ರಾಷ್ಟ್ರೀಯ

ಮೀಸಲಾತಿ ಚಳುವಳಿ ಸ್ಥಗಿತಕ್ಕೆ ಗುಜರಾತ್ ಸಿಎಂಗೆ 27 ಬೇಡಿಕೆಗಳ ಪಟ್ಟಿ ಸಲ್ಲಿಸಿದ ಹಾರ್ದಿಕ್ ಪಟೇಲ್

Pinterest LinkedIn Tumblr

hardikpatel

ಗಾಂಧಿನಗರ: ದೇಶದ್ರೋಹ ಆರೋಪದ ಮೇಲೆ ಜೈಲು ಪಾಲಾಗಿರುವ, ಗುಜರಾತಿನಲ್ಲಿ ನಡೆಯುತ್ತಿರುವ ಪಟೇಲ್ ಮೀಸಲಾತಿ ಚಳುವಳಿಯ ಮುಂಚೂಣಿ ನಾಯಕ ಹಾರ್ದಿಕ್ ಪಟೇಲ್ ಅವರು ರಾಜ್ಯ ಸರ್ಕಾರದೊಂದಿಗೆ ರಾಜಿ ಮಾಡಿಕೊಳ್ಳಲು ಮುಖ್ಯಮಂತ್ರಿ ಆನಂದಿಬೇನ್ ಪಟೇಲ್ ಅವರಿಗೆ ಮಂಗಳವಾರ 27 ಬೇಡಿಕೆಗಳ ಪಟ್ಟಿ ಸಲ್ಲಿಸಿದ್ದಾರೆ.

ಸೂರತ್ನ ಲಾಜ್ಪೋರ್ ಜೈಲಿನಿಂದ ಮುಚ್ಚಿದ ಲಕೋಟೆಯಲ್ಲಿದ್ದ 27 ಬೇಡಿಕೆಗಳ ಪಟ್ಟಿಯನ್ನು ಹಾರ್ದಿಕ್ ಪಟೇಲ್ ಅವರ ತಂದೆ ಭಾರತಿಭಾಯಿ ಪಟೇಲ್ ಅವರು ಗುಜರಾತ್ ಸಿಎಂಗೆ ಸಲ್ಲಿಸಿದ್ದಾರೆ. ಈ ವೇಳೆ ಮಧ್ಯವರ್ತಿಗಳಾದ ಬಿಜೆಪಿ ಸಂಸದ ವಿಠಲ್ ರಡಾಡಿಯಾ ಹಾಗೂ ಪಟೇಲ್ ಸಮುದಾಯದ ನಾಯಕ ಜೈರಾಮ್ ವನ್ಸ್ ಜಲಿಯಾ ಜೊತೆಗಿದ್ದರು.

ಸಿಎಂ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಡಾಡಿಯಾ ಅವರು, ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಸಂದಾನ ಮಾತುಕತೆಯ ಭಾಗವಾಗಿ ನಾವು ಇಂದು ಮುಖ್ಯಮಂತ್ರಿ ಅನಂದಿಬೇನ್ ಪಟೇಲ್ ಹಾಗೂ ಬಿಜೆಪಿ ಮುಖ್ಯಸ್ಥ ವಿಜಯ್ ರುಪಾಣಿ ಅವರನ್ನು ಭೇಟಿ ಮಾಡಿ, ಹಾರ್ದಿಕ್ ಪಟೇಲ್ ನೀಡಿದ್ದ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿದ್ದೇವೆ ಎಂದರು.

ಮುಚ್ಚಿದ ಲಕೋಟೆಯಲ್ಲಿ ಮೀಸಲಾತಿ ಚಳುವಳಿ ಹಿಂಪಡೆಯುವುದಕ್ಕೆ ಸಂಬಂಧಿಸಿದ ಬೇಡಿಕೆಗಳಿವೆ. ಆದರೆ ಆ ಲಕೋಟೆ ನಮ್ಮ ಕೈಸೇರುವ ಮುನ್ನವೇ ಸೀಲ್ ಮಾಡಿದ್ದರಿಂದ ಬೇಡಿಕೆಗಳ ವಿವರ ನಮಗೆ ಗೊತ್ತಿಲ್ಲ ಎಂದು ರಡಾಡಿಯಾ ಅವರು ತಿಳಿಸಿದ್ದಾರೆ.

ಬೇಡಿಕೆಗಳನ್ನು ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಮತ್ತು ಸರ್ಕಾರದ ಪ್ರತಿಕ್ರಿಯೆ ಸಕಾರಾತ್ಮಕವಾಗಿತ್ತು ಎಂದು ಅವರು ಹೇಳಿದ್ದಾರೆ.

Write A Comment