ರಾಷ್ಟ್ರೀಯ

ಭಾರತಕ್ಕೆ ಬರಲು ಇದು ಸರಿಯಾದ ಸಮಯವಲ್ಲ:ವಿಜಯ್ ಮಲ್ಯ

Pinterest LinkedIn Tumblr

vijay_mallya

ನವದೆಹಲಿ: ದೇಶದಲ್ಲಿ ನನ್ನನ್ನು ಈಗಾಗಲೇ ಅಪರಾಧಿ ಎಂದು ಬಿಂಬಿಸಲಾಗುತ್ತಿದ್ದು, ಪ್ರಸ್ತುತ ಭಾರತಕ್ಕೆ ಬರಲು ಇದು ಸರಿಯಾದ ಸಮಯವಲ್ಲ ಎಂದು ಮದ್ಯದ ದೊರೆ ವಿಜಯ್ ಮಲ್ಯ ಅವರು ಭಾನುವಾರ ಹೇಳಿಕೊಂಡಿದ್ದಾರೆ.

ಈ ಕುರಿತಂತೆ ಖಾಸಗಿ ಮಾಧ್ಯಮವೊಂದಕ್ಕೆ ಇಮೇಲ್ ಮೂಲಕ ಸಂದರ್ಶನವನ್ನು ನೀಡಿ ಮಾತನಾಡಿರುವ ಅವರು, ಬ್ಯಾಂಕುಗಳು ಎಲ್ಲಾ ರೀತಿಯ ಆಯಾಮಗಳನ್ನು ಪರಿಶೀಲಿಸಿದ ನಂತರವಷ್ಟೇ ನನಗೆ ಹಣವನ್ನು ನೀಡಿದೆ. ನನ್ನ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳು ಹಾಗೂ ಯಾವುದರಿಂದಲೂ ನಾನು ಓಡಿ ಹೋಗುತ್ತಿಲ್ಲ. ವೈಯಕ್ತಿಕ ಕೆಲಸಗಳಿಂದಾಗಿ ನಾನು ಲಂಡನ್ ನಲ್ಲಿದ್ದೇನೆ ಎಂದು ಹೇಳಿದ್ದಾರೆ.

ಪ್ರಸ್ತುತ ಭಾರತದಲ್ಲಿ ನಾನೊಬ್ಬ ಅಪರಾಧಿಯೆಂದೇ ಬಿಂಬಿಸಲಾಗುತ್ತಿದೆ. ಇದೀಗ ದೇಶಕ್ಕೆ ಬರಲು ಸರಿಯಾದ ಸಮಯವಲ್ಲ. ಕೆಲವು ವಿಚಾರಗಳ ಸಂಬಂಧ ನನಗೆ ಕಳೆದ ವರ್ಷ ನೋಟಿಸ್ ಗಳು ಜಾರಿಯಾಗಿದೆ. ಆದರೆ, ಅದರಿಂದ ನಾನು ಓಡಿಹೋಗುತ್ತಿಲ್ಲ. ಆದರೆ, ನನ್ನನ್ನು ಯಾವ ಕಾರಣಕ್ಕೆ ಅಪರಾಧಿ ಎಂದು ಬಿಂಬಿಸಲಾಗುತ್ತಿದೆ.

ಸಾಲದ ಸಮಸ್ಯೆ ನನ್ನ ವ್ಯವಹಾರದ ವಿಚಾರ. ಬ್ಯಾಂಕುಗಳು ನನಗೆ ಸಾಲ ನೀಡಿದಾಗ ಎಲ್ಲಾ ರೀತಿಯ ಸಮಸ್ಯೆಗಳನ್ನು ತಿಳಿದುಕೊಂಡೇ ನೀಡಿದೆ. ಪ್ರಸ್ತುತ ನಮ್ಮ ವ್ಯವಹಾರಗಳು ಕುಸಿತವನ್ನು ಕಂಡಿದೆ ನಿಜ. ಹಾಗೆಂದ ಮಾತ್ರಕ್ಕೆ ನನ್ನ ಖಳನಾಯಕನಾಗಿ ಬಿಂಬಿಸಬೇಡಿ. ಪ್ರಸ್ತುತ ನನ್ನನ್ನು ಕೆಲವು ಪಟ್ಟಭದ್ರತಾ ಹಿತಾಸಕ್ತಿಗಳು ಬಲಿಪಶುವಂತೆ ಬಳಸಿಕೊಳ್ಳುತ್ತಿವೆ. ನನ್ನ ವಿರುದ್ಧ ಪಿತೂರಿ ನಡೆಸುತ್ತಿವೆ.

ನನಗೆ ಭಾರತಕ್ಕೆ ಬರುವ ಉದ್ದೇಶವಿದೆ. ಆದರೆ, ಈಗಿರುವ ಪರಿಸ್ಥಿತಿಯಲ್ಲಿ ಬಂದರೆ ನನ್ನ ಪರವಾಗಿ ಯಾವುದೂ ನಡೆಯುವುದಿಲ್ಲ. ಈಗಾಗಲೇ ನನ್ನನ್ನು ಅಪರಾಧಿ ಎಂದು ಬಣ್ಣಿಸಲಾಗಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ತಾವು ಪ್ರಸ್ತುತ ಇರುವ ಸ್ಥಳದ ಕುರಿತಂತೆ ಪ್ರಶ್ನೆ ಕೇಳಿದಾಗ ಪ್ರಸ್ತುತದ ಪರಿಸ್ಥಿತಿಯಲ್ಲಿ ನಾನಿರುವ ಸ್ಥಳದ ಕುರಿತಂತೆ ಯಾರಿಗೂ ಮಾಹಿತಿ ನೀಡಲು ಸಾಧ್ಯವಿಲ್ಲ. ಸುರಕ್ಷಿತ ಭಾವನೆ ಬಂದಾಗ ತಿಳಿಸುವೆ.

ನನಗೆ ನನ್ನದೇ ಆದ ಕೆಲವು ಗುಣಗಳಿವೆ, ಉದ್ದೇಶಗಳಿವೆ. ಅವುಗಳಿಂದ ನಾನು ಮೌನವಾಗಿದ್ದೇನೆಯೇ ವಿನಃ ಭಯದಿಂದಲ್ಲ. ಎಲ್ಲಿ ಏನಾದರೂ ಮಾತನಾಡುವ ತರಾತುರಿಯಲ್ಲಿ ಇನ್ನೇನಾದರೂ ಮಾತನಾಡಿ ಬಿಡುತ್ತೇನೋ ಎಂಬ ಭಾವನೆ ನನ್ನಲ್ಲಿದೆ ಎಂದು ಹೇಳಿಕೊಂಡಿದ್ದಾರೆ.

Write A Comment