
ಮಂಗಳೂರು: ಪಂಚಾಯತ್ಗಳನ್ನು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗವಾಗಿಸುವತ್ತ ರಾಜ್ಯ ಸರ್ಕಾರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ವಿಧೇಯಕ 2015ನ್ನು ಜಾರಿಗೆ ತಂದಿದ್ದು, ಈ ತಿದ್ದುಪಡಿಯಿಂದ ಪಂಚಾಯತ್ ರಾಜ್ ಸಂಸ್ಥೆಗಳು ಬಲಗೊಳ್ಳುತ್ತವೆ, ಈ ವಿಧೇಯಕ ಗ್ರಾಮೀಣ ಆಡಳಿತಕ್ಕೆ ಅತ್ಯಂತ ಪರಿಣಾಮಕಾರಿಯಾದ ಅಸ್ತ್ರವಾಗಲಿದೆ ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫನಾಂಡಿಸ್ ಹೇಳಿದ್ದಾರೆ.
ಮಂಗಳೂರಿನ ಬೋಳಾರದಲ್ಲಿರುವ ಸಿಟಿ ಬೀಚ್ನಲ್ಲಿ ಮಧ್ಯಾಹ್ನ ಪತ್ರಿಕಾ ಗೋಷ್ಠಿಯನ್ನುದ್ದಿಶಿಸಿ ಮಾತನಾಡಿದ ಅವರು, ಪಂಚಾಯತ್ಗಳಲ್ಲಿ ಶೇ.33 ಮಹಿಳಾ ಮೀಸಲಾತಿ ಈಗಾಗಲೇ ಜಾರಿಗೆ ಬಂದಿದೆ. ನೂತನ ತಿದ್ದುಪಡಿಯಿಂದ ಶೇ.20 ರಷ್ಟು ಅಭಿವೃದ್ಧಿ ಹಣ ನೇರವಾಗಿ ಪಂಚಾಯತ್ಗಳಿಗೆ ಕೊಡಲಾಗುತ್ತದೆ. ಇದರಿಂದ ಪಂಚಾಯತ್ಗಳಲ್ಲಿ ಗ್ರಾಮ ಸಭೆಗಳಲ್ಲಿ ನಿರ್ಣಯಿಸಿದ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಗಲಿದೆ ಎಂದು ಹೇಳಿದರು.

ಪಂಚಾಯತ್ಗಳಲ್ಲಿ ಇದುವರೆಗೆ ಪ್ರತಿ ಅವಧಿಗೆ ಮೀಸಲಾತಿ ಬದಲಾಗುತ್ತಿತ್ತು. ಇನ್ನು ಮುಂದೆ ಎರಡು ಅವಧಿಗೆ ಒಮ್ಮೆ ಅಂದರೆ 10 ವರ್ಷಗಳಿಗೆ ಒಮ್ಮೆ ಮೀಸಲಾತಿ ಬದಲಾಗುತ್ತದೆ ಎಂದು ಆಸ್ಕರ್ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರಿ ಇದಕ್ಕೆ ಸಂಬಂಧಪಟ್ಟ ಪೂರಕ ಮಾಹಿತಿಗಳನ್ನು ನೀಡಿದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಬಹುಮತದೊಂದಿಗೆ ವಿಜಯಿಯಾದ ಪ್ರತಾಪ್ಚಂದ್ರ ಶೆಟ್ಟಿ ಅವರನ್ನು ಗೆಲ್ಲಿಸಿದ ಕಾಂಗ್ರೆಸ್ನ ಮತದಾರರಿಗೆ ಹಾಗೂ ಶ್ರಮಿಸಿದ ಕಾರ್ಯಕರತರಿಗೆ ಆಸ್ಕರ್ ಫನಾಂಡಿಸ್ ಹಾಗೂ ರಮಾನಾಥ ರೈ ಅವರು ಅಭಿನಂದನೆ ಸಲ್ಲಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಚಿವ ವಿನಯ ಕುಮಾರ್ ಸೊರಕೆ, ಶಾಸಕ ಜೆ. ಆರ್. ಲೋಬೊ, ಇತ್ತೀಚೆಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ವಿಜಯಿಯಾದ ಪ್ರತಾಪ್ಚಂದ್ರ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಐವನ್ ಡಿ. ಸೋಜಾ, ಮೇಯರ್ ಜೆಸಿಂತಾ ವಿಜಯ್ ಅಲ್ಪ್ರೇಡ್, ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ಮುಡಾ ಅಧ್ಯಕ್ಷ ಕೋಡಿಜಾಲ್ ಇಬ್ರಾಹಿಂ, ಉಡುಪಿ ಜಿಲ್ಲೆಯ ಕಾಂಗ್ರೆಸ್ ಮುಖಂಡ ಗಫೂರ್, ಕಾಂಗ್ರೆಸ್ ಅಲ್ಪ ಸಂಖ್ಯಾತ ಮುಖಂಡ ಬಿ. ಹೆಚ್. ಖಾದರ್ ಮುಂತಾದವರು ಉಪಸ್ಥಿತರಿದ್ದರು.