ಮಂಗಳೂರು: ಮಳೆಗಾಲ ಮುಗಿದ ಬಳಿಕ ದ್ವಿತೀಯ ಹಂತದ ಶಿರಾಡಿ ಘಾಟ್ ಹೆದ್ದಾರಿಯ ಕಾಂಕ್ರಿಟೀಕರಣ ಕಾಮಗಾರಿ ಆರಂಭಿಸಬೇಕೆಂದು ಹೆದ್ದಾರಿ ಅಕಾರಿಗಳಿಗೆ ತಾಕೀತು ಮಾಡಿದ ಸಚಿವ ರಮಾನಾಥ ರೈ, ಕಾಮಗಾರಿಯ ವೇಳೆ ಯಾವುದೇ ರೀತಿಯಲ್ಲಿ ಶಿರಾಡಿ ಘಾಟ್ ಸಂಪೂರ್ಣ ಬಂದ್ಗೆ ಒಪ್ಪಿಗೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ದ.ಕ.ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ಸೋಮವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ)ಗಳ ತ್ರೈಮಾಸಿಕ ಸಮೀಕ್ಷಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕುಡಿಯುವ ನೀರಿನ ತುರ್ತು ಕೆಲಸಗಳಿಗೆ ಹಣಕಾಸಿನ ಸಮಸ್ಯೆ ಇಲ್ಲ. ಆದ್ಯತೆ ನೆಲೆಯಲ್ಲಿ ಪ್ರತಿ ತಾಲೂಕಿನಲ್ಲಿ ಟಾಸ್ಕ್ ಪೋರ್ಸ್ ಸಭೆ ಕರೆದು ನೀರಿನ ಅಗತ್ಯವಿದ್ದಲ್ಲಿ ಜಿಲ್ಲಾಕಾರಿ ಗಮನ ಹರಿಸಿ ಕ್ರಮ ಕೈಗೊಳ್ಳಬೇಕೆಂದು ಸಚಿವ ರೈ ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಪಂನ ನಾಮ ನಿರ್ದೇಶಿತ ಸದಸ್ಯ ಅಲ್ವಿನ್ ಡಿಸೋಜ ಮಾತನಾಡಿ 94 ಸಿಯಡಿ ಹಕ್ಕುಪತ್ರ ನೀಡಿಕೆ ಕಾರ್ಯ ನಡೆಯುತ್ತಿಲ್ಲ. ಕಳೆದ ಕೆಡಿಪಿ ಸಭೆಯಲ್ಲಿ ಸಚಿವರು ಈ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಿದ್ದರೂ ಯಾವುದೇ ಪ್ರಗತಿ ಆಗಿಲ್ಲ ಎಂದು ದೂರಿದರು.
ಅಪರ ಜಿಲ್ಲಾಕಾರಿ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ 94 ಸಿಯಡಿ ಗ್ರಾಮಾಂತರ ಪ್ರದೇಶಗಳಲ್ಲಿ 54,393 ಅರ್ಜಿಗಳು ಸ್ವೀಕೃತವಾಗಿವೆ. ಇವುಗಳಲ್ಲಿ 7,837 ಅರ್ಜಿಗಳ ಬಗ್ಗೆ ತೀರ್ಮಾನವಾಗಿವೆ. 94ಸಿಸಿಯಡಿ ನಗರದ ಪ್ರದೇಶದಲ್ಲಿ ಮನೆ ಅಡಿ ಸಕ್ರಮೀಕರಣಕ್ಕೆ 1,636 ಅರ್ಜಿಗಳು ಸ್ವೀಕೃತವಾಗಿವೆ ಎಂದು ಹೇಳಿದರು.
ಹಕ್ಕು ಪತ್ರ ನೀಡಿ 2 ವರ್ಷದೊಳಗೆ ಆ ಜಾಗದಲ್ಲಿ ಮನೆ ನಿರ್ಮಿಸಿ ವಾಸವಾಗದಿದ್ದಲ್ಲಿ ಅಕಾರಿಗಳು ಸಂಬಂಧಪಟ್ಟವರಿಗೆ ನೋಟಿಸ್ ನೀಡಿ ಒಂದು ವಾರದೊಳಗೆ ಉತ್ತರ ಸಿಗದಿದ್ದಲ್ಲಿ ಆ ಹಕ್ಕು ಪತ್ರ ರದ್ದು ಎಂದು ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ರೈ ಸೂಚಿಸಿದರು.
