
ನವದೆಹಲಿ: ನನಗಿದ್ದದ್ದು ಒಬ್ಬನೇ ಮಗ, ನಾನವನನ್ನು ದೇಶಕ್ಕಾಗಿ ನೀಡಿದೆ ಹೀಗೆ ಹೇಳಿದ್ದು ಹುತಾತ್ಮ ಯೋಧ ಕ್ಯಾಪ್ಟನ್ ಪವನ್ ಕುಮಾರ್ ಅವರ ಅಪ್ಪ. ಭಾನುವಾರ ಬೆಳಗ್ಗೆ ಜಮ್ಮು ಕಾಶ್ಮೀರದ ಪಾಂಪೋರ್ ಪ್ರದೇಶದಲ್ಲಿ ಉಗ್ರರೊಡನೆ ಹೋರಾಡಿ ಪವನ್ ಕುಮಾರ್ ಹುತಾತ್ಮರಾಗಿದ್ದಾರೆ.
ನನಗಿದ್ದದ್ದು ಒಬ್ಬನೇ ಒಬ್ಬ ಮಗ, ನಾನು ಅವನನ್ನು ಸೇನೆಗೆ ಕಳುಹಿಸಿದೆ. ಅಪ್ಪನಿಗೆ ಹೆಮ್ಮೆ ಕೊಡುವ ವಿಷಯ ಇದು. ಆತ ಸೇನಾ ದಿವಸ್‌ನಂದೇ ಹುಟ್ಟಿದ್ದ. ಆದ್ದರಿಂದ ಆತ ಸೇನೆಗೆ ಸೇರುವುದು ವಿಧಿ ನಿಯಮಿತವಾಗಿತ್ತು. ಈ ಹಿಂದೆ ಎರಡು ಯಶಸ್ವಿ ಕಾರ್ಯಾಚರಣೆಯ ಭಾಗವಾಗಿದ್ದ ಆತ. ಆ ಕಾರ್ಯಾಚರಣೆಗಳಲ್ಲಿ ಮೂವರು ಉಗ್ರರು ಹತರಾಗಿದ್ದರು ಎಂದು ಕ್ಯಾಪ್ಟನ್ ಪವನ್ ಕುಮಾರ್ ಅವರ ಅಪ್ಪ ರಜ್‌ಬೀರ್ ಸಿಂಗ್ ಹೇಳಿದ್ದಾರೆ.
ಭಾನುವಾರ ಬೆಳಗ್ಗೆ ಉಗ್ರರು ಅಡಗಿದ್ದ ಕಟ್ಟಡವನ್ನು ಸುತ್ತುವರಿದು ದಾಳಿ ನಡೆಸುವ ವೇಳೆ 10 ಪ್ಯಾರಾ ರೆಜಿಮೆಂಟ್‌ನ ಕ್ಯಾಪ್ಟನ್ ಪವನ್ ಕುಮಾರ್ ಹುತಾತ್ಮರಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಈ ಪ್ರದೇಶದಲ್ಲಿ ಭಾರೀ ಗುಂಡಿನ ಕಾಳಗ ನಡೆಯುತ್ತಿದ್ದು, ಸುರಕ್ಷಾ ವ್ಯವಸ್ಥೆಗಾಗಿ ಶ್ರೀನಗರ-ಜಮ್ಮು ಹೆದ್ದಾರಿಯನ್ನು ಮುಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿ ನಡೆಯುತ್ತಿರುವ ಗುಂಡಿನ ಕಾಳಗದಲ್ಲಿ ಮೂವರು ಸಿಆರ್‌ಪಿಎಫ್ ನವರು ಹತರಾಗಿದ್ದಾರೆ ಎಂಬ ವರದಿಯನ್ನು ಸಿಆರ್‌ಪಿಎಫ್ ವಕ್ತಾರಹ ತಳ್ಳಿಹಾಕಿದ್ದಾರೆ.
ಇಬ್ಬರು ಪೊಲೀಸರು ಹತರಾಗಿದ್ದಾರೆ, ಆದರೆ ಮೂರು ಜನ ಹತರಾಗಿದ್ದಾರೆ ಎಂಬ ವರದಿ ಸುಳ್ಳು ಎಂದು ವಕ್ತಾರರು ಹೇಳಿದ್ದಾರೆ. ಈ ಕಾದಾಟದಲ್ಲಿ ಸಿಆರ್‌ಪಿಎಫ್‌ನ 13 ಪೊಲೀಸರಿಗೆ ಗಾಯಗಳಾಗಿದ್ದು, ಇಲ್ಲಿವರೆಗೆ ಒಟ್ಟು ಐವರು ಹತರಾಗಿದ್ದಾರೆ ಎಂದು ಬಲ್ಲಮೂಲಗಳು ವರದಿ ಮಾಡಿವೆ.