ನವದೆಹಲಿ: ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಫೇಸ್ಬುಕ್ ಮತ್ತು ಟ್ವಿಟ್ಟರ್ ಖಾತೆಗಳನ್ನು ಸ್ವತಃ ನಿಭಾಯಿಸುತ್ತಾರೆ, ಸ್ವತಃ ಅಪ್ಡೇಟ್ ಮಾಡುತ್ತಾರೆ. ಈ ಕೆಲಸ ಮಾಡುವಲ್ಲಿ ನೆರವಾಗಲು ಅವರಿಗೆ ಯಾರೇ ಸಹಾಯಕರೂ ಇಲ್ಲ.
ಈ ವಿಚಾರವನ್ನು ಪ್ರಧಾನ ಮಂತ್ರಿಗಳ ಸಚಿವಾಲಯ (ಪಿಎಂಒ) ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ನೀಡಿದ ಮಾಹಿತಿಯೊಂದರಲ್ಲಿ ಬಹಿರಂಗ ಪಡಿಸಿದೆ.
ಸಾಮಾನ್ಯವಾಗಿ ಗಣ್ಯ ವ್ಯಕ್ತಿಗಳು, ಸೆಲೆಬ್ರಿಟಿಗಳು ತಮ್ಮ ಫೇಸ್ಬುಕ್, ಟ್ವಿಟ್ಟರ್ ಖಾತೆಗಳನ್ನು ನಿಭಾಯಿಸಲು ಸಹಾಯಕರನ್ನು ಇರಿಸಿಕೊಂಡಿರುತ್ತಾರೆ. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರು ಈ ಕೆಲಸಕ್ಕಾಗಿ ನುರಿತ ಸಿಬ್ಬಂದಿಯ ತಂಡವನ್ನೇ ಇರಿಸಿಕೊಂಡಿದ್ದಾರೆ. ಆದರೆ ಪ್ರಧಾನಿ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ನಮ್ಮ ಪ್ರಧಾನಿಯ ಕೇಸ್ ಇದಕ್ಕೆ ತದ್ವಿರುದ್ಧ.
ಮೋದಿ ಅವರನ್ನು ಬೆಂಬಲಿಸುವವರ ಸಂಖ್ಯೆ ಟ್ವಿಟ್ಟರ್ ಖಾತೆಯಲ್ಲಿ ಈಗ 1.68 ಕೋಟಿ. ಫೇಸ್ ಬುಕ್ ಪುಟದಲ್ಲಿ ಅವರು ಸುಮಾರು 314.90 ಕೋಟಿ ಲೈಕ್ ಗಿಟ್ಟಿಸಿಕೊಳ್ಳುತ್ತಾರೆ. ಆದರೆ, ಪ್ರಧಾನಿಯವರ ಅಧಿಕೃತ ಫೇಸ್ಬುಕ್ ಮತ್ತು ಟ್ವಿಟ್ಟರ್ ಖಾತೆಯನ್ನು ಮಾತ್ರ ತಾನು (ಪಿಎಂಒ) ನಿಭಾಯಿಸುತ್ತಿರುವುದಾಗಿ ಸಚಿವಾಲಯ ಹೇಳಿದೆ.