ವೆನ್ ಲಾಕ್ ಹಾಗೂ ಲೇಡಿಗೋಶನ್ ಆಸ್ಪತ್ರೆಗಳ ಅಭಿವೃದ್ದಿ
ಆಸ್ಪತ್ರೆಯ ಎರಡು ಬಯೋ ಮೆಡಿಕಲ್ ಯಂತ್ರೋಪಕರಣಗಳ ನಿರ್ವಹಣೆಯನ್ನು ಸಹ ಕೆಎಂಸಿ ವತಿಯಿಂದಲೇ ನೀಡಲಾಗುತ್ತಿದೆ. ಪ್ರಸ್ತುತ ಪರ್ಯಾಯ ವ್ಯವಸ್ಥೆ ಬಗ್ಗೆ ನಿರ್ದೇಶನವಿಲ್ಲದೆ ವ್ಯವಸ್ಥೆಯನ್ನು ಹಿಂದಕ್ಕೆ ಪಡೆದಲ್ಲಿ ರೋಗಿಗಳಿಗೆ ಸೇವೆ ನೀಡಲು ಕಷ್ಟವಾಗಲಿದೆ. 150 ವರ್ಷಗಳ ಹಳೆಯಾದ ವೆನ್ಲಾಕ್ ಆಸ್ಪತ್ರೆಯಲ್ಲಿ ಮೂಲಭೂತ ಸಮಸ್ಯೆಗಳಿಂದ ರೋಗಿಗಳಿಗೆ ತೊಂದರೆಯಾಗಿದೆ. ಲ್ಯಾಬ್ ವ್ಯವಸ್ಥೆಯೇ ವೆನ್ಲಾಕ್ ನಲ್ಲಿ ಇಲ್ಲ. ಗ್ರೂಪ್ ಡಿ ನೌಕರರನ್ನು ಸರಕಾರದಿಂದ ನೇಮಕಾತಿ ಮಾಡಬೇಕು ಎಂದು ವೆನ್ಲಾಕ್ ಅಧೀಕ್ಷಕಿ ಡಾ. ರಾಜೇಶ್ವರಿ ದೇವಿ ಸಭೆಯಲ್ಲಿ ತಿಳಿಸಿದರು.
ದ.ಕ. ಜಿಲ್ಲೆಯಲ್ಲಿ ಹೊಸ ಸರಕಾರಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಯಿಂದ ಕ್ಲಿನಿಕಲ್ ಸೌಲಭ್ಯ ಪಡೆಯುತ್ತಿರುವ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ 2016 -17 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪ್ರವೇಶಗೊಳ್ಳುವ ವಿದ್ಯಾರ್ಥಿಗಳ ವ್ಯಾಸಂಗ ಮುಕ್ತಾಯಗೊಳ್ಳುವವವರೆಗೆ ಮಾತ್ರ ಕ್ಲಿನಿಕಲ್ ಸೌಲಭ್ಯವನ್ನು ನೀಡುವಂತೆ ಸರಕಾರ ನಿರ್ದೇಶಿಸಿದೆ ಎಂದು ರೈ ತಿಳಿಸಿದರು.
ಆದರೆ ಹಾಲಿ ವೆನ್ಲಾಕ್ ಹಾಗೂ ಲೇಡಿಗೋಶನ್ ಜಿಲ್ಲಾಸ್ಪತ್ರೆಯು ಕೆಎಂಸಿಯೊಂದಿಗೆ ಕಾರ್ಯಾಚರಿಸುತ್ತಿದೆ. 2 ಆಸ್ಪತ್ರೆಗಳಿಗೆ ವೈದ್ಯರು, ಸುಶ್ರೂಕಿಯರು ಮತ್ತು ಆಸ್ಪತ್ರೆಯ ನಿರ್ವಹಣಾ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಸೇರಿ ಒಟ್ಟು 114 ವೈದ್ಯರು ಮತ್ತು 297 ಸಿಬ್ಬಂದಿಗಳನ್ನು ಆಸ್ಪತ್ರೆಗೆ ನಿಯೋಜಿಸಲಾಗಿದೆ ಎಂದು ಹೇಳಿದರು.
