿಕೊಂಡಿದ್ದಾರೆ.