
ಮಂಗಳೂರು , ಮಾ. 19: ಎತ್ತಿನಹೊಳೆ ಯೋಜನೆ ವಿರುದ್ಧ ಹೆಚ್ಚುತ್ತಿರುವ ಅಕ್ರೋಷವನ್ನು ಬಿಂಬಿಸುವ ರೀತಿಯ ಘಟನೆಯೊಂದು ಮಂಗಳೂರಿನಲ್ಲಿ ನಡೆದಿದ್ದು, ಇದು ಜಿಲ್ಲೆಯ ಜನಪ್ರತಿನಿಧಿಗಳ ಪಾಲಿಗೆ ನುಂಗಲಾರದ ತುತ್ತಾಗಿದೆ.
ನಗರದ ಕಂಕನಾಡಿ ಸಮೀಪದ ವೆಲೆನ್ಸಿಯ ವೃತ್ತದಲ್ಲಿ ಹಾಕಲಾದ ಬ್ಯಾನರ್ ಒಂದರಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾದ ಸಚಿವರ ಭಾವಚಿತ್ರಗಳಿಗೆ ಮಸಿ ಬಳಿದಿರುವ ಘಟನೆ ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಫಾದರ್ ಮುಲ್ಲರ್ನಿಂದ ನಂದಿಗುಡ್ಡೆವರೆಗಿನ ರಸ್ತೆ ಕಾಮಗಾರಿಗೆ ಸಹಕರಿಸಿದವರಿಗೆ ಧನ್ಯವಾದ ಸಲ್ಲಿಸಲೆಂದು ಹಾಕಲಾಗಿರುವ ಈ ಬ್ಯಾನರ್ನಲ್ಲಿರುವ ಉಸ್ತುವಾರೀ ಸಚಿವ ರಮಾನಾಥ ರೈ , ಆರೋಗ್ಯ ಸಚಿವ ಯು. ಟಿ. ಖಾದರ್ ಹಾಗು ಕ್ರೀಡಾ ಸಚಿವ ಅಭಯ ಚಂದ್ರ ಜೈನ್ ಅವರ ಭಾವಚಿತ್ರಗಳಿಗೆ ಮಸಿ ಬಳಿಯಲಾಗಿದೆ.

ಬ್ಯಾನರ್ನ ನಡುವೆ ದೊಡ್ಡದಾಗಿ ‘ ಜೈ ನೇತ್ರಾವತಿ ‘ ಎಂದು ಬರೆಯಲಾಗಿದೆ. ಪಕ್ಕದಲ್ಲೇ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಂಗಳೂರಿನ ಮಾಜಿ ಮೇಯರ್ ಜೆಸಿಂತಾ ವಿಜಯ ಅಲ್ಫ್ರೆಡ್ ಹಾಗೂ ಕೆಳಗೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರ ದೊಡ್ಡ ಭಾವಚಿತ್ರವಿದೆ. ಆದರೆ ಅದಕ್ಕೆ ಯಾವುದೇ ಹಾನಿ ಮಾಡದಿರುವುದು ಸಂಶಯ ಹಾಗೂ ಕೂತುಹಲ ಮೂಡಿಸಿದೆ.
ಈ ಬ್ಯಾನರ್ ಪಕ್ಕದಲ್ಲಿ ಹಾಗು ಎದುರಿಗೆ ರಸ್ತೆಯ ಆ ಬದಿಯಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿ ಎರಡು ಬ್ಯಾನರ್ ಗಳಿವೆ. ಅವುಗಳಲ್ಲಿ ಮಂಗಳೂರು ದಕ್ಷಿಣ ಶಾಸಕ ಜೆ ಆರ್ ಲೋಬೋ ಅವರ ದೊಡ್ಡ ಭಾವಚಿತ್ರ ಹಾಗು ಸಚಿವರ ಚಿತ್ರಗಳಿವೆ. ಆದರೆ ಆ ಬ್ಯಾನರ್ ಗಳಿಗೆ ಯಾವುದೇ ಹಾನಿ ಮಾಡಲಾಗಿಲ್ಲ.