ಕನ್ನಡ ವಾರ್ತೆಗಳು

ಸುರತ್ಕಲ್‌ನಲ್ಲಿ ಎರಡು ತಂಡಗಳ ಮಧ್ಯೆ ಮಾರಾಮಾರಿ : ಮಾರಕಾಸ್ತ್ರಗಳಿಂದ ಹಲ್ಲೆ – 6 ಮಂದಿ ಆಸ್ಪತ್ರೆಗೆ ದಾಖಲು

Pinterest LinkedIn Tumblr

ಸುರತ್ಕಲ್,ಮಾ.18: ಕ್ಷುಲ್ಲಕ ಕಾರಣಕ್ಕಾಗಿ ಎರಡು ತಂಡಗಳ ನಡುವೆ ಮಾರಾಮಾರಿ ನಡೆದು ಪರಸ್ಪರ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿಕೊಂಡಂತಹ ಘಟನೆ ಸುರತ್ಕಲ್ ಠಾಣಾ ವ್ಯಾಪ್ತಿಯ ಕೃಷ್ಣಾಪುರದ 7ನೇ ಬ್ಲಾಕ್ ನ ಸರಕಾರಿ ಶಾಲಾ ಮುಂಭಾಗದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದ್ದು, ಇತ್ತಂಡಗಳ 6 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶುಕ್ರವಾರ ಮಸೀದಿಗೆ ತೆರಳುವ ವೇಳೆ ಕೃಷ್ಣಾಪುರ 7ನೇ ಬ್ಲಾಕ್ ನ ಶಾಲೆಯ ಮುಂಭಾಗದಲ್ಲಿರುವ ಅಂಗಡಿಯೊಂದರಲ್ಲಿ ಕೋಲ್ಡ್ ಡ್ರಿಂಕ್ಸ್ ಕುಡಿಯುತ್ತಿದ್ದ ವೇಳೆ ಕಾಟಿಪಳ್ಳ ನಿವಾಸಿಗಳಾದ ಕೃಷ್ಣಾಪುರ ನಿವಾಸಿಗಳಾದ ಸಂಶುದ್ಧೀನ್, ಅಫೀಝ್, ಜಾವಿದ್ ಮತ್ತು ನಿಝಾಮ್ ಎಂಬವರು ತಲವಾರು ಹಾಗೂ ಚಾಕುಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಕಾಟಿಪಳ್ಳ ನಿವಾಸಿಗಳಾದ ಸಾಹಿಲ್ ಮತ್ತು ನವಾಝ್ ಎಂಬವರು ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಸುರತ್ಕಲ್ ಪಧ್ಮಾವತಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಅಲ್ಲದೆ, ಸಂಶುದ್ಧೀನ್, ಅಫೀಝ್, ಜಾವಿದ್ ಮತ್ತು ನಿಝಾಮ್ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಜಾವಿದ್ ಮತ್ತು ಸಾಹಿಲ್ ಎಂಬವರು ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಚೂರಿ ಹಿರಿತದಿಂದಾಗಿ ಕಾಟಿಪಳ್ಳ ನಿವಾಸಿಗಳಾದ ಸಾಹಿಲ್, ನವಾಜ್ ಗಾಯಗೊಂಡಿದ್ದು, ಸುರತ್ಕಲ್ ಪದ್ಮಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಂದು ತಂಡದ ಸಂಶುದ್ದೀನ್, ಅಫೀಜ್, ಜಾವಿದ್, ನಿಝಾಮ್ ಮಂಗಳೂರಿನ ಐಲ್ಯಾಂಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಈದ್ -ಮಿಲಾದ್ ಸಂದರ್ಭದಲ್ಲಿ 2 ತಂಡಗಳ ನಡುವೆ ಜಗಳವಾಗಿತ್ತು. ಅದೇ ದ್ವೇಷದಿಂದ ಮತ್ತೆ ಘಟನೆ ನಡೆದಿದೆ ಎನ್ನಲಾಗಿದೆ.

ಕಳೆದ ಈದ್ ಮಿಲಾದ್ ವೇಳೆ ಕ್ಷುಲ್ಲಕ ಕಾರಣಕ್ಕೆ ಇತ್ತಂಡಗಳ ನಡುವೆ ಕಲಹ ನಡೆದಿದ್ದು ಬಳಿಕ ಹಲವು ಬಾರಿ ಮಾತಿನ ಚಕಮಕಿ ಸೇರಿದಂತೆ ಹೊಡೆದಾಟಗಳು ನಡೆದಿತ್ತು ಎಂದು ತಿಳಿದು ಬಂದಿದೆ. ಆದರೆ, ಈ ಬಾರಿ ಅತಿರೇಕಕ್ಕೆ ಹೋದ ಜಗಳ ತಲವಾರುಗಳಿಂದ ಹಲ್ಲೆ ನಡೆಯುವ ವರೆಗೆ ನಡೆದು ಇತ್ತಂಡಗಳು ಆಸ್ಪತ್ರೆಗೆ ದಾಖಲಾಗಿದೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಸುರತ್ಕಲ್ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಮಾತ್ರವಲ್ಲದೇ ಆಸ್ಪತ್ರೆಯಲ್ಲಿ ದಾಖಲಾದ ಎರಡೂ ತಂಡಗಳನ್ನು ಭೇಟಿ ಮಾಡಿ ಮಾಹಿತಿ ಕಲೆಹಾಕಿರುವ ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Write A Comment