ಹಿರಿಯೂರು, ಮೇ 4-ರಾಜ್ಯದಲ್ಲಿ ಕಳೆದ ವರ್ಷ ಮುಂಗಾರುಮಳೆ ಕೊರತೆಯಿಂದ 16 ಸಾವಿರ ಕೋಟಿ ಮೌಲ್ಯದ ಬೆಳೆ ನಷ್ಟವಾಗಿದೆ. 3,831 ಕೋಟಿ ರೂ. ಪರಿಹಾರ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಪ್ರಧಾನಿ ಮತ್ತು ಕೇಂದ್ರ ಕೃಷಿ ಸಚಿವರಿಗೆ ಮನವಿ ಸಲ್ಲಿಸಿತ್ತು. ಆದರೆ ಕೇಂದ್ರಸರ್ಕಾರ ಕೇವಲ 1,543 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದೆ ಎಂದು ಸಚಿವ ಶ್ರೀನಿವಾಸ್‌ಪ್ರಸಾದ್ ಹೇಳಿದರು.
ಜಿಲ್ಲೆಯಲ್ಲಿ ಬರ ಪರಿಶೀಲನೆಗೆ ಬಂದಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ 1,540 ಕೋಟಿ ರೂ. ಬರ ಪರಿಹಾರವನ್ನು ರಾಜ್ಯ ಸರಕಾರ ರೈತರ ಬ್ಯಾಂಕ್‌ಖಾತೆಗೆ ಜಮಾ ಮಾಡಿದ್ದು, ಯಡಿಯೂರಪ್ಪ ವಿನಾಕಾರಣ ರಾಜ್ಯ ಸರಕಾರವನ್ನು ಗುರಿಯಾಗಿಸಿಕೊಂಡು ಆರೋಪ ಮಾಡುತ್ತಿದ್ದಾರೆ. ಸುಮ್ಮನೆ ಮಾತನಾಡುವುದನ್ನು ಬಿಟ್ಟು ಮೊದಲು ಸರಿಯಾದ ಮಾಹಿತಿ ತಿಳಿದುಕೊಳ್ಳಲಿ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದ ಬರ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿದ್ದು, ಬಿಜೆಪಿಯವರು ಸುಳ್ಳು ಹೇಳುವ ಮೂಲಕ ಜನರನ್ನು ದಾರಿತಪ್ಪಿಸುತ್ತಿದ್ದಾರೆ ಎಂಬುದಾಗಿ ಸಚಿವರು ಆಪಾದಿಸಿದರು. ಇತ್ತೀಚೆಗೆ ಮತ್ತೆ 723 ಕೋಟಿ ರೂ. ಬರ ಪರಿಹಾರವನ್ನು ರಾಜ್ಯದ 12 ಜಿಲ್ಲೆಗಳ 62 ತಾಲ್ಲೂಕುಗಳಿಗೆ ನೀಡಿದ್ದು, ಹಣ ಬಿಡುಗಡೆಯಾದ ತಕ್ಷಣ ಸಮರ್ಪಕವಾಗಿ ರೈತರಿಗೆ ವಿತರಿಸಲಾಗುವುದು ಎಂದರಲ್ಲದೆ ಚಿತ್ರದುರ್ಗ ಜಿಲ್ಲೆ ಸತತವಾಗಿ ತೀವ್ರ ಬರಗಾಲಕ್ಕೆ ಒಳಗಾಗುತ್ತಿದ್ದು, ಈ ಬಗ್ಗೆ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಸೂಕ್ತ ಮಾಹಿತಿ ಸಂಗ್ರಹಿಸಿ ಮುಖ್ಯಮಂತ್ರಿಗಳಿಗೆ ವರದಿ ನೀಡುವುದಾಗಿ ಅವರು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಆಂಜನೇಯ, ವಾರ್ತಾಸಚಿವ ರೋಷನ್‌ಬೇಗ್, ಶಾಸಕರಾದ ಡಿ.ಸುಧಾಕರ್, ಗೋವಿಂದಪ್ಪ, ಜಿಲ್ಲಾಧಿಕಾರಿ ಶ್ರೀರಂಗಯ್ಯ, ಜಿ.ಪಂ ಮುಖ್ಯಕಾರ್ಯನಿರ್ವಾಹಣಾಧಿಕಾರಿ ನಿತೇಶ್‌ಪಾಟೀಲ್, ಜಿ.ಪಂ.ಸದಸ್ಯ ಚಂದ್ರಪ್ಪ, ಕಾಂಗ್ರೆಸ್ ಮುಖಂಡ ಬಿ.ವಿ ಮಾಧವ್, ಖಾದಿ ರಮೇಶ್ ಇತರರು ಉಪಸ್ಥಿತರಿದ್ದರು.