
ಮಂಗಳೂರು : ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿ ಹೊಣೆಯನ್ನು ಸಮರ್ಥವಾಗಿ ನಿಭಾಯಿಸುವುದಾಗಿ ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಕಾರ್ಯಾಕ್ರಮವೊಂದಕ್ಕೆ ಆಗಮಿಸಿದ ಅವರು ನಗರದ ಸರ್ಕಿಟ್ ಹೌಸನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮುಖ್ಯಮಂತ್ರಿ ಪರಮಾಧಿಕಾರ. ಚಿಕ್ಕಮಗಳೂರು ಜಿಲ್ಲೆ ನನಗೇನೂ ಹೊಸದಲ್ಲ. ಮುಖ್ಯಮಂತ್ರಿ ವಹಿಸಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯನ್ನು ಕೂಡಾ ಎದುರಿಸುತ್ತೇನೆ ಎಂದರು.
ಸಚಿವ ಡಿ. ವಿ. ಸದಾನಂದಗೌಡ, ಜಗದೀಶ್ ಶೆಟ್ಟರ್, ಕೆ. ಎಸ್. ಈಶ್ವರಪ್ಪ ಹಾಸ್ಯಾಸ್ಪದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರ ಟೀಕೆಗಳಿಗೆ ಉತ್ತರಿಸುವ ಅಗತ್ಯ ನನಗಿಲ್ಲ. ಮುಖ್ಯಮಂತ್ರಿಯವರನ್ನು ಶೆಟ್ಟರ್ ಸುಳ್ಳುಗಾರ ಎಂದು ಕರೆದಿದ್ದಾರೆ. ಪ್ರತಿಪಕ್ಷಗಳಿಂದ ನಾವು ಶ್ಲಾಘನೆಯನ್ನು ನಿರೀಕ್ಷಿಸುವುದಿಲ್ಲ ಎಂದು ಹೇಳಿದರು.

ಕರಾವಳಿಯಲ್ಲಿ ಕೋಮು ಸಾಮರಸ್ಯ ಕದಡುತ್ತಿದ್ದು, ಕೋಮು ಶಕ್ತಿಗಳನ್ನು ನಿಗ್ರಹಿಸಲು ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಕರಾವಳಿಯಲ್ಲಿ ಎನ್ಎಸ್ಟಿ ಮಾದರಿಯಲ್ಲಿ `ಗರುಡಾ’ ಪಡೆಗಳನ್ನು ನಿಯೋಜಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಗೃಹ ಸಚಿವರು ಮಾಹಿತಿ ನೀಡಿದರು. ಇದೇ ವೇಳೆ ಕಮ್ಯೂನಲ್ ಗೂಂಡಾಗಳನ್ನು ಹತ್ತಿಕ್ಕಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ.
ಪರಮೇಶ್ವರ್ ದ್ವಂದ್ವ ಹೇಳಿಕೆ:
ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಹೊಣೆ ಕುರಿತು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಗೃಹ ಸಚಿವ ಪರಮೇಶ್ವರ್ ಯೂ ಟರ್ನ್ ಹೊಡೆದಿದ್ದಾರೆ. ನಿನ್ನೆ ಹೆಚ್ಚುವರಿ ಹೊಣೆಗೆ ತಗಾದೆ ತೆಗೆದಿದ್ದ ಗೃಹ ಸಚಿವರು ಈಗ ಈ ಹೊಣೆಯನ್ನೂ ಸಮರ್ಥವಾಗಿ ನಿರ್ವಹಿಸುತ್ತೇನೆ ಎಂದು ಹೇಳುವ ಮೂಲಕ ಮಂಗಳೂರಿನಲ್ಲಿ ದ್ವಂದ್ವ ಹೇಳಿಕೆ ನೀಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿ ಸಚಿವರ ಹೊಣೆ ಬೇಡವೆಂದು ತಗಾದೆ ತೆಗೆದು, ತುಮಕೂರು ಜಿಲ್ಲಾ ಉಸ್ತುವಾರಿ ಹೊಣೆಯ ಆಸಕ್ತಿ ಹೊಂದಿದ್ದ ಡಾ. ಪರಮೇಶ್ವರ್ ಇಂದು ಬೇರೆಯದ್ದೇ ಹೇಳಿಕೆ ನೀಡಿದ್ದಾರೆ.
ಮಾತ್ರವಲ್ಲದೇ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸುವುದು ಸಿಎಂ ಪರಮಾಧಿಕಾರ. ಚಿಕ್ಕಮಗಳೂರು ಜಿಲ್ಲೆ ನನಗೇನೂ ಹೊಸದಲ್ಲ. ಸಿಎಂ ನೀಡಿದ ಈ ಹೊಣೆಯನ್ನು ಚೆನ್ನಾಗಿ ನಿಭಾಯಿಸುತ್ತೇನೆ. ಅಲ್ಲದೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯನ್ನೂ ಎದುರಿಸುತ್ತೇನೆ ಎಂದು ಪರಮೇಶ್ವರ್ ಹೇಳಿದ್ದಾರೆ
ಪತ್ರಿಕಾಗೋಷ್ಠಿಯಲ್ಲಿ ದ. ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಶಾಸಕ ಜೆ. ಆರ್. ಲೋಬೊ, ವಿಧಾನ ಪರಿಷತ್ ಸದಸ್ಯ ಐವನ್ ಡಿ. ಸೋಜಾ, ಕಾಂಗ್ರೆಸ್‌ನ ದ. ಕ. ಜಿಲ್ಲಾ ಉಸ್ತುವಾರಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮುಂತಾದವರು ಉಪಸ್ಥಿತರಿದ್ದರು.