ಕುಂದಾಪುರ: ಮೀಸಲಾತಿ ವಿಚಾರದಲ್ಲಿ ಕಾನೂನು ಸಮರ ಮೊದಲಾದ ವಿಚಾರಗಳಿಂದ ಎಲ್ಲರ ಕುಥಲಕ್ಕೆ ಕಾರಣವಾಗಿದ್ದ ಕುಂದಾಪುರ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಆಯ್ಕೆ ಕೊನೆಗೂ ನಡೆದಿದೆ. ಪುರಸಭೆಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ನ ಬಂಡುಕೋರ ಗುಂಪಿನ ವಸಂತಿ ಸಾರಂಗ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿಯ ರಾಜೇಶ್ ಕಾವೇರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಅವಿರೋಧ ಆಯ್ಕೆ..!
ಕಾಂಗ್ರೆಸ್ ಬಂಡಾಯ ಅಬ್ಯರ್ಥಿಯಾಗಿ ಸ್ಪರ್ಧಿಸುವ ವಸಂತಿ ಸಾರಂಗ ಅವರನ್ನು ಬಿಜೆಪಿ ಬೆಂಬಲಿಸುತ್ತದೆ ಎನ್ನುವ ತೀರ್ಮಾನ ಪ್ರಕಟವಾಗುತ್ತಿದ್ದಂತೆ. ಕಾಂಗ್ರೆಸ್ ವಲಯದಿಂದಲೂ ವಸಂತಿ ಸಾರಂಗ ಅವರನ್ನೆ ಪಕ್ಷದ ಅಭ್ಯರ್ಥಿಯನ್ನಾಗಿಸುವ ಪ್ರಯತ್ನಗಳು ನಡೆದಿದ್ದವು. ಈ ಎಲ್ಲ ಬೆಳವಣಿಗೆಯ ನಡುವೆ ಮಂಗಳವಾರ ಬೆಳಿಗ್ಗೆ ಅಧ್ಯಕ್ಷ ಸ್ಥಾನಕ್ಕಾಗಿ ವಸಂತಿ ಸಾರಂಗ, ಶಕುಂತಲಾ ಗುಲ್ವಾಡಿ ಹಾಗು ರವಿಕಲಾ ಗಣೇಶ್ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಾದರೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಆಯ್ಕೆ ಖಚಿತ ಎನ್ನುವ ಒಳ ಮರ್ಮವನ್ನು ತಿಳಿದ ಕಾಂಗ್ರೆಸ್ನ ರವಿಕಲಾ ಗಣೇಶ್ ನಾಮಪತ್ರ ಹಿಂತಿಗೆದುಕೊಂಡರು. ಸಾರಂಗ ಅವರ ಬೆಂಬಲಕ್ಕೆ ನಿಂತ ಶಕುಂತಲಾ ಗುಲ್ವಾಡಿಯೂ ನಾಮಪತ್ರ ಹಿಂತೆದುಕೊಂಡಿದ್ದರಿಂದ ಅವಿರೋಧ ಆಯ್ಕೆ ನಡೆದಿದೆ. ಉಪಾದ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಬಿಜೆಪಿಯ ರವಿರಾಜ್ ಖಾರ್ವಿ ನಾಮಪತ್ರ ಹಿಂತೆಗೆದುಕೊಂಡಿದ್ದರಿಂದ ರಾಜೇಶ್ ಕಾವೇರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣೆಯಲ್ಲಿ ಭಾಗವಹಿಸದ ಕಾಂಗ್ರೆಸ್ ಸದಸ್ಯರು
ನಾಮಪತ್ರ ಹಿಂತೆಗೆಯುವ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಹೆಗ್ಡೆ ಗುಂಪಿನವರನ್ನು ಹೊರತು ಪಡಿಸಿ ಉಳಿದ ಕಾಂಗ್ರೆಸ್ ಸದಸ್ಯರು ಪಕ್ಷದ ಪ್ರಮುಖರೊಂದಿಗೆ ಪುರಸಭಾ ಸಂಕೀರ್ಣದಿಂದ ಹೊರ ನಡೆದರು.
ಉತ್ತಮ ಆಡಳಿತ ನೀಡಿ: ಕರಂದ್ಲಾಜೆ
ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಕರಂದ್ಲಾಜೆ ಜನರ ನಿರೀಕ್ಷೆಗೆ ಅನುಗುಣವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಕೆಲಸ ಮಾಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನಗಳನ್ನು ಸಮರ್ಥವಾಗಿ ವಿನಿಯೋಗ ಮಾಡಬೇಕು. ಕುಡಿಯುವ ನೀರು ಸೇರಿದಂತೆ ಜನರ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅಧಿಕಾರವಧಿಯಲ್ಲಿ ಯಾವುದೆ ರೀತಿಯ ಭ್ರಷ್ಟಾಚಾರಕ್ಕೂ ಅವಕಾಶ ನೀಡ ಬಾರದು ಎಂದು ಹೇಳಿದರು.
ಹೆಗ್ಡೆ ಬೆಂಬಲಕ್ಕೆ ಶರಣು: ಸಾರಂಗ್
ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷೆ ವಸಂತಿ ಸಾರಂಗ ಅವರು ತನಗೆ ಜಯಪ್ರಕಾಶ ಹೆಗ್ಡೆ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿ ಮುಖಂಡ ಕಿಶೋರಕುಮಾರ ಅವರ ಮಾರ್ಗದರ್ಶನದಲ್ಲಿ ನನಗೆ ಅಧ್ಯಕ್ಷ ಸ್ಥಾನ ದೊರೆಕಿದೆ. ಹೆಗ್ಡೆಯವರ ಬಣದಲ್ಲಿ ಗುರುತಿಸಿಕೊಂಡಿದ್ದ ನಾಲ್ವರಿಗೂ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವ ಅವಕಾಶಗಳಿದ್ದರೂ, ಖಾರ್ವಿ ಸಮಾಜಕ್ಕೆ ಈವರೆಗೂ ಅಧಿಕಾರ ದೊರಕಿಲ್ಲ ಎನ್ನುವ ಕಾರಣಕ್ಕಾಗಿ ಅವರುಗಳು ತ್ಯಾಗ ಮಾಡಿದ್ದಾರೆ. ಕಾಂಗ್ರೆಸ್ನಲ್ಲಿ ಒಗ್ಗಟ್ಟಿನ ಕೊರತೆ ಇದ್ದ ಕಾರಣದಿಂದ ನಾವು ಹೊರ ಬರಬೇಕಾಯ್ತು ಎಂದು ನುಡಿದರು.
ಬಿಜೆಪಿಯ ಹಿರಿಯ ಮುಖಂಡರುಗಳಾದ ಕಿರಣ್ಕುಮಾರ ಕೊಡ್ಗಿ, ಮಟ್ಟಾರು ರತ್ನಾಕರ ಹೆಗ್ಡೆ, ಗುರುರಾಜ್ ಗಂಟಿಹೊಳೆ, ಸುಧೀರ್ಕುಮಾರ ಶೆಟ್ಟಿ ಮಾರ್ಕೋಡು, ಭಜರಂಗ ದಳದ ಜಿಲ್ಲಾ ಪ್ರಮುಖ ಗಿರೀಶ್ ಕುಂದಾಪುರ, ಸಂತೋಷ್ ಶೆಟ್ಟಿ ಮುಂತಾದವರಿದ್ದರು.