ಕುಂದಾಪುರ: ಡಿ.27 ರಂದು ನಡೆಯುವ ವಿಧಾನಪರಿಷತ್ನ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಪಕ್ಷದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿವರಿಗೆ ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಲು ಹಾಗೂ ಉಳಿದಂತೆ ದ್ವಿತೀಯ ಹಾಗೂ ತೃತೀಯ ಪ್ರಾಶಸ್ತ್ಯದ ಮತಗಳನ್ನು ಯಾವ ಅಭ್ಯರ್ಥಿಗಳಿಗೂ ನೀಡದಂತೆ ಪಕ್ಷದಿಂದ ಆಯ್ಕೆಯಾಗಿರುವ ಹಾಗೂ ಪಕ್ಷದ ಬೆಂಬಲಿತ ಮತದಾರರಿಗೆ ಸ್ವಷ್ಟವಾದ ಸೂಚನೆಯನ್ನು ನೀಡಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ್ ಹೆಗ್ಡೆ ತಿಳಿಸಿದ್ದಾರೆ.
ಭಾನುವಾರ ಇಲ್ಲಿನ ಖಾಸಗಿ ಹೋಟೇಲ್ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಈ ಬಾರಿಯ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಲ್ಲಿಯೇ ವಿಶಿಷ್ಠವಾದ ಹಿನ್ನೆಲೆಯನ್ನು ಹೊಂದಿರುವ ಕೋಟ ಶ್ರೀನಿವಾಸ ಪೂಜಾರಿಯವರು ತ್ರಿಸ್ತರ ಪಂಚಾಯತ್ನ ಎಲ್ಲ ಹಂತದ ಜನಪ್ರತಿನಿಧಿಗಳಾಗಿ ಸೇವೆ ಸಲ್ಲಿಸಿದವರು. ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ವಿಧಾನಪರಿಷತ್ನ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಅವರ ಅನುಭವ ಹಾಗೂ ಅವರಲ್ಲಿನ ತರ್ಕಬದ್ದ ವಿಚಾರ ಮಂಡನೆಯ ಕಾರಣಗಳಿಂದಾಗಿ ಪಕ್ಷ 3 ನೇ ಅವಧಿಗೂ ಅವರನ್ನೆ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ದ.ಕ ಮತ ಕ್ಷೇತ್ರದಲ್ಲಿ ಬಿಜೆಪಿ ಪರವಾಗಿ ಇರುವ ಅಂದಾಜು 3600 ಮತಗಳು ಸೇರಿ 4000 ಕ್ಕಿಂತಲೂ ಅಧಿಕ ಮತಗಳನ್ನು ಗಳಿಸಿ ಪೂಜಾರಿಯವರು ಈ ಬಾರಿ ಆಯ್ಕೆಯಾಗುವ ವಿಶ್ವಾಸ ಇದೆ. ಕಾಂಗ್ರೆಸ್ ಪಕ್ಷದಲ್ಲಿ ಇರುವ ಗೊಂದಲಗಳು ನಮಗೆ ಅನೂಕೂಲ ಕಲ್ಪಿಸಲಿದೆ ಎಂದು ಹೇಳಿದ ಅವರು ಮತದಾರರಿಗೆ ಹಣದ ಅಮೀಷ ಒಡ್ಡುವ ಬಗ್ಗೆ ಗುಮಾನಿಗಳಿದ್ದು, ಇದಕ್ಕೆ ಯಾರು ಬಲಿಯಾಗದಂತೆ ಮನವಿ ಮಾಡಿದರು.
ಬಿಜೆಪಿ ಪಕ್ಷದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರು ಕಳೆದ ಎರಡು ಅವಧಿಯಲ್ಲಿ ವಿಧಾನಪರಿಷತ್ನ ಸದಸ್ಯನಾಗಿ ಸ್ಥಳೀಯಾಡಳಿತವನ್ನು ಪ್ರತಿನಿಧಿಸುವ ಅವಕಾಶ ದೊರೆಕಿದ್ದಾಗ, ಸ್ಥಳೀಯ ಸಂಸ್ಥೆಗಳ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ. ಪಂಚಾಯಿತಿ ಸದಸ್ಯರಿಗೆ ಗೌರವ ಧನ ನೀಡುವ ಐತಿಹಾಸಿಕ ತೀರ್ಮಾನವಾಗಿರುವುದು ಬಿಜೆಪಿ ಸರ್ಕಾರದ ಅವಧಿಯಲ್ಲಿ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಸ್ಥಳೀಯಾಡಳಿತಗಳಿಗೆ ಸ್ವಾಯತ್ತೆ ನೀಡಬೇಕು ಎನ್ನುವ ಸಂವಿಂಧಾನದ 73 ನೇ ತಿದ್ದಪಡಿಯಲ್ಲಿ ಹೇಳಲಾದ ಎಲ್ಲ ಅಂಶಗಳು ಇನ್ನೂ ಜಾರಿಯಾಗದೆ ಇರುವ ಕುರಿತು ಬೇಸರವಿದೆ. ಪಂಚಾಯಿತಿಗಳ ಅಭಿವೃದ್ದಿಗೆ ಪೂರಕವಾಗಿ ಕೊಡ್ಗಿಯವರ ನೇತ್ರತ್ವದ 3ನೇ ಹಣಕಾಸು ಆಯೋಗದ ವರದಿಯಲ್ಲಿನ ಕೆಲವು ಅಂಶಗಳು ಈಗಾಗಲೆ ಜಾರಿಯಾಗಿದೆ. ಶಾಸಕ ರಮೇಶ್ ಕುಮಾರ ಅವರ ವರದಿಯಲ್ಲಿ ಹೆಚ್ಚಿನ ಅಂಶಗಳನ್ನು ಜಾರಿಗೊಳಿಸಲು ಸರ್ಕಾರ ತೀರ್ಮಾನಿಸಿರುವುದರಿಂದ ಈ ಎರಡು ವರದಿಗಳ ಸಮಗ್ರ ಅನುಷ್ಠಾನದ ಕುರಿತು ವಿಧಾನ ಮಂಡಲದ ಒಳಗೆ ಹಾಗೂ ಹೊರಗೆ ಪ್ರಾಮಾಣಿಕವಾಗಿ ಹೋರಾಟ ನಡೆಸಲು ಬದ್ದನಿರುವುದಾಗಿ ತಿಳಿಸಿದರು.
ಬೈಂದೂರು ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಬಿ.ಎಂ ಸುಕುಮಾರ ಶೆಟ್ಟಿ, ರಾಜ್ಯ ಬಿಜೆಪಿಯ ಶ್ಯಾಮಲಾ ಕುಂದರ್, ಜಿಲ್ಲಾ ಬಿಜೆಪಿಯ ಪ್ರಮುಖರಾದ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಹೇಶ್ ಪೂಜಾರಿ ಕೋಡಿ, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ದೀಪಕ್ಕುಮಾರ ಶೆಟ್ಟಿ, ಕುಂದಾಪುರ ಕ್ಷೇತ್ರ ಸಮಿತಿಯ ಅಧ್ಯಕ್ಷ ರಾಜೇಶ್ ಕಾವೇರಿ, ಗುರುರಾಜ್ ಗಂಟಿಹೊಳೆ ಇದ್ದರು.