ಕೆಎಂಸಿ ಆಸ್ಪತ್ರೆಯ ಪ್ರತಿನಿಧಿ ಡಾ. ಆನಂದ್, ಕೆಎಂಸಿಯು ವೆನ್ಲಾಕ್ ಆಸ್ಪತ್ರೆಯನ್ನು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ತಯಾರಿಸಿರುವ ಪ್ರಸ್ತಾವನೆಯನ್ನು ಸಭೆಯಲ್ಲಿ ಮಂಡಿಸಿದರು. ಅದರ ಪ್ರಕಾರ 3 ಹಂತಗಳಲ್ಲಿ ವೆನ್ಲಾಕ್ ಆಸ್ಪತ್ರೆಯ ಅಭಿವೃದ್ದಿಯಾಗಲಿದೆ. ಹೊಸ ಕಟ್ಟಡವೊಂದನ್ನು ನಿರ್ಮಿಸುವುದು, ಈಗಿರುವ ಆಸ್ಪತ್ರೆಯ ವಾರ್ಡ್ ಗಳ ನವೀಕರಣ, ಹೊರ ರೋಗಿಗಳ ವಿಭಾಗದ ನವೀಕರಣವನ್ನು ಮುಂದಿನ ಐದು ವರ್ಷಗಳಲ್ಲಿ ಕೈಗೆತ್ತಿಕೊಳ್ಳುವುದಾಗಿ ಹೇಳಿದರು. 60 ವರ್ಷಗಳಿಂದ ಕೆಎಂಸಿಯು ವೆನ್ಲಾಕ್ ನಲ್ಲಿ ಸೇವೆ ನೀಡುತ್ತಿದ್ದು, ಖಾಸಗಿ- ಸರಕಾರ ಸಹಭಾಗಿತ್ವದಲ್ಲಿ ಆಸ್ಪತ್ರೆಯಲ್ಲಿ ಸೇವೆಯನ್ನು ಕನಿಷ್ಠ 30 ವರ್ಷಗಳ ಅವಧಿಗೆ ಮುಂದುವರಿಸಲು ಅವಕಾಶ ನೀಡಬೇಕೆಂದು ಅವರು ಆಗ್ರಹಿಸಿದರು.
ಕೆಎಂಸಿ ಸಲ್ಲಿಸಿರುವ ಪ್ರಸ್ತಾವನೆ ಸಮಾಧಾನಕರವಾಗಿಲ್ಲ. ಪ್ರಸ್ತುತ ಕೆಎಂಸಿ ವೆನ್ಲಾಕ್ ನ ಬಳಕೆಗಾಗಿ ವಾರ್ಷಿಕ 1.32 ಕೋಟಿ ರೂ.ಗಳ ಕ್ಲಿನಿಕಲ್ ಶುಲ್ಕವನ್ನು ನೀಡುತ್ತಿದೆ. ಅದನ್ನು ಹೆಚ್ಚಿಸಬೇಕು ಹಾಗೂ ಖರ್ಚು ವೆಚ್ಚವನ್ನು ಸರಿದೂಗಿಸುವ ಬಗ್ಗೆ ಗಮನ ಹರಿಸಬೇಕು ಹಾಗೂ ಸರಕಾರಿ ಸೀಟುಗಳ ಲಭ್ಯತೆಯನ್ನು ಹೆಚ್ಚಿಸಬೇಕು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದರು.
ವೆನ್ಲಾಕ್ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಕ್ಲಿನಿಕಲ್ ಸೌಲಭ್ಯ ಒದಗಿಸುತ್ತಿರುವ ಕೆಎಂಸಿ ಆಸ್ಪತ್ರೆಯು ಸಲ್ಲಿಸಿರುವ ಪ್ರಸ್ತಾವನೆಯನ್ನು ಮತ್ತಷ್ಟು ಪರಿಷ್ಕರಣೆಗೊಳಿಸಿ ಸಲ್ಲಿಸುವಂತೆ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ವೆನ್ಲಾಕ್ ಆಸ್ಪತ್ರೆಯ ಮುಖ್ಯಸ್ಥರಿಗೆ ನಿರ್ದೇಶನ ನೀಡಿ, ಪರಿಷ್ಕೃತ ಪ್ರಸ್ತಾವನೆ ಕುರಿತಂತೆ ಮುಖ್ಯಮಂತ್ರಿ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿ ಜಿಲ್ಲೆಗೆ ಭೇಟಿ ನೀಡುವ ಸಂದರ್ಭ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು





